ಭಟ್ಕಳ: ನಾಮಧಾರಿ ಸಮಾಜದ ಕುಲಗುರುಗಳಾದ ಧರ್ಮಸ್ಥಳದ ಉಜಿರೆ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಅವರಿಗೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಉತ್ತರ ಭಾರತದ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಅತ್ಯುನ್ನತ ಹುದ್ದೆಯಾದ ಮಹಾಮಂಡಲೇಶ್ವರ ಪದವಿಯ ಪಟ್ಟಾಭಿಷೇಕ ಜುನಾ ಅಖಾಡದ ಮೂಲಕ ನೆರವೇರಿತು.
ಶ್ರೀಗಳು ಮುಂದೆ ದೇಶದಾದ್ಯಂತ ಧರ್ಮ ಪ್ರಚಾರದ ಜತೆಗೆ ಆಧ್ಯಾತ್ಮದ ಉನ್ನತ ಸಾಧನೆಗಾಗಿ ಧಾರ್ಮಿಕ ಮೌಲ್ಯಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲು ಅರ್ಹತೆ ಉಳ್ಳವರಾಗಿದ್ದಾರೆ ಎಂದು ಪರಿಗಣಿಸಿ ನಾಗಾಸಾಧು ಸನ್ಯಾಸಿ ಪರಂಪರೆಯಲ್ಲಿ ಜುನಾ ಅಖಾಡ ಈ ಜವಾಬ್ದಾರಿ ವಹಿಸಿದೆ.
ಅಂತಾರಾಷ್ಟ್ರೀಯ ಜುನಾ ಅಖಾಡದ ಅಧ್ಯಕ್ಷ ಹರಿಗಿರಿ ಮಹಾರಾಜ್, ಜುನಾ ಅಖಾಡ ಉಪಾಧ್ಯಕ್ಷ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಜುನಾ ಅಖಾಡದ ಉತ್ತರಾಖಂಡ ಮಹಾಮಂತ್ರಿ ದೇವಾನಂದ ಮಹಾರಾಜ್, ಕೋಶಾಧಿಕಾರಿ ಧೀರತ್ ಗಿರಿ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಟ್ರಸ್ಟಿ ತುಕಾರಾಮ ಸಾಲ್ಯಾನ್, ಭಟ್ಕಳದ ಸಾರದಹೊಳೆ ಹಳೇಕೋಟೆ ಹನುಮಂತ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಪೃಥ್ವಿ, ಗೋವಿಂದ ನಾಯ್ಕ ಭಟ್ಕಳ, ಮುಕುಂದ ನಾಯ್ಕ ಭಟ್ಕಳ, ಗಣೇಶ ಹರಿಕಾಂತ ಮುರ್ಡೇಶ್ವರ, ಉಕ ಜಿಲ್ಲೆಯ ಶ್ರೀರಾಮಕ್ಷೇತ್ರ ಸೇವಾ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.