ಬ್ರಾಹ್ಮಣ ಕೃಷಿಕ, ಪುರೋಹಿತರಿಗೆ ಕನ್ಯಾದಾನ ಮಾಡಿ

KannadaprabhaNewsNetwork |  
Published : Oct 14, 2025, 01:01 AM IST
13ಡಿಡಬ್ಲೂಡಿ2ಧಾರವಾಡದಲ್ಲಿ ಸೋಮವಾರ  ಶುಕ್ಲಯಜುರ್ವೇದಿಯರ ರಾಜ್ಯಮಟ್ಟದ‌ ಸಮ್ಮೇಳನದ‌ ಉದ್ಘಾಟನೆ ಸಮಾರಂಭ.  | Kannada Prabha

ಸಾರಾಂಶ

ಬ್ರಾಹ್ಮಣರಲ್ಲಿ ಅನೇಕ ಪಂಗಡಗಳಿದ್ದರೂ ಅವರಿಗೆಲ್ಲ ವೇದವೇ ಮೂಲ. ಅಕ್ಷಂತಿಗೂ, ಭಸ್ಮಕ್ಕೂ ಯಾವುದೇ ಭೇದವಿಲ್ಲ. ಇದನ್ನು ಅರಿತು ಎಲ್ಲರೂ ವರ-ಕನ್ಯೆಯರ ಸಂಬಂಧ ಬೆಳೆಸಬೇಕು.

ಧಾರವಾಡ:

ಯುವ ಬ್ರಾಹ್ಮಣ ಕೃಷಿಕರು, ಪಂಡಿತರು, ಪುರೋಹಿತರಿಗೆ ಕನ್ಯಾಪಿತೃಗಳು ಕನ್ಯಾದಾನ ಮಾಡಿ ಬ್ರಾಹ್ಮಣ ಸಮಾಜದ ಪ್ರಗತಿಗೆ ಕೊಡುಗೆ ನೀಡಬೇಕೆಂದು ಹುಣಸಿಹೊಳೆ ಕಣ್ವಮಠದ ವಿದ್ಯಾ ಕಣ್ವ ವಿರಾಜ ತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿಯ ಶ್ರೀಶಂಕರಾಚಾರ್ಯ ಮಠದಲ್ಲಿ ಶುಕ್ಲಯಜುರ್ವೇದಿಯರ ರಾಜ್ಯಮಟ್ಟದ ವಿಪ್ರೋತ್ಸವವನ್ನು ಸೋಮವಾರ ಉದ್ಘಾಟಿಸಿದ ಅವರು, ಸಮಾಜದಲ್ಲಿ ಯುವಜನರ ಮದುವೆ ಸಮಸ್ಯೆ ಎಲ್ಲರನ್ನೂ ಕಾಡುತ್ತಿದೆ. ಬರೀ ವೈದ್ಯರು, ಇಂಜಿನಿಯರ್‌ಗಳಷ್ಟೇ ಸಮಾಜದಲ್ಲಿ ಇಲ್ಲ. ಉತ್ತಮ ನಡತೆಯ ಕೃಷಿಕರು, ಪಂಡಿತರು, ವಕೀಲರು, ಖಾಸಗಿ ಉದ್ಯೋಗ ಮಾಡುವ ಅನೇಕ ಬ್ರಾಹ್ಮಣ ಯುವಜನರಿದ್ದಾರೆ. ಬ್ರಾಹ್ಮಣ ಕನ್ಯೆ ಮತ್ತು ಪಾಲಕರು ಅವರನ್ನು ತಿರಸ್ಕರಿಸುತ್ತಿರುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದರು.

ಬ್ರಾಹ್ಮಣರಲ್ಲಿ ಅನೇಕ ಪಂಗಡಗಳಿದ್ದರೂ ಅವರಿಗೆಲ್ಲ ವೇದವೇ ಮೂಲ. ಅಕ್ಷಂತಿಗೂ, ಭಸ್ಮಕ್ಕೂ ಯಾವುದೇ ಭೇದವಿಲ್ಲ. ಇದನ್ನು ಅರಿತು ಎಲ್ಲರೂ ವರ-ಕನ್ಯೆಯರ ಸಂಬಂಧ ಬೆಳೆಸಬೇಕೆಂದು ಕರೆ ನೀಡಿದರು.

ಬ್ರಾಹ್ಮಣ ಕೃಷಿಕರನ್ನು ಸನ್ಮಾನಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಕೃಷಿಕರು, ಪಂಡಿತರು, ವಕೀಲರು, ಅಧ್ಯಾಪಕರು, ಖಾಸಗಿ ಉದ್ಯೋಗ ಮಾಡುವವರಿಗೆ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಟ್ಟ ಪಾಲಕರಿಗೆ ಮುಂದಿನ ಸಮ್ಮೇಳನದಲ್ಲಿ ಸನ್ಮಾನಿಸಬೇಕೆಂದು ಸಂಘಟಕರಿಗೆ ಸೂಚಿಸಿದರು. ಬ್ರಾಹ್ಮಣ ಕೃಷಿಕರನ್ನು, ಸಾಧಕರನ್ನು ಸತ್ಕರಿಸಲಾಯಿತು. ಗುರ್ಲಹೊಸೂರಿನ ದಂಡಪಾಣಿ ದೀಕ್ಷಿತರು ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮೀಕಾಂತ, ಎಸ್. ಗೋಪಿನಾಥ ಮಾತನಾಡಿದರು. ಪ್ರಮೋದ ತಮ್ಮಣ್ಣವರ, ದುಷ್ಯಂತ ನಾಡಗೌಡ, ಆರ್.ಕೆ. ಮುಳಗುಂದ, ಜಿ.ಕೆ. ಕುಲಕರ್ಣಿ, ಶಂಕರಭಟ್ಟ ಜೋಶಿ, ಶ್ರೀ ಕೃಷ್ಣ ಸಂಪಗಾಂವಕರ, ಮೋಹನ ದೀಕ್ಷಿತರು, ನೀಲಕಂಠ ದೀಕ್ಷಿತರು, ಹನುಮಂತ ಟಕ್ಕಳಕಿ, ದತ್ತಪಯ್ಯ ಸ್ವಾಮೀಜಿ, ವೆಂಕಣ್ಣ ಜೋಶಿ, ನಟೇಶ ಸ್ವಾಮೀಜಿ, ಚಿದಂಬರ ದೀಕ್ಷಿತ, ಅರವಿಂದ ಪೂಜಾರ, ಎಂ.ಜಿ. ದೇಶಪಾಂಡೆ, ಶಂಕರ ಪಾಟೀಲ, ಅನಂತ ಕುಲಕರ್ಣಿ, ವೆಂಕಟೇಶ ಶಿವಪೂಜಿ ಇದ್ದರು.

ಮದಿಹಾಳದ ಕಾತ್ಯಾಯಿನಿ ಮಹಿಳಾ‌ ಮಂಡಳದವರು ಪ್ರಾರ್ಥಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಸಿ.ಆರ್. ಜೋಶಿ ಸ್ವಾಗತಿಸಿದರು. ಸಂಚಾಲಕ ನರಸಿಂಹ ಸೋಮಲಾಪುರ ಪ್ರಾಸ್ತಾವಿಕ ಮಾತನಾಡಿದರು. ಡಾ. ಜಿ.ಎಂ. ಪಾಟೀಲ ನಿರೂಪಿಸಿದರು. ಸತ್ಯನಾರಾಯಣಾಚಾರ್ಯ ವಂದಿಸಿದರು.

ಬ್ರಾಹ್ಮಣರಲ್ಲಿ ಅತಿ ಹೆಚ್ಚು ಡೈವೋರ್ಸ್ಬ್ರಾಹ್ಮಣ ಸಮುದಾಯದಲ್ಲೇ ಎಲ್ಲರಿಗಿಂತ ಅತಿ ಹೆಚ್ಚು ವಿವಾಹ ವಿಚ್ಚೇದನ ಪ್ರಕರಣಗಳು ನ್ಯಾಯಾಲಯದಲ್ಲಿ ದಾಖಲಾಗಿವೆ. ಇದಕ್ಕೆ ಜವಾಬ್ದಾರರು ಯಾರು ಎಂದು ನಿವೃತ್ತ ಎಂಜಿನಿಯರ್, ಬೆಳಗಾವಿಯ ವಿ.ಎನ್. ಪಾಟೀಲ ಎತ್ತಿದ ಪ್ರಶ್ನೆಯು ಇಲ್ಲಿ ನಡೆದಿರುವ ಶುಕ್ಲಯಜುರ್ವೇದಿಯರ ರಾಜ್ಯಮಟ್ಟದ ವಿಪ್ರೋತ್ಸವದಲ್ಲಿ ಬಿಸಿಬಿಸಿ ಚರ್ಚೆಗೆ ಎಡೆಮಾಡಿಕೊಟ್ಟಿತು. ‌ಸೋಮವಾರ ಮಧ್ಯಾಹ್ನ‌ ನಡೆದ ಧಾರ್ಮಿಕ ಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಪಾಟೀಲ, ವಿದೇಶದಲ್ಲಿರುವ ಬ್ರಾಹ್ಮಣ ಯುವಕರು ಇಲ್ಲಿ ತಮ್ಮ ತಂದೆ-ತಾಯಿ ತೀರಿಕೊಂಡಾಗ ಪರಿಚಯದವರಿಗೆ ಫೋನ್‌ ಮಾಡಿ ಎಲ್ಲ ಸಂಸ್ಕಾರ ಮಾಡಿಬಿಡಿ. ಎಷ್ಟು ವೆಚ್ಚ ತಿಳಿಸಿ ಕೊಡುತ್ತೇವೆ ಎನ್ನುತ್ತಾರೆ ಎಂದು ಉದಾಹರಣೆಗಳ‌ ಮೂಲಕ ವಿವರಿಸಿ ಬ್ರಾಹ್ಮಣ ಸಂಪ್ರದಾಯವು ಹೇಗೆ ಈ ಎರಡು ವಿಷಯಗಳಿಂದ ಅಧೋಗತಿಗೆ ಇಳಿಯುತ್ತದೆ ಎಂಬುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು.ಬ್ರಾಹ್ಮಣರು ಜಪ, ತಪ ಅನುಷ್ಠಾನಗಳಿಂದ ದೂರ ಉಳಿದಿದ್ದು ಮತ್ತು ಮಕ್ಕಳಿಗೂ ಅದನ್ನು ಕಲಿಸದೇ ಇದ್ದುದೇ ಇದಕ್ಕೆ ಕಾರಣ ಎಂದರು.

ತ್ರಿಕಾಲ ಸಂಧ್ಯಾವಂದನೆ ಮಾಡದೇ ಇರುವುದೇ ಬ್ರಾಹ್ಮಣತ್ವವು ಕ್ಷೀಣಿಸಲು ಕಾರಣ ಎಂದು ಉಪನ್ಯಾಸ‌ ನೀಡಿದ ಭಾಸ್ಕರ ಶರ್ಮಾ ಹೇಳಿದರು.ಮಗನ ಉಪನಯನ ಸಂದರ್ಭದಲ್ಲಿ ಒಬ್ಬ ಬ್ರಾಹ್ಮಣ ದೇವರ ಎದುರು ಕುಳಿತು ಪುಣ್ಯಾಹವಾಚನ‌ ಮಾಡುವಾಗ‌ ಮಗನಿಗೆ ವೇದಾಧ್ಯಯನ‌ ಕಲಿಸುತ್ತೇನೆ ಎಂದು ಅಗ್ನಿಸಾಕ್ಷಿಯಾಗಿ ಪ್ರಮಾಣ‌ ಮಾಡುತ್ತಾನೆ. ಆದರೆ, ಮರುದಿನವೇ ಮಗನನ್ನು ಇಂಗ್ಲಿಷ್‌ ಮಾಧ್ಯಮ‌ ಶಾಲೆಗೆ ಕಳುಹಿಸುತ್ತಾನೆ. ಇದೆಂಥ ವಿಪರ್ಯಾಸ ಎಂದು ಪ್ರಶ್ನಿಸಿದ ಅವರು, ಗಾಯತ್ರಿ‌ ಮಂತ್ರ ಮಾಡುತ್ತ‌‌ ಹೋದರೆ ಬ್ರಾಹ್ಮಣರಿಗೆ ಅದೇ ದಾರಿ ತೋರಿಸುವುದು ಎಂದರು.

ಗಾಯತ್ರಿ‌ ಮಂತ್ರವೆಂದರೆ ಅದೊಂದು ತಂತ್ರ. ಸಾಫ್ಟವೇರ್ ಇದ್ದ ಹಾಗೆ. ದೇಹದಲ್ಲಿರುವ ಏಳು ಚಕ್ರಗಳನ್ನು ಚಾಲನೆಗೊಳಿಸಲು ಸಂಧ್ಯಾವಂದನೆ ಒಂದು ದಾರಿ ಅಗತ್ಯ ಎಂದು ಡಾ. ಚಿದಂಬರ ಟಕ್ಕಳಕಿ ಹೇಳಿದರು.‌ಮಂಜುನಾಥ ಶರ್ಮಾ, ಭುಜಂಗ ಶರ್ಮಾ ಉಪನ್ಯಾಸ ನೀಡಿದರು. ಸಿ.ಆರ್. ಜೋಶಿ, ಶಂಕರಭಟ್ಟ ಜೋಶಿ ಉಪಸ್ಥಿತರಿದ್ದರು. ಗುರ್ಲಹೊಸೂರಿನ ಪ್ರಸನ್ನ ಸುಂದರೇಶ ದೀಕ್ಷಿತರು ಸಾನ್ನಿಧ್ಯ ವಹಿಸಿದ್ದರು. ಕರ್ಕಿಹಳ್ಳಿಯ ಸಂತ ಶ್ರೇಷ್ಢ ಸುರೇಶ ಬಾಬು ಪಾಟೀಲ ಗುರೂಜಿ ಆಶೀರ್ವಚನ ನೀಡಿದರು.

PREV

Recommended Stories

ದೀಪಾವಳಿ ಹಬ್ಬ : ಕೆಎಸ್ಸಾರ್ಟಿಸಿಯಿಂದ 2500 ಹೆಚ್ಚುವರಿ ಬಸ್‌
ಆರೆಸ್ಸೆಸ್‌ ಚಟುವಟಿಕೆ ನಿಷೇಧ ಬಗ್ಗೆ ತಮಿಳುನಾಡು ಮಾದರಿ ಪರಿಶೀಲನೆ : ಸಿದ್ದರಾಮಯ್ಯ