ದೇಶದ ಅಭಿವೃದ್ಧಿಗೆ ಬ್ರಾಹ್ಮಣರ ಕೊಡುಗೆ ಅಪಾರ: ವಸಂತಕುಮಾರ

KannadaprabhaNewsNetwork | Updated : Jul 01 2024, 01:53 AM IST

ಸಾರಾಂಶ

ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಎಂಎಲ್ಸಿ ಎ.ವಸಂತ ಕುಮಾರ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಶೈಕ್ಷಣಿಕ, ಕಲೆ, ಸಂಗೀತ ಹಾಗೂ ಆಡಳಿತ ಸೇರಿ ವಿವಿಧ ಕ್ಷೇತ್ರದಲ್ಲಿ ಬ್ರಾಹ್ಮಣರು ಇತರರಿಗಿಂತ ಒಂದು ಕೈ ಮುಂದೆ ಇರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್‌ ಸದಸ್ಯ ಎ.ವಸಂತ ಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳೀಯ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಸಮಿತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ವಿಪ್ರಶ್ರೀ ಪ್ರಶಸ್ತಿ ಪ್ರದಾನ ಹಾಗೂ ವಿದ್ಯಾನಿಧಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಸಂಸ್ಕೃತಕ್ಕೆ ಹೆಸರುವಾಸಿಯಾಗಿರುವ ಬ್ರಾಹ್ಮಣ ಸಮಾಜದವರು ಜನಸಂಖ್ಯೆಯಲ್ಲಿ ಕಡಿಮೆಯಿದ್ದರು ಸಹ ಎಲ್ಲ ಕ್ಷೇತ್ರಗಳಲ್ಲಿ ಅಪಾರ ಸಾಧನೆಯನ್ನು ಮಾಡಿದ್ದಾರೆ. ಹಿಂದಿನಿಂದಲೂ ಸಮಾಜದ ಶ್ರೇಯಸ್ಸಿಗಾಗಿ ಶ್ರಮಿಸುತ್ತಾ ಬಂದಿದ್ದು, ದೇಶದ ಅಭಿವೃದ್ಧಿಯಲ್ಲಿ ಇವರ ಕೊಡುಗೆ ಅಪಾರವಾಗಿದೆ ಎಂದರು.

ವಿಶೇಷ ಉಪನ್ಯಾಸ ನೀಡಿದ ವಾಗ್ಮಿ ಆಧ್ಯಾತ್ಮಕ ಚಿಂತಕಿ ಡಾ.ವೀಣಾ ಬನ್ನಂಜೆ ಮಾತನಾಡಿ, ಇಂದಿನ ಶಿಕ್ಷಣ ನಮ್ಮನ್ನು ಪ್ರಪಾತಕ್ಕೆ ದೂಡುತ್ತಿದೆ. ಕೇವಲ ಅಹಂಕಾರ, ಹೆಚ್ಚಿನ ಸಂಬಳ, ಉದ್ಯೋಗ, ಸಾಮಾಜಿಕ ಪ್ರತಿ ಷ್ಠೆಯನ್ನು ಬೆಳೆಸುವ ಸಾಧ್ಯತೆಯುಳ್ಳ ಶಿಕ್ಷಣವಾಗಿದೆ. ಅಂತರಂಗದಿಂದ ಒಳಿತಾಗುವುದು, ಸಾತ್ವಿಕತೆ, ಸಮಾ ಜದಲ್ಲಿ ಹೇಗೆ ಒಳ್ಳೆಯಯವರಾಗಬೇಕು? ಸೇವೆ ಹೇಗೆ ಮಾಡಬೇಕು? ಎಂಬುದನ್ನು ಇಂದಿನ ಶಿಕ್ಷಣ ಕಲಿಸುತ್ತಿಲ್ಲ. ಆ ಶಿಕ್ಷಣ ಕಲ್ಪಿಸುವುದು ಕೇವಲ ಧರ್ಮ ಮಾತ್ರ. ಆದರೆ ಈ ಧರ್ಮ ಇಂದು ಉಳಿದಿಲ್ಲ ಎಂದು ಹೇಳಿದರು.

ಮಹಾಸಭಾದ ಪ್ರಧಾನ ಸಂಚಾಲಕ ಡಿ.ಕೆ ಮುರಳೀಧರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ, ವಿಪ್ರ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ಯೋಜನೆಯಡಿಯಲ್ಲಿ ವಿದ್ಯಾರ್ಥಿವೇತನ ವಿತರಣೆ ಹಾಗೂ ಡಾ.ವಿ.ಜಿ ಕುಲಕರ್ಣಿ ಹಾಗೂ ದಾಸ ಸಾಹಿತಿ ತ್ರಿವೇಣಿಬಾಯಿ ಆಶ್ರಿತ್‌ಗೆ ಈ ಬಾರಿಯ ‘ವಿಪ್ರಶ್ರೀ’ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಸಮಾಜದ ರಾಜ್ಯ ಪರಿಷತ್ನ ಸದಸ್ಯ ನರಸಿಂಗರಾವ್ ದೇಶಪಾಂಡೆ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ಡಾ.ಆನಂದ ತೀರ್ಥ ಫಡ್ನೀಸ್, ರಾಜ್ಯ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ, ಗಿರೀಶ ಕನಕವೀಡು, ಪ್ರಹ್ಲಾದ್‌ರಾವ್ ಕುಲಕರ್ಣಿ, ರಾಘವೇಂದ್ರರಾವ್ ವಕೀಲ ಕಲ್ಮಲಾ, ಪದಾಧಿಕಾರಿಗಳಾದ ರಾಮರಾವ್ ಕುಲಕರ್ಣಿ ಗಣೇಕಲ್, ರಮೇಶ ಕುಲಕರ್ಣಿ, ವೆಂಕಟೇಶ ಕೋಲಾರಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article