ಬಳ್ಳಾರಿ: ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳಡಿ ವಿಶೇಷಚೇತನರಿಗಾಗಿಯೇ ಮೀಸಲಿರಿಸಿದ ಶೇ.5 ಅನುದಾನ ಪರಿಪೂರ್ಣವಾಗಿ ಬಳಸಿ, ಅವರ ಏಳ್ಗೆಗಾಗಿ ಅಧಿಕಾರಿಗಳು ಕಾಳಜಿ ವಹಿಸಬೇಕು ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ ಅನುಷ್ಠಾನದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.
ವಿಶೇಷಚೇತನರಿಗೆ ಶಿಕ್ಷಣ ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಯ ಅಡಿಪಾಯವಾಗಿದೆ. ಜಿಲ್ಲೆಯಲ್ಲಿನ ಶಾಲೆಗಳಲ್ಲಿ ದೃಷ್ಟಿಹೀನ ಮತು ಕಿವುಡ ವಿದ್ಯಾರ್ಥಿಗಳಿಗೆ ಬ್ರೈಲ್ ಸ್ಪರ್ಶ ಬರವಣಿಗೆ ವ್ಯವಸ್ಥೆ ಮಾಡಬೇಕು. ಇದರಿಂದ ಸ್ಪರ್ಶದ ಮೂಲಕ ಓದಲು ಮತ್ತು ಬರೆಯಲು ಅನುವು ಮಾಡಿಕೊಡುತ್ತದೆ. ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುತ್ತಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಜ್ಯ ಸರ್ಕಾರ ಅಧೀನದಲ್ಲಿರುವ ಸುಮಾರು 900 ವಸತಿ ಶಾಲೆಗಳಲ್ಲಿ ಶೇ.25 ಪ್ರತಿಶತ ಅಂಗವಿಕಲತೆ ಹೊಂದಿದ ಮಕ್ಕಳಿಗೆ ಶೇ. 10ರಷ್ಟು ಸೀಟ್ ಮೀಸಲಾತಿ ಇರಿಸಿ ಉಚಿತ ಶಿಕ್ಷಣ ನೀಡಲು ಅವಕಾಶವಿದೆ ಎಂದು ತಿಳಿಸಿದರು. ಬ್ರೈಲ್ ಲಿಪಿ ಕಲಿತ ಅಂಧರು ಸುಮಾರು 12 ಐಎಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಣ ಪಡೆಯುವ ಮೀಸಲಾತಿ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ನೇಮಕಾತಿಯಲ್ಲಿ ಅಂಗವಿಕಲರಿಗಾಗಿಯೇ ಇರುವ ಶೇ.4ರಿಂದ 5ರಷ್ಟು ಮೀಸಲಾತಿ ಇದೆ ಎಂದು ತಿಳಿಸಿದರು.ಪ್ರವಾಸಿ ತಾಣ, ಶಾಲಾ-ಕಾಲೇಜು, ಉದ್ಯಾನವನ, ಪೊಲೀಸ್ ಠಾಣೆ, ಸಾರ್ವಜನಿಕ ಸ್ಥಳ ಸೇರಿದಂತೆ ಸರ್ಕಾರದ ಎಲ್ಲ ಕಚೇರಿಗಳಲ್ಲಿ ವಿಕಲಚೇತನರ ಸ್ನೇಹಿ ವಾತಾವರಣ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ಆದೇಶವಿದೆ. ಆಯಾ ಸ್ಥಳಗಳಲ್ಲಿ ಅಂಗವಿಕಲರ ಓಡಾಟಕ್ಕೆ ಸುಲಭ ದಾರಿ, ವ್ಹೀಲ್‌ಚೇರ್ ವ್ಯವಸ್ಥೆ, ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾತನಾಡಿ, ವಿಶೇಷಚೇತನರಿಗೆ ಮಾಸಾಶನ ಸೌಲಭ್ಯ ಪಡೆಯಲು ಮತ್ತು ಪಿಂಚಣಿ ಪಡೆಯಲು ವಿಳಂಬವಾದಲ್ಲಿ ಆಯಾ ಗ್ರಾಪಂ ಮಟ್ಟದ ನಾಡಕಚೇರಿಗೆ ಸಂಪರ್ಕಿಬೇಕು. ನಂತರ ಜಿಲ್ಲಾಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಪರಿಹಾರಕ್ಕಾಗಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಆಯುಕ್ತ ದಾಸ್ ಸೂರ್ಯವಂಶಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ತಿಂಗಳಲ್ಲಿ ಒಂದು ಬಾರಿಯಾದರೂ ವಿಶೇಷಚೇತನರ ಕುಂದು-ಕೊರತೆ ಸಭೆ ಮಾಡಬೇಕು ಎಂದು ಸಭೆಗೆ ತಿಳಿಸಿದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್ ಕುಮಾರ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕಾರ್ಯಕರ್ತರು, ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.