ಭಾರತ ಶ್ರೀಮಂತ ವೈಜ್ಞಾನಿಕ ಪರಂಪರೆಯ ಬೀಡು

KannadaprabhaNewsNetwork |  
Published : Oct 31, 2025, 01:15 AM IST
39 | Kannada Prabha

ಸಾರಾಂಶ

ಭಾರತವು ಅನಾದಿಕಾಲದಿಂದಲೂ ಶ್ರೀಮಂತ ವೈಜ್ಞಾನಿಕ ಪರಂಪರೆಯ ಬೀಡಾಗಿದೆ

ಕನ್ನಡಪ್ರಭ ವಾರ್ತೆ ಮೈಸೂರುನಗರದ ಜ್ಞಾನೋದಯ ಪಿಯು ಕಾಲೇಜು ವಿದ್ಯಾರ್ಥಿಗಳು ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ ನಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾರ್ಷಿಕ ಬ್ರೈನ್ ಬೈಟ್ಸ್‌ 25 ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದರು.ತೀವ್ರ ಪೈಪೋಟಿ ನೀಡಿದ ವಿಜಯ ವಿಠ್ಠಲ ಪಿಯು ಕಾಲೇಜು ತಂಡ ತೃತೀಯ ಸ್ಥಾನ ಪಡೆಯಿತು.ಬ್ರೈನ್ ಬೈಟ್ಸ್ 25 ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಸದ್ವಿದ್ಯಾ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಎಸ್.ಕೆ ನರಹರಿ ಬಾಬು, ಭಾರತವು ಅನಾದಿಕಾಲದಿಂದಲೂ ಶ್ರೀಮಂತ ವೈಜ್ಞಾನಿಕ ಪರಂಪರೆಯ ಬೀಡಾಗಿದೆ ಎಂದು ಹೇಳಿದರು.ಪ್ರಾಚೀನ ಖಗೋಳಶಾಸ್ತ್ರಜ್ಞರಿಂದ ಹಿಡಿದು ಗಣಿತತಜ್ಞರವರೆಗೆ, ಭಾರತೀಯ ವಿಜ್ಞಾನಿಗಳು ಜಾಗತಿಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಹೇಗೆ ಗಮನಾರ್ಹವಾಗಿ ರೂಪಿಸಿದ್ದಾರೆ ಎಂಬುದಕ್ಕೆ ನಿದರ್ಶನಗಳನ್ನು ನೀಡಿದ ಅವರು, ಭಾರತೀಯ ಜ್ಞಾನ ಪದ್ಧತಿಯಲ್ಲಿರುವ ಪೈಥಾಗೋರಸ್ ಸೂತ್ರದ ಮಾದರಿ, ಆರ್ಯಭಟ್ಟನ ಪೈ ಮೌಲ್ಯದಗಣನೆ, ಋಗ್ವೇದದಲ್ಲಿರುವ ಸೃಷ್ಟಿತತ್ತ್ವದ ವಿವರಣೆ, ಹನುಮಾನ್‌ ಚಾಲೀಸನಲ್ಲಿ ಭೂಮಿ ಮತ್ತು ಸೂರ್ಯರ ನಡುವಿನ ಅಂತರದ ಕುರಿತ ಉಲ್ಲೇಖ ಮತ್ತು ವರಾಹಾವತಾರದ ಚಿತ್ರಣದಲ್ಲಿರುವ ಭೂಮಿಯ ಗೋಳಾಕಾರ ರೂಪದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಪ್ಯೂರ್ ಸೈನ್ಸ್‌ ವಿಷಯಗಳ ಬಗ್ಗೆ ಯುವಪೀಳಿಗೆಯಲ್ಲಿ ಕುಗ್ಗುತ್ತಿರುವ ಆಸಕ್ತಿ ಕುರಿತು ವಿಷಾದ ವ್ಯಕ್ತಪಡಿಸಿದ ಅವರು, ವಿದ್ಯಾರ್ಥಿಗಳು ವೈಜ್ಞಾನಿಕ ಕುತೂಹಲ ಬೆಳೆಸಿಕೊಳ್ಳುವುದರ ಜೊತೆಗೆ ಮೌಲ್ಯ ಅಳವಡಿಸಿಕೊಂಡು, ಶ್ರೇಷ್ಠತೆ ಸಾಧಿಸಲು ಅವಿರತ ಪರಿಶ್ರಮ ಪಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ತನಗಿದ್ದ ತೊದಲು ಸಮಸ್ಯೆಯನ್ನು ಗೆದ್ದು ಪ್ರಸಿದ್ಧ ವಕ್ತಾರನಾಗಿ ಹೊರಹೊಮ್ಮಿದ ಡೆಮೊಸ್ಥಿನಿಸ್ ಮತ್ತು ದೈಹಿಕ ದೌರ್ಬಲ್ಯತೆಯ ನಡುವೆಯೂ ಬ್ರೂಕ್ಲಿನ್ ಬ್ರಿಡ್ಜ್‌ ನಿರ್ಮಾಣ ಯಶಸ್ವಿಯಾಗಿ ಪೂರ್ಣಗೊಳಿಸಿದ ವಾಷಿಂಗ್ಟನ್‌ ರೋಬೆಲಿಂಗ್ ಉದಾಹರಣೆ ನೀಡಿದ ಅವರು, ದೃಢ ಸಂಕಲ್ಪವೇ ಮಹತ್ವ ಸಾಧನೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.ಇತಿಹಾಸ ಓದುವ ನೀವು ಇತಿಹಾಸ ಸೃಷ್ಟಿಸಬೇಕು ಎಂದು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು.ಅಸೋಸಿಯೇಟ್ ಡೀನ್ ಪ್ರೊ. ಶೇಖರ್ ಬಾಬು ಅವರು ವಿದ್ಯಾರ್ಥಿಗಳಿಗೆ ಈ ಅನುಭವ ಸ್ಮರಣೀಯವಾಗಿರಲಿ. ಈ ರಸಪ್ರಶ್ನೆ ಸ್ಪರ್ಧೆಯು ಕಂಟ್ರೋಲ್‌ ಆಂಡ್ ವಿನ್, ರಿಡಲ್ಸ್, ಕನೆಕ್ಟ್‌‌ದಡಾಟ್ಸ್, ಬಜಾರ್ ಮತ್ತು ರಾಪಿಡ್ - ಫೈಯರ್ ಸುತ್ತುಗಳನ್ನು ಒಳಗೊಂಡಿತ್ತು. ಸ್ಪರ್ಧೆಯಲ್ಲಿ ಮೈಸೂರು ನಗರದ ಸುತ್ತಮುತ್ತಲಿನ ಒಟ್ಟು 22 ಕಾಲೇಜುಗಳಿಂದ ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿಜೇತರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಪ್ರೋತ್ಸಾಹಿಸಲಾಯಿತು.ಜ್ಞಾನೋದಯ ಪಿಯು ಕಾಲೇಜಿನ ಇಶ್ ಪ್ರೀತ್ ಸಿಂಗ್ ಮತ್ತು ಪ್ರದ್ಯುಮ್ನ ಭಟ್ ಪ್ರಥಮ, ಶ್ರೀದಾ ಭಟ್ ಮತ್ತು ಎಸ್ ನಿಶಾಂತ್ ದ್ವಿತೀಯ. ವಿಜಯ ವಿಠ್ಠಲ ಪಿಯು ಕಾಲೇಜಿನ ವಿಶ್ರುತ್‌ ಎಸ್. ಪ್ರಸಾದ್ ಮತ್ತು ಕೆ.ವಿ. ಅದ್ವೈತ್ ತೃತೀಯ ಸ್ಥಾನ ಪಡದರು.ಕಾರ್ಯಕ್ರಮದಲ್ಲಿ ಅಮೃತ ವಿಶ್ವವಿದ್ಯಾಪೀಠಂ ಮೈಸೂರು ಕ್ಯಾಂಪಸ್‌ ಸಂಚಾಲಕ ಬ್ರಹ್ಮಚಾರಿ ಮುಕ್ತಿದಾಮೃತ ಚೈತನ್ಯ, ಪ್ರಾಂಶುಪಾಲ ಪ್ರೊ.ಜಿ. ರವೀಂದ್ರನಾಥ್, ಶೈಕ್ಷಣಿಕ ಸಂಯೋಜಕಿ ಡಾ. ರೇಖಾ ಭಟ್ ಮೊದಲಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ