ವಿಶೇಷ ವರದಿ
ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳ, ಬೇಸಿಗೆಯಲ್ಲಿ ಬರಿದಾಗುತ್ತದೆ. ಮಾತ್ರವಲ್ಲ, ಗಬ್ಬೆದ್ದು ವಾಸನೆಯಿಂದ ನಾರುತ್ತದೆ. ಕಾರಣ ಅಶಿಸ್ತಿನ ವರ್ತನೆ. ಎಲ್ಲ ಕಸ, ತ್ಯಾಜ್ಯವನ್ನು ಜನರು, ರಹವಾಸಿಗಳು, ವ್ಯಾಪಾರಿಗಳು ಹಳ್ಳಕ್ಕೆ ತಂದು ಸುರಿಯುತ್ತಾರೆ. ಸಹಜವಾಗಿ ಹಳ್ಳ ಮಳೆಗಾಲದಲ್ಲಿ ನೀರಿನಿಂದ ತುಂಬಿ ಹರಿದರೆ, ಬೇಸಿಗೆಯಲ್ಲಿ ಕಸಗಳಿಂದಲೇ ತುಂಬಿಕೊಂಡಿರುತ್ತದೆ.
ಬನಹಟ್ಟಿ ಹೃದಯ ಭಾಗದ ಶ್ರೀ ಕಾಡಸಿದ್ಧೇಶ್ವರ ದೇವಸ್ಥಾನದ ಬಲಭಾಗದ ಇಳಿಜಾರು ಪ್ರದೇಶದಲ್ಲಿ ಹಾಯ್ದು ಹೋಗುವ ಹಳ್ಳವೇ ಈಗ ತ್ಯಾಜ್ಯದಿಂದ ತುಂಬಿಕೊಂಡು ಗಬ್ಬೆದ್ದು ನಾರುವ ಪರಿಸ್ಥಿತಿಗೆ ಬಂದಿದೆ. ಈ ವಾಸನೆಗೆ ಕಾರಣವೇನು ಎಂದು ಕಾರಣಗಳೇನು ಎಂದು ಹುಡುಕಿಕೊಂಡು ಹೊರಟರೆ ಆಶ್ಚರ್ಯವಾಗುತ್ತದೆ. ಮಾತ್ರವಲ್ಲ, ಈ ಹಳ್ಳದ ಹತ್ತಿರವಿರುವ ನಿವಾಸಿಗಳು, ವ್ಯಾಪಾರಿಗಳು, ಮಾಂಸಾದ ಅಂಗಡಿಗಳು ಅಷ್ಟೇ ಅಲ್ಲ ಇನ್ನೂ ಹಲವರು ಕಾರಣವಾಗಿ ಸಿಕ್ಕುತ್ತಾರೆ. ಈ ಎಲ್ಲ ತ್ಯಾಜ್ಯವನ್ನು ಮೈದುಂಬಿಕೊಂಡಿರುವ ಈ ಹಳ್ಳ ಮುಂದೆ ಹೋಗುವುದಿಲ್ಲ. ಬಿಸಿಲಿನ ಹೊಡೆತಕ್ಕೆ ಹಸಿ ತ್ಯಾಜ್ಯ ಮತ್ತಷ್ಟು ಕೊಳೆಯುತ್ತದೆ. ಇದರಿಂದ ವಾಸನೆ ಕೂಡ ಹೆಚ್ಚಳವಾಗುತ್ತದೆ. ಹೀಗಾಗಿ ಈ ಭಾಗದಲ್ಲಿರುವ ಅಡ್ಡಾಡ್ಡುವ ಜನರು ಮೂಗು ಮುಚ್ಚಿಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಈ ವರ್ಷದಲ್ಲೇ ಇಷ್ಟೊಂದು ಗಬ್ಬೆದ್ದು ನಾರುತ್ತಿಲ್ಲ. ಹತ್ತು ಹಲವಾರು ವರ್ಷಗಳಿಂದ ಈ ಹಳ್ಳವು ಇಂತಹ ಪರಿಸ್ಥಿತಿಯಿಂದಲೇ ಬಳಲುತ್ತಿದೆ. ಸ್ವಚ್ಛತೆಯತ್ತ ಗಮನಹರಿಸಿ ನಗರದ ಹಾಗೂ ಅಲ್ಲಿ ವಾಸಿಸುವ ಜನರ ಆರೋಗ್ಯ ಕಾಪಾಡಬೇಕಾಗಿದ್ದ ನಗರಸಭೆ ಅಧಿಕಾರಿಗಳು ಈಗ ಜಾಣ ಮೌನಕ್ಕೆ ಜಾರಿದ್ದಾರೆ. ಹಾಗಾದರೆ ಹಳ್ಳದ ಸ್ವಚ್ಛತೆ ಜವಾಬ್ದಾರಿ ಯಾರು ಹೊರಬೇಕು ಎಂಬ ಪ್ರಶ್ನೆ ಈಗ ಎದುರಾಗಿದೆ. ಮಾತ್ರವಲ್ಲ, ಇದಕ್ಕೆ ಅಧಿಕಾರಿಗಳ ನಡೆ ಕೂಡ ಜವಾಬ್ದಾರಿಯಾಗಿರುತ್ತದೆ ಎಂಬುವುದು ಸಾರ್ವಜನಿಕರ ಆರೋಪ.ಇದಕ್ಕೇನು ಕಾರಣ?:ಹಳ್ಳದ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿವೆ. ಇದರಿಂದ ಮಳೆಗಾಲದ ಸಂದರ್ಭದಲ್ಲಿ ನೀರು ಸಹ ಸರಾಗವಾಗಿ ಹರಿದು ಹೋಗದ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ನಗರದ ಜನರು ಬಳಸಿದ ತ್ಯಾಜ್ಯವನ್ನು ಕೂಡ ಇಲ್ಲಿಯೇ ತಂದು ಎಸೆಯುತ್ತಾರೆ. ಅವಳಿ ನಗರದ ಮೂಲ ಕಸುಬು ನೂಲಿಗೆ ಬಣ್ಣ ಹಾಕೋದು. ಸಾಕಷ್ಟು ಕೆಮಿಕಲ್ ಬಳಸಿದ ಬಣ್ಣದ ನೀರು ಕೂಡ ಇದೇ ಹಳ್ಳಕ್ಕೆ ಸೇರುತ್ತದೆ.ಜಮಖಂಡಿ-ಕುಡಚಿ ರಾಜ್ಯ ಹೆದ್ದಾರಿಗೆ ಅಂಟಿಕೊಂಡಿರುವ ಈ ಹಳ್ಳದ ಸುತ್ತಲೂ ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿಯೇ ಮಾಂಸಾಹಾರಿ ವ್ಯಾಪಾರಿಗಳು ಸಹ ಬಳಸಿದ ಮಾಂಸದ ತುಂಡುಗಳನ್ನು ಸಹ ಇದೇ ರಸ್ತೆ ಬದಿಯ ಹಳ್ಳಕ್ಕೆ ಎಸೆದು ಹೋಗುತ್ತಾರೆ. ಇದರಿಂದ ದಿನಂಪ್ರತಿ ಸಂಚರಿಸುವ ವಾಯುವಿಹಾರಿಗಳು ಮೂಗು ಮುಚ್ಚಿಕೊಂಡೇ ಹೋಗುವಂತಾಗಿದೆ. ಹಾಗಾದರೆ ಕಸವನ್ನು ಬೇಕಾಬಿಟ್ಟಿಯಾಗಿ ಎಸೆಯುವ ಕಾಯಕಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ಈಗ ಹಳ್ಳ ಅಸ್ವಚ್ಛತೆಯ ದಾರಿ ಹಿಡಿದಿದೆ. ಮುಂದೆ ನಗರವೇ ಸ್ವಚ್ಛತೆಯ ವಿಷಯದಲ್ಲಿ ಹಳ್ಳ ಹಿಡಿಯುವ ಪರಿಸ್ಥಿತಿ ಉದ್ಭವವಾಗುವುದರಲ್ಲಿ ಯಾವ ಅನುಮಾನ ಇಲ್ಲ ಎನ್ನುವಂತಾಗಬಹುದು. ಕೇವಲ ದಂಡ ವಿಧಿಸಿದರೆ ಸಾಲದು: