ಶಾಖಾಮಠಗಳು ಸಾಮಾಜಿಕ ಅಭಿವೃದ್ಧಿಗೂ ಮುಂದಾಗಲಿ: ಸತೀಶ್‌ ಜಾರಕಿಹೊಳಿ

KannadaprabhaNewsNetwork |  
Published : Nov 29, 2026, 01:15 AM IST
ಸುರಪುರ ತಾಲೂಕಿನ ಬಂಡೊಳ್ಳಿಯಲ್ಲಿ ವಾಲ್ಮೀಕಿ ಗುರುಪೀಠದ ಶಾಖಾ ಮಠ ಹಾಗೂ ಶೈಕ್ಷಣಿಕ ಸೌಲಭ್ಯಗಳ ಅಡಿಗಲ್ಲು ಸಮಾರಂಭವನ್ನು ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಡಾ.ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ, ಜಿ.ಕುಮಾರ ನಾಯಕ, ರಾಜಾ ವೇಣುಗೋಪಾಲ ನಾಯಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಸಂವಿಧಾನ ಒದಗಿಸಿರುವ ಅವಕಾಶಗಳು, ಶಿಕ್ಷಣ ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಂಡು ವಾಲ್ಮೀಕಿ ಸಮುದಾಯದ ಜನರು ಪ್ರಗತಿಯತ್ತ ಸಾಗಬೇಕು. ಶಾಖಾ ಮಠಗಳ ಅಭಿವೃದ್ಧಿಗೆ ಸ್ಥಳೀಯ ಸಮಿತಿಗಳನ್ನು ರಚಿಸಿ ಕಾರ್ಯನಿರ್ವಹಿಸುವ ಮೂಲಕ ಮಠವನ್ನು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಸಂವಿಧಾನ ಒದಗಿಸಿರುವ ಅವಕಾಶಗಳು, ಶಿಕ್ಷಣ ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಂಡು ವಾಲ್ಮೀಕಿ ಸಮುದಾಯದ ಜನರು ಪ್ರಗತಿಯತ್ತ ಸಾಗಬೇಕು. ಶಾಖಾ ಮಠಗಳ ಅಭಿವೃದ್ಧಿಗೆ ಸ್ಥಳೀಯ ಸಮಿತಿಗಳನ್ನು ರಚಿಸಿ ಕಾರ್ಯನಿರ್ವಹಿಸುವ ಮೂಲಕ ಮಠವನ್ನು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಶಕ್ತಿ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ತಾಲೂಕಿನ ಬಂಡೊಳ್ಳಿ ಗ್ರಾಮದಲ್ಲಿ ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಾಲ್ಮೀಕಿ ಗುರುಪೀಠ ಶಾಖಾ ಮಠ ಬಂಡೊಳ್ಳಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಬಂಡೊಳ್ಳಿ ಗ್ರಾಮದಲ್ಲಿ ಶಾಖಾ ಮಠದ ಮೂಲಭೂತ ಸೌಕರ್ಯಗಳಿಗಾಗಿ ಸರ್ಕಾರ ಈಗಾಗಲೇ ₹೫ಕೋಟಿ ನೀಡಿದ್ದು, ಮುಂದಿನ ಹಂತಗಳಲ್ಲಿ ಪರಿಶಿಷ್ಟ ವರ್ಗಗಳ ಇಲಾಖೆಯ ಮೂಲಕ ಸುಮಾರು ₹25 ಕೋಟಿ ಅನುದಾನ ನೀಡುವ ಯೋಜನೆ ಇದೆ. ಈ ಅನುದಾನದಲ್ಲಿ ವಸತಿ ನಿಲಯ, ಶಾಲೆ, ಉನ್ನತ ಶಿಕ್ಷಣ ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಮಠ ಅಭಿವೃದ್ಧಿಗೆ ಸಮುದಾಯದ ಜನರೂ ಕೈಜೋಡಿಸಬೇಕು. ಮಠಗಳು ಸಮಾಜದ ಶಾಶ್ವತ ಆಸ್ತಿಯಾಗಿದ್ದು, ಅವುಗಳ ಬೆಳವಣಿಗೆಗೆ ಮತ್ತು ರಕ್ಷಣೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಸಮಾಜದ ಅಭಿವೃದ್ಧಿಗೆ ಸರ್ಕಾರ, ಮಠ ಹಾಗೂ ಶಾಸಕರನ್ನೇ ಅವಲಂಬಿಸುವ ಮನೋಭಾವ ಬದಲಾಗಿ, ಸ್ವಂತ ಶಕ್ತಿ ಮತ್ತು ಪರಿಶ್ರಮದಿಂದ ಕುಟುಂಬ ಹಾಗೂ ಸಮಾಜದ ಪ್ರಗತಿಗೆ ಪ್ರಯತ್ನಿಸಬೇಕು. ಬಡತನದ ನಡುವೆಯೂ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಛಲ ಪ್ರತಿಯೊಬ್ಬರಲ್ಲೂ ಇರಬೇಕು. ಶಿಕ್ಷಣವೇ ಸಮಾಜವನ್ನು ಮುಖ್ಯ ವಾಹಿನಿಗೆ ತರುವ ಪ್ರಮುಖ ಸಾಧನ. ಸಂವಿಧಾನದಿಂದ ಶಿಕ್ಷಣ, ಉದ್ಯೋಗ ಹಾಗೂ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುವ ಅವಕಾಶಗಳು ದೊರೆತಿದ್ದು, ಅದರ ಮಹತ್ವ ಅರಿಯಬೇಕು. ರಾಜ್ಯದ ವಿವಿಧ ಭಾಗಗಳಲ್ಲಿ ಶಾಖಾ ಮಠಗಳ ಮೂಲಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಆಶಯ ಹೊಂದಲಾಗಿದೆ. ಬಂಡೊಳ್ಳಿ ಶಾಖಾ ಮಠವು ಮುಂದಿನ ಐದು ವರ್ಷಗಳಲ್ಲಿ ರಾಜನಹಳ್ಳಿ ಮಠದಂತೆ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಂಸದ ಜಿ.ಕುಮಾರ ನಾಯಕ ಮಾತನಾಡಿ, ಕರ್ನಾಟಕ ಬೆನ್ನಲುಬಾಗಿರುವ ಸಮಾಜ ಎಂದರೇ ವಾಲ್ಮೀಕಿ ಸಮುದಾಯ. ಇದರ ಸಮುದಾಯದ ಅಭಿವೃದ್ಧಿಗೆ ರಾಜಕೀಯ, ಧಾರ್ಮಿಕ ಚಟುವಟಿಕೆಗಳ ಜತೆಗೆ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿಯೂ ಹೆಚ್ಚಿನ ಶ್ರಮ ಅಗತ್ಯ. ದೊಡ್ಡ ಜನಸಂಖ್ಯೆ ಇದ್ದರೂ ಮೌನ, ಸಂಕೋಚದ ಪ್ರವೃತ್ತಿಯಿಂದಾಗಿ ಸಮುದಾಯವನ್ನು ಕಡೆಗಣಿಸುವಂತಾಗಿದೆ. ಮಕ್ಕಳಿಗೆ ಬಾಲ್ಯದಿಂದಲೇ ಶಿಕ್ಷಣ, ಜ್ಞಾನ ಮತ್ತು ಸಂಸ್ಕೃತಿ ಬೆಳೆಸಬೇಕು ಎನ್ನುವುದರ ಜತೆಗೆ ೭% ಮೀಸಲಾತಿ ಹೋರಾಟ ಹಾಗೂ ಲಿಂಗಸೂಗೂರು-ಸುರಪುರ ಸಂಪರ್ಕಕ್ಕೆ ಕೃಷ್ಣಾ ನದಿಗೆ ರಸ್ತೆ ಸೇತುವೆ ನಿರ್ಮಿಸುವ ಪ್ರಸ್ತಾವನೆಯ ಕುರಿತು ಪ್ರಸ್ತಾಪಿಸಿದರು.

ಮಾಜಿ ಸಚಿವ ನರಸಿಂಹನಾಯಕ (ರಾಜೂಗೌಡ) ಮಾತನಾಡಿ, ಕನಕ ಗುರುಪೀಠ ಹಾಗೂ ಮಹರ್ಷಿ ವಾಲ್ಮೀಕಿ ಪೀಠಗಳು ಸಗರನಾಡಿನ ಎರಡು ಕಣ್ಣುಗಳಂತಾಗಿ ಶಿಕ್ಷಣ, ಸಂಸ್ಕೃತಿ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶಕ್ತಿ ಕೇಂದ್ರಾಗಳಾಗಬೇಕು. ಕನಕದಾಸರು ಸಮಾಜಕ್ಕೆ ಉತ್ತಮ ಸಂದೇಶ ಸಾರಿದರೆ, ಮಹರ್ಷಿ ವಾಲ್ಮೀಕಿಯವರು ರಾಮಾಯಣದಂತಹ ಮಹಾನ್ ಗ್ರಂಥವನ್ನು ರಚಿಸಿ ಜಗತ್ತಿಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ರಾಜಕೀಯ ವಿಚಾರಗಳನ್ನು ರಾಜಕೀಯ ವೇದಿಕೆಯಲ್ಲಿ ಚರ್ಚಿಸೋಣ. ಸಮಾಜದ ವಿಚಾರ ಬಂದಾಗ ಪಕ್ಷಭೇದ ಮರೆತು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸತೀಶ ಜಾರಕಿಹೊಳಿ ಸೇರಿದಂತೆ ಸಮಾಜದ ಪ್ರಮುಖ ನಾಯಕರು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗದೆ ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು. ವಾಲ್ಮೀಕಿ ಸಮಾಜಕ್ಕೆ ದೊರಕಿರುವ ಶೇ.೭ ಮೀಸಲಾತಿ ಉಳಿಸಲು ಪಕ್ಷಾತೀತವಾಗಿ ಎಲ್ಲ ನಾಯಕರು ಒಗ್ಗಟಿನಿಂದ ಹೋರಾಡಬೇಕು ಎಂದರು.

ಪರಿಶಿಷ್ಟ ಪಂಗಡ ಸಚಿವ ಟಿ. ರಘಮೂರ್ತಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು. ಜಗಳೂರು ಶಾಸಕ ಬಿ. ದೇವೆಂದ್ರಪ್ಪ, ಸಂಡೂರಿನ ಶಾಸಕಿ ಅನ್ನಪೂರ್ಣ ತುಕಾರಾಂ, ಮಾಜಿ ಸಂಸದ ಡಾ. ಬಿ.ವಿ.ನಾಯಕ, ಎಚ್.ಡಿ.ಕೋಟೆ ಶಾಸಕ ಅನಿಲ ಚಿಕ್ಕಮಾದು, ಯಾದಗಿರಿಯ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಮಾತನಾಡಿದರು.

ರಾಜನಹಳ್ಳಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪರಮ ಪೂಜ್ಯ ಜಗದ್ಗುರು ಡಾ.ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಸಿ ಆಶೀರ್ವಚನ ನೀಡಿ, ರಾಜ್ಯದಲ್ಲಿ ಅಹಿಂದ ಸಮುದಾಯದ ನಾಯಕತ್ವ, ಸಾಮಾಜಿಕ ನ್ಯಾಯ ಹಾಗೂ ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸತೀಶ ಜಾರಕಿಹೊಳಿ ಅವರ ಕೊಡುಗೆ ಸ್ಮರಿಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ₹25 ಕೋಟಿ ವೆಚ್ಚದಲ್ಲಿ ಸುಮಾರು ಒಂದು ಸಾವಿರ ಮಕ್ಕಳ ವಸತಿ ಹಾಗೂ ಶಿಕ್ಷಣಕ್ಕೆ ನೆರವಾಗುವ ಸಂಕಲ್ಪ ಕೈಗೊಂಡಿರುವುದು ಶ್ಲಾಘನೀಯ. ಸಮಾಜದ ಮಠಕ್ಕೆ ಜಮೀನು ನೀಡಿದ ಸುಜಾತಾ ವೇಣುಗೋಪಾಲ ಜೇವರ್ಗಿ ಅವರಿಗೆ ಅಭಿನಂದನೆಗಳು ಎಂದರು.

ತಾಲೂಕಿನ ಬಂಡೊಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಶಾಖಾ ಗುರುಪಿಠ ಹಾಗೂ ಶೈಕ್ಷಣಿಕ ಅಭಿವೃದ್ಧಿ ಸಂಸ್ಥೆಯ ಭೂಮಿ ಪೂಜೆ ಸಮಾರಂಭ ಯಶಸ್ವಿಯಾಗಲು ಸಹಕರಿಸಿದ ಶಾಸಕ ರಾಜಾ ವೇಣುಗೋಪಾಲನಾಯಕ ಸಹಿತ ವಿವಿಧ ಗಣ್ಯರು, ಜನಪ್ರತಿನಿಧಿಗಳು, ಧರ್ಮದರ್ಶಿಗಳು ಹಾಗೂ ಸಮಾಜದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.

ಗೋಲಪಲ್ಲಿಯ ವರದಾನೇಶ್ವರ ಮಹಾಸ್ವಾಮಿಗಳು ಭೂಮಿ ಪೂಜೆ ನೆರವೇರವೇರಿಸಿದರು. ಪ್ರತಾಪಗೌಡ ಪಾಟೀಲ ಸಮಾಜದ ಹಾಲಿ ಹಾಗೂ ಮಾಜಿ ಸಚಿವರು, ಸಂಸದರು, ಶಾಸಕರು, ಮಠದ ಧರ್ಮದರ್ಶಿಗಳು, ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಸಮಾಜದ ಮುಖಂಡರು, ವಿವಿಧ ಭಾಗಗಳಿಂದ ಆಗಮಿಸಿದ ವಿವಿಧ ಸಮುದಾಯದ ಸಾವಿರಾರು ಜನರು ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜಾ ವೇಣುಗೋಪಾಲ ನಾಯಕ ಸ್ವಾಗತಿಸಿದರು. ಅಮರಯ್ಯ ಸ್ವಾಮಿ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳೆಲ್ಲ ಒಗ್ಗೂಡಲಿ: ಶಂಕರ ಭಟ್ಟ
ಮಹಾಲಸಾ ಸಿದ್ಧಿವಿನಾಯಕ ದೇಗುಲದಲ್ಲಿ ಒಂದೇ ರಾತ್ರಿಯಲ್ಲಿ 25 ಸಾವಿರ ತೆಂಗಿನಕಾಯಿ ಒಡೆದ್ರು!