ಪರವಾನಗಿ ಭೂಮಾಪಕರ ಮುಷ್ಕರ । 15 ಸಾವಿರಕ್ಕೂ ಹೆಚ್ಚು ಅರ್ಜಿಗಳಿಗೆ ಗ್ರಹಣ । ಸರ್ವೆ ಕಾರ್ಯಕ್ಕೆ ಹಿನ್ನಡೆ, ರೈತರ ಆರ್ಥಿಕ ಮೂಲಕ್ಕೂ ಪೆಟ್ಟು
ಕನ್ನಡಪ್ರಭ ವಾರ್ತೆ ರಾಮನಗರ
ಪರವಾನಗಿ ಹೊಂದಿದ ಭೂಮಾಪಕರು ಎರಡೂವರೆ ತಿಂಗಳಿಂದ ಮುಷ್ಕರದ ಹಾದಿ ಹಿಡಿದಿರುವುದರಿಂದ ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆಯ ಬಹುತೇಕ ಕೆಲಸಗಳು ಸ್ಥಗಿತಗೊಂಡಿರುವುದರಿಂದ 15 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇದರಿಂದಾಗಿ ಸಾರ್ವಜನಿಕರು ಭಾರೀ ಸಂಕಷ್ಟಕ್ಕೆ ಸಿಲುಕಿದ್ದಾರೆ.ಏಪ್ರಿಲ್ 30ರವರೆಗೆ ಜಿಲ್ಲೆಯಲ್ಲಿ ಜಮೀನು ಸರ್ವೆ, ಹದ್ದುಬಸ್ತು, ನಕ್ಷೆ, ಪೋಡಿ ಸೇರಿದಂತೆ ಸುಮಾರು 15 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಜಮೀನು, ನಿವೇಶನ ಖರೀದಿ, ಹಕ್ಕು ಬದಲಾವಣೆಗೂ ತೊಡಕುಂಟಾಗಿದೆ. ಈ ಎಲ್ಲ ಭೂಮಾಪನ ಕಾರ್ಯಗಳು ಸಂಪೂರ್ಣವಾಗಿ ನಿಂತಿರುವುದು ಜನರಲ್ಲಿ ಆತಂಕ ಉಂಟುಮಾಡಿದೆ.
ಜಿಲ್ಲೆಯಲ್ಲಿ 173 ಪರವಾನಗಿ ಮತ್ತು 35 ಸರ್ಕಾರಿ ಭೂ ಮಾಪಕರು ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಸೇವಾ ಭದ್ರತೆಗಾಗಿ ಖಾಸಗಿ ಭೂ ಮಾಪಕರು ಮುಷ್ಕರಕ್ಕೆ ಇಳಿದಿರುವುದರಿಂದ ಕೆಲಸದ ಒತ್ತಡ ಸರ್ಕಾರಿ ಭೂ ಮಾಪಕರ ಮೇಲೆ ಬಿದ್ದಿದೆ. ಲಭ್ಯವಿರುವ 34 ಸರ್ಕಾರಿ ಭೂ ಮಾಪಕರಲ್ಲಿ ಆಕಾರ್ ಬಂದ್, ಸರ್ವೆ ಹಾಗೂ ಸ್ವಾಮಿತ್ವಾ ಯೋಜನೆಗಳಿಗೆ ನಿಯೋಜಿಸಲಾಗಿದೆ.
ರೈತರ ಆರ್ಥಿಕ ಮೂಲಕ್ಕೆ ಪೆಟ್ಟು:
ಈಗ ಬಿಸಿಲಿನ ತಾಪಕ್ಕೆ ತೆಂಗಿನ ತೋಟ ಸೇರಿ ಇತರೆ ಬೆಳೆಗಳು ಒಣಗುತ್ತಿವೆ. ಅಂತರ್ಜಲ ಕುಸಿತದಿಂದಾಗಿ ಹೊಸ ಬೋರ್ ವೆಲ್ ಕೊರೆಸಬೇಕಾದ ಅನಿವಾರ್ಯತೆ ರೈತರಿಗಿದೆ. ಆದರೆ, ಬೋರ್ ವೆಲ್ ಕೊರೆಸಲು ಹಣದ ಅಗತ್ಯವಿದ್ದು, ಬ್ಯಾಂಕ್ ಸಾಲ ಪಡೆಯಬೇಕಾದರೆ ಜಮೀನಿನ ಸ್ಕೆಚ್ ಮತ್ತು ಪೋಡಿ ದಾಖಲೆ ಅಗತ್ಯ. ದಾಖಲೆಗಳಿಲ್ಲದೆ ಬ್ಯಾಂಕ್ ಸಾಲ ದೊರೆಯದೆ, ಅತ್ತ ತೋಟಕ್ಕೆ ನೀರುಣಿಸಲೂ ಸಾಧ್ಯವಾಗದೆ ರೈತರು ದಿಕ್ಕೆಟ್ಟಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿರುವ 173 ಸರ್ಕಾರಿ ಪರವಾನಗಿ ಭೂ ಮಾಪಕರ ಮುಷ್ಕರದಿಂದಾಗಿ ಇಲಾಖೆಯ ಕೆಲಸಗಳು ಮಂದಗತಿಯಲ್ಲಿ ಸಾಗುತ್ತಿವೆ. ಇಲಾಖೆಯ 34 ಸರ್ಕಾರಿ ಭೂ ಮಾಪಕರೇ ಕಾರ್ಯ ನಿರ್ವಹಿಸುತ್ತಿದ್ದು, ಆದ್ಯತೆ ಮೇರೆಗೆ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.- ಬಿ.ಆರ್. ಹನುಮೇಗೌಡ, ಉಪ ನಿರ್ದೇಶಕ, ಭೂ ದಾಖಲೆಗಳ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ.
ಮಗಳ ಮದುವೆಗಾಗಿ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಲು ನಿರ್ಧರಿಸಿ ಮುಂಗಡ ಹಣ ಪಡೆದಿದ್ದೆ. ಆದರೆ, ಹದ್ದುಬಸ್ತು ಮತ್ತು ಪೋಡಿ ಪ್ರಕ್ರಿಯೆ ನಡೆಯದ ಕಾರಣ ಕ್ರಯಪತ್ರ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಖರೀದಿದಾರರು ಹಣ ವಾಪಸ್ ಕೇಳುತ್ತಿದ್ದಾರೆ. ಭೂ ಮಾಪಕರ ಮುಷ್ಕರಿಂದಾಗಿ ತೊಂದರೆ ಅನುಭವಿಸುವಂತಾಗಿದೆ.
5ಕೆಆರ್ ಎಂಎನ್ 1.ಜೆಪಿಜಿ
ಸಾದಂರ್ಭಿಕ ಚಿತ್ರ