)
ಕನ್ನಡಪ್ರಭ ವಾರ್ತೆ ಬೆಂಗಳೂರು
ಹಿಂಸೆ ಸಹಿಸಲಾರದೆ ಹತ್ಯೆ: ಈರಯ್ಯ ಹಾಗೂ ಮೃತ ರಮೇಶ್ ಸೋದರ ಸಂಬಂಧಿಗಳಾಗಿದ್ದರು. ವಾರಿಗೆಯಲ್ಲಿ ಈರಯ್ಯ ಅವರ ಮಗಳಿಗೆ ರಮೇಶ್ ಸಹೋದರನಾಗಬೇಕಿತ್ತು. ಅಪ್ರಾಪ್ತ ವಯಸ್ಸಿನ ಈರಯ್ಯ ಅವರ ಮಗಳ ಜತೆ ಅನುಚಿತ ವರ್ತನೆ ತೋರಿದ ಆರೋಪ ಮೇರೆಗೆ 2022ರಲ್ಲಿ ಬಾಗಲಕೋಟೆ ಜಿಲ್ಲೆ ಮಧೋಳ ಠಾಣೆಯಲ್ಲಿ ರಮೇಶ್ ವಿರುದ್ಧ ಪೊಕ್ಸೋ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ್ದ ರಮೇಶ್ ಜಾಮೀನು ಪಡೆದು ಹೊರಬಂದು ಮತ್ತೆ ಈರಯ್ಯ ಕುಟುಂಬದವರಿಗೆ ಬೆದರಿಕೆ ಹಾಕುತ್ತಿದ್ದ. ಆಗ ಮತ್ತೆ ಆತನ ವಿರುದ್ಧ ಸ್ಥಳೀಯ ಠಾಣೆಯಲ್ಲಿ ಈರಯ್ಯ ಕುಟುಂಬದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.
ಈ ಬೆಳವಣಿಗೆ ಬಳಿಕ ಈರಯ್ಯ ಮಗಳನ್ನು ಬೆಂಗಳೂರಿಗೆ ಕರೆತಂದು ಶಿಕ್ಷಣ ಕೊಡಿಸುತ್ತಿದ್ದರು. 15 ದಿನಗಳ ಹಿಂದಷ್ಟೇ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ರಮೇಶ್, ಯಲಹಂಕ ಸಮೀಪದ ಅರಳಾಸಂದ್ರದಲ್ಲಿ ನೆಲೆಸಿದ್ದ. ಸ್ವಿಗ್ಲಿ ಡೆಲವರಿ ಬಾಯ್ ಆಗಿ ದುಡಿದು ಜೀವನ ಸಾಗಿಸುತ್ತಿದ್ದ. ಸಂಬಂಧಿ ಮಗಳು ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ವಿಷಯ ಗೊತ್ತಾಗಿ ಮತ್ತೆ ತನ್ನ ಚಾಳಿ ಶುರು ಮಾಡಿದ್ದಾನೆ. ಸಂತ್ರಸ್ತೆಯ ಕಾಲೇಜು ಬಳಿ ಹೋಗಿ ಆಕೆಯ ಹಿಂಬಾಲಿಸುವುದಕ್ಕೆ ಆರಂಭಿಸಿದ. ತನಗೆ ಮತ್ತೆ ರಮೇಶ್ ಕಾಟ ಕೊಡುತ್ತಿರುವ ವಿಷಯವನ್ನು ತನ್ನ ತಂದೆ ಈರಯ್ಯ ಅವರಿಗೆ ಸಂತ್ರಸ್ತೆ ತಿಳಿಸಿದ್ದಳು ಎಂದು ಹೇಳಲಾಗಿದೆ.ತನ್ನ ಮಗಳ ಕಿರುಕುಳ ನೀಡುತ್ತಿರುವ ಸೋದರ ಸಂಬಂಧಿ ರಮೇಶ್ ಹತ್ಯೆಗೆ ಈರಯ್ಯ ನಿರ್ಧರಿಸಿದ್ದ. ಈ ಕೃತ್ಯಕ್ಕೆ ಅವರಿಗೆ ಸೋದರ ಚಿನ್ನಯ್ಯ ಹಾಗೂ ಸ್ನೇಹಿತರು ಸಾಥ್ ಕೊಟ್ಟಿದ್ದಾರೆ. ಮಾ.27 ರಂದು ರಮೇಶ್‌ನನ್ನು ಮಾತುಕತೆ ನೆಪದಲ್ಲಿ ಕರೆಸಿ ಮದ್ಯ ಕುಡಿಸಿದ ಬಳಿಕ ಉಸಿರುಗಟ್ಟಿಸಿ ಹತ್ಯೆ ಮಾಡಿ ಅರಳಾಸಂದ್ರ ಸಮೀಪ ರಾಜಕಾಲುವೆಗೆ ಬಿಸಾಡಿ ಆರೋಪಿಗಳು ಪರಾರಿಯಾಗಿದ್ದರು. ಮರುದಿನ ರಾಜ ಕಾಲುವೆಯಲ್ಲಿ ಮೃತದೇಹ ಪತ್ತೆಯಾಯಿತು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ಮೃತನ ಪೂರ್ವಾಪರ ಮಾಹಿತಿ ಕಲೆ ಹಾಕಿದಾಗ ಹಂತಕರ ಜಾಡು ಸಿಕ್ಕಿತು. ಈ ಸುಳಿವು ಆಧರಿಸಿ ಆರೋಪಿಗಳನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.