ಕಲಬುರಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದಿಟ್ಟ ನಿಲುವು, ದೂರದೃಷ್ಟಿಯ ಸಮಚಿತ್ತದ ಆಡಳಿತಕ್ಕೆ ಇಡೀ ವಿಶ್ವವೇ ತಲೆಬಾಗುತ್ತಿದ್ದು, ಉಗ್ರ ಪಾಕಿಸ್ತಾನಕ್ಕೆ ಮೋದಿ ನೇತೃತ್ವದಲ್ಲಿ ದೇಶದ ಸೈನ್ಯವೂ ತಕ್ಕ ಪಾಠ ಕಲಿಸಿದೆ. ಅದರ ಸ್ಪಷ್ಟತೆ ಸೈನ್ಯದ ಮಹಿಳಾ ಅಧಿಕಾರಿಗಳೇ ನೀಡಿದ್ದಾರೆ. ಮೋದಿ ಅವರ ದೂರದೃಷ್ಟಿ, ದಿಟ್ಟ ನಿಲುವು ಅರಿಯದೇ ತಮ್ಮ ವೈಫಲ್ಯ ಮರೆ ಮಾಚಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಬರೀ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪಾಕ್ ನ ಬಹುತೇಕ ಪ್ರಮುಖ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿ, ನಮ್ಮ ದೇಶದ ಸಹೋದರಿಯರ ಸಿಂದೂರ ಅಳಿಸಿದ ಉಗ್ರ ಪಾಕ್ ಗೆ ತಕ್ಕ ಉತ್ತರವನ್ನು ನೀಡುವಲ್ಲಿ ಭಾರತ ಯಶಸ್ವಿಯಾಗಿದೆ. ಸೈನ್ಯಕ್ಕೆ ಹೊಸ ಶಕ್ತಿ, ತಂತ್ರಜ್ಞಾನದ ಬಲ ಮೋದಿ ಸರ್ಕಾರ ನೀಡಿದೆ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ಸ್ಪಷ್ಟ ನಿಲುವು ಕೇಂದ್ರ ಸರ್ಕಾರ ಹೊಂದಿದ್ದು, ಅದರಂತೆ ನಡೆಯುತ್ತಿದೆ. ನಾಲಿಗೆ ಚಪಲಕ್ಕೆ ಸಚಿವರು ಮಾತು ದೇಶದ ಘನತೆಗೆ ಕುಂದು ತರುತ್ತದೆ ಎಂದು ಆಕ್ಷೇಪಿಸಿದ್ದಾರೆ.ಸೈನ್ಯದ ಕಾರ್ಯಾಚರಣೆ ಬಗ್ಗೆ ಸ್ವತಃ: ಯೋಧರೇ ತಿಳಿಸಿದ್ದಾರೆ. ಪ್ರಧಾನಿಯವರು ಸ್ಪಷ್ಟಪಡಿಸಿದ್ದಾರೆ. ಎಲ್ಲವನ್ನು ನಿಮ್ಮ ಹಾಗೆ ಬೀದಿಯಲ್ಲಿ ನಿಂತು ಮಾತಾಡುವುದಲ್ಲ. ದೇಶದ ವಿಷಯದಲ್ಲೂ ಮಾತಾಡುವ ನಿಮಗೆ ಕಲಬುರಗಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಕೊನೇ ಸ್ಥಾನ ಬಂದಿದ್ದಕ್ಕೆ ಏನು ಮಾಡಬೇಕು ಯೋಚಿಸಿ. ನಿಮ್ಮದೇ ಕ್ಷೇತ್ರದಲ್ಲಿ ಕೋಟ್ಯಂತರ ರು. ಅಕ್ರಮ ಗಣಿಗಾರಿಕೆ ಮಾಡಿ, ಲೂಟಿ ಮಾಡಿದ್ದು, ಅದರ ಬಗ್ಗೆ ಬಾಯಿ ಬಿಡಿ. ಒಂದೂವರೆ ವರ್ಷದಿಂದ ಕನಿಷ್ಠ ಒಂದು ಕೆಡಿಪಿ ಸಭೆ ನಡೆಸಲು ಆಗುತ್ತಿಲ್ಲ. ಇಡೀ ಜಿಲ್ಲೆಯಲ್ಲಿ ಅಭಿವೃದ್ಧಿ ನಿಂತ ನೀರಾಗುತ್ತಿದ್ದು, ರೌಡಿ ಶೀಟರ್‌ಗಳನ್ನು ರಕ್ಷಿಸುತ್ತಿದ್ದಾರೆ. ಮೋದಿ, ಟ್ರಂಪ್, ವಿಶ್ವದ ಎಲ್ಲ ಮಾತನಾಡುವ ಉಸ್ತುವಾರಿ ಸಚಿವರಿಗೆ ಕಲಬುರಗಿ ನಗರ, ಚಿತ್ತಾಪುರ ಬಿಟ್ಟು ಸ್ವಲ್ಪ ಬೇರೆ ತಾಲೂಕುಗಳು ಇವೆ ಎಂಬುದು ಅರಿಯಲಿ ಎಂದು ಸಲಹೆ ನೀಡಿದ್ದಾರೆ.