ಮಾಗಡಿ: ತಾಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ-2025 ದಿನಾಚರಣೆಯನ್ನು ನೇತೇನಹಳ್ಳಿ ಗ್ರಾಮದಲ್ಲಿ ಆಚರಿಸಲಾಯಿತು.
ಕೇಂದ್ರದ ವಿಸ್ತರಣಾ ವಿಜ್ಞಾನಿ ಡಾ.ಎಸ್.ಸೌಜನ್ಯ ಮಾತನಾಡಿ, ಎದೆ ಹಾಲಿನ ಪೌಷ್ಟಿಕತೆ ಕಾಪಾಡಲು ತಾಯಂದಿರು ಉತ್ತಮ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಎದೆ ಹಾಲು ಕುಡಿಸುವುದರಿಂದ ತಾಯಿ ಸ್ತನ ಕ್ಯಾನ್ಸರ್‌ನಿಂದ ರಕ್ಷಣೆ ಪಡೆಯಬಹುದು. ತಾಯಿಯ ಸ್ವಚ್ಛತೆ, ಸುರಕ್ಷತೆ ಜೊತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದರು.
ಅಂಗನವಾಡಿ ಮೇಲ್ವಿಚಾರಕಿ ಗಾಯತ್ರಿ ಮಾತನಾಡಿ, ಮಗುವಿನ ಪಾಲನೆ ಪೋಷಣೆ, ತಾಯಿ ಹಾಲು ಕುಡಿಸುವ ವಿಧಾನ, ಚುಚ್ಚುಮದ್ದಿನ ಮಹತ್ವ, ಜಂತುನಿವಾರಕ ಮಾತ್ರೆ ಕುರಿತು ವಿವರವಾದ ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಕೆವಿಕೆ ತಾಂತ್ರಿಕ ಅಧಿಕಾರಿ ಚಂದನ, ಅಂಗನವಾಡಿ ಶಿಕ್ಷಕಿ ಮಮತಾ, ಸಿಎಚ್ಒ ಮಮತ್ತಾಜ್ ಹಾಗೂ ಗ್ರಾಮದ ಗರ್ಭಿಣಿಯರು, ತಾಯಂದಿರು ಮತ್ತು ಮಹಿಳೆಯರು ಭಾಗವಹಿಸಿದ್ದರು.