ಮಂಗಳೂರು ಕೆಎಂಸಿ ಆಸ್ಪತ್ರೆಯಲ್ಲಿ ‘ಬ್ರೆಸ್ಟ್‌ ವೆಲ್‌ನೆಸ್‌ ಸೆಂಟರ್‌’ ಕಾರ್ಯಾರಂಭ

KannadaprabhaNewsNetwork |  
Published : Oct 19, 2024, 12:35 AM IST
ಸ್ತನ ಕ್ಯಾನ್ಸರ್‌ ಜಾಗೃತಿ ಅಭಿಯಾನದ ಮಾಹಿತಿ ಅನಾವರಣಗೊಳಿಸುತ್ತಿರುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್ ಇಂದಾಜೆ | Kannada Prabha

ಸಾರಾಂಶ

ಕೆಎಂಸಿ ಆಸ್ಪತ್ರೆಯ ಟವರ್‌ 1ರ 11ನೇ ಮಹಡಿಯಲ್ಲಿ ಬ್ರೆಸ್ಟ್‌ ವೆಲ್‌ನೆಸ್‌ ಸೆಂಟರ್‌ ತೆರೆಯಲಾಗಿದ್ದು, 18001025555 ನಂಬರಿಗೆ ಮುಂಚಿತವಾಗಿ ಕರೆ ಮಾಡಿ ತಪಾಸಣೆಗೆ ಆಗಮಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನ ಅಂಬೇಡ್ಕರ್‌ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್‌ ತಿಳಿವಳಿಕೆ ಮಾಸಾಚರಣೆ ಅಂಗವಾಗಿ ‘ಬ್ರೆಸ್ಟ್‌ ವೆಲ್‌ನೆಸ್‌ ಸೆಂಟರ್‌’ನ್ನು ಕಾರ್ಯಾರಂಭಿಸಿದೆ.

ಕೆಎಂಸಿ ಆಸ್ಪತ್ರೆಯ ಬ್ರೆಸ್ಟ್‌ ಸರ್ಜನ್‌ ಡಾ.ಬಾಸಿಲಾ ಆಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಎಂಸಿ ಆಸ್ಪತ್ರೆಯ ಟವರ್‌ 1ರ 11ನೇ ಮಹಡಿಯಲ್ಲಿ ಬ್ರೆಸ್ಟ್‌ ವೆಲ್‌ನೆಸ್‌ ಸೆಂಟರ್‌ ತೆರೆಯಲಾಗಿದ್ದು, 18001025555 ನಂಬರಿಗೆ ಮುಂಚಿತವಾಗಿ ಕರೆ ಮಾಡಿ ತಪಾಸಣೆಗೆ ಆಗಮಿಸಬಹುದಾಗಿದೆ ಎಂದರು.

ಸ್ತನ ಕ್ಯಾನ್ಸರ್‌ಗೆ ಭೀತಿ ಪಡಬೇಕಾಗಿಲ್ಲ. ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ಮೂಲಕ ಅದನ್ನು ತಡೆಗಟ್ಟಲು ಸಾಧ್ಯವಿದೆ. ಮಹಿಳಾ ವೈದ್ಯರ ತಂಡ ಹಾಗೂ ಆಸ್ಪತ್ರೆಯ ನುರಿತ ಸಿಬ್ಬಂದಿ ಚಿಕಿತ್ಸೆ ನೀಡುತ್ತದೆ ಎಂದರು.

ಮೆಡಿಕಲ್‌ ಆಂಕಾಲಜಿಸ್ಟ್‌ ಡಾ.ಸಾನಿಯೋ ಡಿಸೋಜಾ ಮಾತನಾಡಿ, ಅಕ್ಟೋಬರ್‌ ತಿಂಗಳಲ್ಲಿ ಈ ಮಾಸಾಚರಣೆ ಆಚರಿಸಲಾಗುತ್ತದೆ. ಮಹಿಳೆಯರು 40 ಅಥವಾ 40 ವರ್ಷಕ್ಕಿಂತ ಮೇಲ್ಪಟ್ಟವರು ಮುಂಜಾಗ್ರತಾ ಕ್ರಮವಾಗಿ ತಪಾಸಣೆ ನಡೆಸುವುದು ಸೂಕ್ತ ಎಂದರು.

ಸರ್ಜಿಕಲ್‌ ಆಂಕಾಲಜಿಸ್ಟ್‌ ಡಾ.ಕಾರ್ತಿಕ್‌ ಕೆಎಸ್‌ ಮಾತನಾಡಿ, ವಿಶ್ವದಲ್ಲಿ ನಿಮಿಷಕ್ಕೊಂದು ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಮೃತಪಡುತ್ತಿದ್ದಾರೆ ಎಂದು ಆರೋಗ್ಯ ಸಂಸ್ಥೆಯ ವರದಿ ಹೇಳುತ್ತಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಶೇ.90ರಷ್ಟು ಸ್ತನ ಕ್ಯಾನ್ಸರ್‌ನ್ನು ಗುಣಪಡಿಸಲು ಸಾಧ್ಯವಿದೆ ಎಂದರು.

ಇನ್ನೋರ್ವ ಸರ್ಜಿಕಲ್‌ ಆಂಕಾಲಜಿಸ್ಟ್‌ ಡಾ.ಹರೀಶ್‌ ಮಾತನಾಡಿ, ಸ್ತನ ಕ್ಯಾನ್ಸರ್‌ ಕಂಡುಬಂದರೆ ಯಾವುದೇ ಹಂತದಲ್ಲೂ ಚಿಕಿತ್ಸೆ ನೀಡಲು ಸಾಧ್ಯವಿದೆ. ಇದಕ್ಕೆಂದೇ ಬ್ರೆಸ್ಟ್‌ ವೆಲ್‌ನೆಸ್‌ ಸೆಂಟರ್‌ ಕಾರ್ಯನಿರ್ವಹಿಸುತ್ತಿದೆ ಎಂದರು.

ಆಸ್ಪತ್ರೆಯ ಪ್ರಾದೇಶಿಕ ಆಪರೇಟಿಂಗ್‌ ಅಧಿಕಾರಿ ಸಗೀರ್‌ ಸಿದ್ಧಿಕಿ ಮಾತನಾಡಿ, ಕಳೆದ ನಾಲ್ಕೈದು ವರ್ಷಗಳಿಂದ ಈ ಬಗ್ಗೆ ತಿಳಿವಳಿಕೆ ನೀಡುವ ಕಾರ್ಯಕ್ರಮವನ್ನು ಶಾಲಾ ಕಾಲೇಜುಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭ ಸ್ತನ ಕ್ಯಾನ್ಸರ್‌ ಜಾಗೃತಿ ಅಭಿಯಾನದ ಮಾಹಿತಿಯನ್ನು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅನಾವರಣಗೊಳಿಸಿದರು.

ಸ್ತನಕ್ಕೆ ಕತ್ತರಿ ಅನಿವಾರ್ಯ ಅಲ್ಲ

ಸ್ತನ ಕ್ಯಾನ್ಸರ್‌ ಎಂದರೆ ಸ್ತನವನ್ನು ಕತ್ತರಿಸಿ ಹಾಕುವುದು ಎಂಬ ತಪ್ಪು ಕಲ್ಪನೆ ಅನೇಕ ಮಂದಿಯಲ್ಲಿ ಇದೆ. ಆದರೆ ಸ್ತನ ಕ್ಯಾನ್ಸರ್‌ನಲ್ಲಿ ಸ್ತನವನ್ನು ತೆಗೆದುಹಾಕಬೇಕಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಸ್ತನದಲ್ಲಿ ಕಾಣಿಸಿದ ಕ್ಯಾನ್ಸರ್‌ ಗಡ್ಡೆಯನ್ನು ಮಾತ್ರ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗುತ್ತದೆ. ಬಯಾಪ್ಸಿ ಮಾದರಿಯಲ್ಲಿ ಚಿಕಿತ್ಸೆ ನಡೆಸುವುದರಿಂದ ಅಂತಹ ಯಾವುದೇ ತೊಂದರೆ ಇರುವುದಿಲ್ಲ ಎಂದು ಸರ್ಜಿಕಲ್‌ ಆಂಕಾಲಜಿಸ್ಟ್‌ ಡಾ.ಕೀರ್ತಿಕ್‌ ಕೆ.ಎಸ್‌. ಸ್ಪಷ್ಟಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ