-ಜಿಲ್ಲೆಯಾದ್ಯಂತ ಧಾರಾಕಾರ ಮಳೆಗೆ ರೈತರು ತತ್ತರ । ವಡಗೇರಾ ಜಮೀನಿನಲ್ಲಿ ಭತ್ತದ ಬೆಳೆ ಹಾನಿ । ರೈತ ಮುಖಂಡರು ಭೇಟಿ ನೀಡಿ, ಪರಿಶೀಲನೆ
ಕನ್ನಡಪ್ರಭ ವಾರ್ತೆ ವಡಗೇರಾಜಿಲ್ಲೆಯಾದ್ಯಂತ ಧಾರಾಕಾರವಾಗಿ ಸುರಿದ ಮಳೆಗೆ ರೈತರು ತತ್ತರಿಸಿ ಹೋಗಿದ್ದಾರೆ. ವಡಗೇರಾ ತಾಲೂಕಿನಲ್ಲಿ ಜಮೀನುಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ಭತ್ತ, ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಇದರಿಂದ ಲಕ್ಷಾಂತರ ರುಪಾಯಿಗಳ ಮೌಲ್ಯದ ಬೆಳೆಹಾನಿ ಸಂಭವಿಸಿದೆ.
ಮಳೆಯ ಅವಾಂತರ ಸೃಷ್ಟಿಯಾಗಿದ್ದು, ಜಿಲ್ಲೆಯ ಹಲವು ತಾಲೂಕುಗಳಲ್ಲಿ ಭತ್ತ ಹಾಗೂ ಹತ್ತಿ ಬೆಳೆಯು ಹಾನಿಯಾಗಿದೆ. ತಾಲೂಕಿನ ಗೋಡಿಹಾಳ, ನಾಯ್ಕಲ್, ಬೂದಿನಾಳ, ಬಿಳಾರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದ ಭತ್ತದ ಬೆಳೆ ನೆಲಕಚ್ಚಿ ಹಾನಿಯಾಗಿದೆ. ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ ಆಗ್ರಹಿಸಿದ್ದಾರೆ.ತೆನೆ ಕಟ್ಟಿರುವ ಭತ್ತವು ಈಗ ಹಾಸಿಗೆಯಂತೆ ನೆಲಕ್ಕೆ ಬಿದ್ದಿದೆ. ಇನ್ನೆನು 15 ದಿನಗಳಲ್ಲಿ ಹತ್ತಿ ಬಿಡಿಸುವುದು ಮತ್ತು ಭತ್ತ ಕಟಾವು ಮಾಡಬೇಕೆನ್ನುವಷ್ಟರಲ್ಲಿ ಹಾನಿಯಾಗಿದೆ. ಹತ್ತಿ ಬೆಳೆಯಲ್ಲಿ ನೀರು ಸಂಗ್ರಹವಾಗಿ ಹತ್ತಿ ಬೆಳೆಯು ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಿದೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಬೆಳೆದಿದ್ದ ಭತ್ತ, ಹತ್ತಿ ಹಾನಿಯಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆ ಹಾನಿಯಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ರೈತ ಸಂಗಾರೆಡ್ಡಿ ಗೋಡಿಹಾಳ ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಮಳೆಗೆ ಹಾನಿಗೊಳಗಾದ ರೈತರ ಹೊಲಗಳ ಸಮೀಕ್ಷೆ ಮಾಡಿ ಜಿಲ್ಲಾಡಳಿತ ಮತ್ತು ಸರ್ಕಾರ ಹೆಚ್ಚಿನ ಪರಿಹಾರ ನೀಡಬೇಕು. ಒಂದು ವೇಳೆ ವಿಳಂಬ ಮಾಡಿದಲ್ಲಿ ರಾಜ್ಯ ರೈತ ಸಂಘದಿಂದ ಉಗ್ರ ಹೋರಾಟ ಮಾಡುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲನಗೌಡ ಹಗರಟಗಿ, ಗುರುನಾಥ ರೆಡ್ಡಿ ಹದನೂರ, ನೂರಅಹ್ಮದ್, ಶಿವಶರಣಪ್ಪ ಸಾಹುಕಾರ ತಡಿಬಿಡಿ, ವೆಂಕೂಬ್ ಕಟ್ಟಿಮನಿ, ವಿದ್ಯಾಧರ್ ಜಾಕಾ, ಶರಣು ಜಡಿ, ರೈತ ಸಂಘದ ಮುಖಂಡರು ಎಚ್ಚರಿಕೆ ನೀಡಿದ್ದಾರೆ.----
18ವೈಡಿಆರ್9:ಧಾರಕಾರವಾಗಿ ಸುರಿಯುತ್ತಿರುವ ಮಳೆಗೆ ವಡಗೇರಾ ತಾಲೂಕಿನ ಜಮೀನೊಂದರಲ್ಲಿ ಭತ್ತದ ಬೆಳೆ ಹಾನಿಯಾಗಿದ್ದು, ಈ ಹಿನ್ನೆಲೆ ರೈತ ಮುಖಂಡರು ಭೇಟಿ ನೀಡಿ ಪರಿಶೀಲಿಸುತ್ತಿರುವುದು.