ರಾಮಾಯಣ ಮಹಾಕಾವ್ಯದಲ್ಲಿರುವ ಮೌಲ್ಯಗಳನ್ನು ರೂಢಿಸಿಕೊಳ್ಳಿ

KannadaprabhaNewsNetwork | Published : Oct 19, 2024 12:34 AM

ಸಾರಾಂಶ

ಪರಿಶ್ರಮ ಹಾಗೂ ಅಚಲ ಸಾಧನೆಯಿಂದ ಈ ಜಗತ್ತಿಗೆ ಮಾದರಿ

ಕನ್ನಡಪ್ರಭ ವಾರ್ತೆ ಮೈಸೂರು

ಈ ಜಗತ್ತು ನ್ಯಾಯಮಾರ್ಗದಲ್ಲಿ ಸಾಗಬೇಕಾದರೆ ವಾಲ್ಮೀಕಿ ಅವರು ರಾಮಾಯಣದಲ್ಲಿ ಕೊಟ್ಟಿರುವ ಆದರ್ಶವನ್ನು ಅರ್ಥ ಮಾಡಿಕೊಂಡು ಅನುಸರಿಸಬೇಕು. ಅದರಲ್ಲಿರುವ ಮೌಲ್ಯಗಳನ್ನು ರೂಢಿಸಿಕೊಳ್ಳಿ ಎಂದು ಮಹಾಜನ ಕಾಲೇಜು ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ ಕರೆ ನೀಡಿದರು.ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದ ಅವರು, ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯವಾದ ಕೊಡುಗೆ ನೀಡಿದ ಆದಿಕವಿ ಮಹರ್ಷಿ ವಾಲ್ಮೀಕಿಯನ್ನು ನಾವೆಲ್ಲಾ ಗೌರವದಿಂದ ಸ್ಮರಿಸಬೇಕು. ವಾಲ್ಮೀಕಿ ಅವರು ಬೇಡನಾಗಿ ಹುಟ್ಟಿದರೂ ಪರಿವರ್ತನೆಯ ಕುಲುಮೆಯಲ್ಲಿ ಉರಿದು, ಜ್ಞಾನದಗ್ನಿಯಲ್ಲಿ ಮಿಂದು ಜ್ಞಾನಶಾಸ್ತ್ರದಿಂದ ಜಗತ್ತನ್ನೇ ಗೆದ್ದು ಮಹರ್ಷಿ ವಾಲ್ಮೀಕಿಯಾದರು. ಪರಿಶ್ರಮ ಹಾಗೂ ಅಚಲ ಸಾಧನೆಯಿಂದ ಈ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದರು.ರಾಮಾಯಣ ಮಹಾಕಾವ್ಯದಲ್ಲಿ ನೂರಾರು ಪಾತ್ರಗಳ ಮೂಲಕ ಮೌಲ್ಯಯುತ ಬದುಕಿನ ಸೂಕ್ಷ್ಮ ಒಳನೋಟಗಳನ್ನು ಕಟ್ಟಿಕೊಟ್ಟಿದ್ದಾರೆ. ಮಾನವೀಯ ಅನುಕಂಪ, ಕರುಣೆ, ವಾತ್ಸಾಲ್ಯ, ತ್ಯಾಗ, ಸಹೋದರತೆ, ಅಸಮಾನತೆ ನಿರ್ಮೂಲನೆ, ಉತ್ತಮ ನಡೆ ಆದರ್ಶ ಹಾಗೂ ಆರೋಗ್ಯ ಪೂರ್ಣ ಸಮಾಜದ ನಿರ್ಮಾಣದ ಆಶಯ ಇರುವುದರಿಂದ ನಾವೆಲ್ಲರೂ ರಾಮಾಯಣದ ಈ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.ಪ್ರಪಂಚದಲ್ಲಿ ಬಂದಿರುವ ಮಹಾಕಾವ್ಯಗಳಿಗೆ ಹೋಲಿಕೆ ಮಾಡಿದರೆ ರಾಮಾಯಣ ಬಹಳ ಭಿನ್ನಾವಾಗಿದೆ. ಇಡೀ ಜಗತ್ತಿಗೆ ರಾಮಾಯಣದ ಮೂಲಕ ಸಂಸ್ಕೃತಿಯನ್ನು ಸಾರಿದ್ದಾರೆ. ವಿಶ್ವ ಸಾಹಿತ್ಯ ಮಟ್ಟದ ಮಹಾಕಾವ್ಯವೆಂದು ಹೆಗ್ಗಳಿಕೆ ಪಡೆದಿರುವ ರಾಮಾಯಣದ ಕರ್ತೃ ವಾಲ್ಮೀಕಿ ವಿಶ್ವಕವಿಯಾಗಿ ಗೌರವಕ್ಕೆ ಭಾಜನರಾಗಿದ್ದಾರೆ. ಇಂಥ ಮಹಾಕೃತಿ ಹುಟ್ಟಿದ ನಾಡಿನಲ್ಲಿ ಬದುಕುತ್ತಿರುವ ನಾವು ಧನ್ಯರು ಎಂದು ಅವರು ತಿಳಿಸಿದರು.ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಸ್.ಆರ್. ರಮೇಶ್, ಶೈಕ್ಷಣಿಕ ಡೀನ್ ಡಾ.ಎಚ್. ಶ್ರೀಧರ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ ಮೊದಲಾದವರು ಇದ್ದರು.

Share this article