- ಹೊದಿಗೆರೆ ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದಲ್ಲಿ ಡಾ.ನಳಿನಾ ಸಲಹೆ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಯಿಯ ಎದೆಹಾಲು ಮಕ್ಕಳಿಗೆ ಅಮೃತವಾಗಿದ್ದು, ಹುಟ್ಟಿದ ಮಕ್ಕಳಿಗೆ ತಾಯಿಯ ಎದೆಹಾಲು ಹೊರತುಪಡಿಸಿ ಬೇರೆ ಯಾವುದನ್ನೂ ನೀಡಬಾರದು ಎಂದು ಆರೋಗ್ಯ ಕೇಂದ್ರದ ವೈದ್ಯರಾದ ಡಾ.ನಳಿನಾ ಹೇಳಿದರು.ತಾಲೂಕಿನ ಹೊದಿಗೆರೆ ಗ್ರಾಮದಲ್ಲಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚನ್ನಗಿರಿ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಆಧುನಿಕ ಜಗತ್ತಿನಲ್ಲಿ ತಾಯಂದಿರು ಮಕ್ಕಳಿಗೆ ಎದೆಹಾಲನ್ನು ಉಣಿಸುವುದು ಕಡಿಮೆಯಾಗುತ್ತಿದೆ. ಇದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಎರಡು ವರ್ಷದವರೆಗೆ ತಪ್ಪದೇ ಎದೆಹಾಲು ನೀಡುವಂತೆ ಸಲಹೆ ನೀಡಿದರು.
ಮಕ್ಕಳು ಸದೃಢರಾಗಿ ಬೆಳೆಯಬೇಕಾದರೆ ಹುಟ್ಟಿದ ಮಗುವಿಗೆ ಮೊದಲು ಎದೆಯ ಹಾಲನ್ನು ಉಣಿಸಬೇಕು. ತಾಯಿಯ ಎದೆಹಾಲಿನ ಮಹತ್ವ ಪ್ರತಿಯೊಬ್ಬ ತಾಯಂದಿರಿಗೆ ತಿಳಿಸುವ ಉದ್ದೇಶದಿಂದ ಆ.1ನೇ ತಾರೀಖಿನಿಂದ 7ನೇ ತಾರೀಖಿನವರೆಗೆ ವಿಶ್ವ ಸ್ತನ್ಯಪಾನ ಸಪ್ತಾಹ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಆ ಮೂಲಕ ತಾಯಿಯ ಎದೆಹಾಲಿನ ಮಹತ್ವವನ್ನು ಎಲ್ಲರಿಗೂ ತಿಳಿಸಲಾಗುತ್ತಿದೆ ಎಂದರು.ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಸಿದ್ದಲಿಂಗ ಸ್ವಾಮಿ ಮಾತನಾಡಿ, ಮಗು ಹುಟ್ಟಿದ ತಕ್ಷಣ ತಾಯಿಯ ಎದೆಹಾಲು ಬರಲು ಪ್ರಾರಂಭವಾಗಲಿದೆ. ಜನನ ಬಳಿಕದ ಕೆಲ ನಿಮಿಷಗಳ ಬಳಿಕವೇ ಮಗುವಿಗೆ ಎದೆಹಾಲನ್ನು ಕುಡಿಸುವುದರಿಂದ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಠಿಕಾಂಶಗಳು ಎದೆಹಾಲಿನಲ್ಲಿ ದೊರೆಯುತ್ತವೆ. ಉತ್ತಮ ಆರೋಗ್ಯ, ಸದೃಢವಾಗಿ ಮಕ್ಕಳು ಬೆಳೆಯಬೇಕಾದರೆ ತಾಯಿ ಎದೆಹಾಲು ಅತ್ಯವಶ್ಯಕ ಎಂದರು.
ಇದೇ ಸಂದರ್ಭದಲ್ಲಿ ಬಾಣಂತಿಯರಿಗೆ ಉಚಿತ ಪೌಷ್ಠಿಕ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಬಿ.ಎಸ್.ರವೀಂದ್ರ, ಎನ್.ವಿ.ಹರೀಶ್, ಮೋಹನ್ ಕುಮಾರ್, ಭಾಸ್ಕರ್ ಭಟ್, ಮಕ್ಕಳ ತಾಯಂದಿರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.- - -
-7ಕೆಸಿಎನ್‌ಜಿ2.ಜೆಪಿಜಿ: ಹೊದಿಗೆರೆ ಆರೋಗ್ಯ ಕೇಂದ್ರದಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಡಾ.ನಳಿನಾ ಉದ್ಘಾಟಿಸಿದರು.