ಕೊಬ್ಬರಿ ಖರೀದಿಗೆ ಲಂಚ: ರೈತರು, ಅಧಿಕಾರಿಗಳ ನಡುವೆ ಗಲಾಟೆ

KannadaprabhaNewsNetwork | Published : Jun 13, 2024 12:45 AM

ಸಾರಾಂಶ

ರೈತರ ಕೊಬ್ಬರಿ ಖರೀದಿಸಲು ಅಧಿಕಾರಿ ಲಂಚ ಕೇಳಿದರು ಎಂದು ರೈತರು ಹಾಗೂ ಅಧಿಕಾರಿಗಳ ನಡುವೆ ಗಲಾಟೆಯಾದ ಘಟನೆ ನಗರದ ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ನ್ಯಾಫೆಡ್ ಕೇಂದ್ರದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ತಿಪಟೂರು

ರೈತರ ಕೊಬ್ಬರಿ ಖರೀದಿಸಲು ಅಧಿಕಾರಿ ಲಂಚ ಕೇಳಿದರು ಎಂದು ರೈತರು ಹಾಗೂ ಅಧಿಕಾರಿಗಳ ನಡುವೆ ಗಲಾಟೆಯಾದ ಘಟನೆ ನಗರದ ಎಪಿಎಂಸಿ ಮಾರುಕಟ್ಟೆಯ ಕೊಬ್ಬರಿ ನ್ಯಾಫೆಡ್ ಕೇಂದ್ರದಲ್ಲಿ ನಡೆದಿದೆ.

ತಾಲೂಕಿನ ಗಂಗನಘಟ್ಟ ಗ್ರಾಮದ ರೈತ ಹರೀಶ್ ಎಂಬಾತ ತಮ್ಮ 20 ಚೀಲ ಕೊಬ್ಬರಿಯನ್ನು ನ್ಯಾಫೆಡ್‌ಗೆ ಮಾರಲು ತಂದಿದ್ದರು. ಆದರೆ ಇಲ್ಲಿನ ನ್ಯಾಫೆಡ್ ಅಧಿಕಾರಿ ಕೊಬ್ಬರಿ ಗುಣಮಟ್ಟ ಸರಿಯಿಲ್ಲ ಎಂದು 2,000 ರು.ಕೊಡುವಂತೆ ಹಮಾಲಿಯ ಮೂಲಕ ಲಂಚಕ್ಕೆ ಬೇಡಿಕೆ ಇಟ್ದಿದ್ದಾರೆ. ಇದರಿಂದ ಸಿಟ್ಟಾದ ರೈತ ಹರೀಶ್ ರೈತ ಸಂಘದವರಿಗೆ ದೂರವಾಣಿ ಮೂಲಕ ಸ್ಥಳಕ್ಕೆ ಕರೆಸಿಕೊಂಡಾಗ ರೈತ ಸಂಘ ಮುಖಂಡ ಜಯಚಂದ್ರಶರ್ಮ ಹಾಗೂ ಅಧಿಕಾರಿಯೊಂದಿಗೆ ತೀವ್ರ ವಾಗ್ವಾದ ಉಂಟಾಯಿತು. ಆಣೆ ಪ್ರಮಾಣವೂ ನಡೆಯಿತು.

ಖರೀದಿ ಕೇಂದ್ರದಲ್ಲಿ ಯಾವ ರೈತ ಲಂಚ ಕೊಡುತ್ತಾನೋ ಆತನ ಕೊಬ್ಬರಿಯ ಗುಣಮಟ್ಟವನ್ನು ಇಲ್ಲಿ ಪರಿಶೀಲಿಸುತ್ತಿಲ್ಲ. ಹಣ ಕೊಡದಿದ್ದರೆ ಸುಮಾರು 50 ಕೆ.ಜಿಯಷ್ಟು ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಖರೀದಿಸುವುದಿಲ್ಲ. ಕೊಬ್ಬರಿ ಬೆಲೆ ಇಳಿಕೆಯಾಗಿದೆ ರೈತರಿಗೆ ಆರ್ಥಿಕ ಸಂಕಷ್ಟವನ್ನು ಕಡಿಮೆ ಮಾಡಲೆಂದೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರೋತ್ಸಾಹ ಬೆಲೆಯೊಂದಿಗೆ ನ್ಯಾಫೆಡ್ ಖರೀದಿ ಕೇಂದ್ರ ಪ್ರಾರಂಭಿಸಿವೆ. ಆದರೆ ಇಲ್ಲಿನ ಅಧಿಕಾರಿಗಳು ರೈತರ ಬಳಿ ಹಣ ಸುಲಿಗೆ ಮಾಡುತ್ತಿದ್ದಾರೆ. ರೈತರಿಂದ ಕೊಬ್ಬರಿ ಖರೀದಿಸಿ 72 ಗಂಟೆಯೊಳಗೆ ರೈತನ ಖಾತೆಗೆ ಹಣ ಬರಬೇಕು. ಆದರೆ ಮಾರಾಟ ಮಾಡಿ ಹಲವು ದಿನಗಳಾದರೂ ಹಣ ಬಂದಿಲ್ಲ. ಅಧಿಕಾರಿಗಳು ರೈತರ ಬಳಿ ದರ್ಪ ದೌರ್ಜನ್ಯ ತೋರಿಸಬೇಡಿ ಎಂದು ರೈತ ಸಂಘದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿ ಹಾಗೂ ರೈತ ಮುಖಂಡರೊಂದಿಗಿನ ವಾಗ್ವಾದದಿಂದ ಖರೀದಿ ಕೇಂದ್ರದಲ್ಲಿ ಕೆಲ ಸಮಯ ಬಿಗುವಿನ ವಾತಾವರಣ ಉಂಟಾಯಿತು.

Share this article