ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸಸ್ಥಳ ನಿರ್ಮಾಣಕ್ಕೆ ಪೂರಕವಾದ ಇಟ್ಟಿಗೆ ಸಿದ್ಧ : ಮಹತ್ವದ ಸಂಶೋಧನಾ ಕಾರ್ಯ

KannadaprabhaNewsNetwork |  
Published : Apr 02, 2025, 01:04 AM ISTUpdated : Apr 02, 2025, 11:30 AM IST
ಚಂದ್ರನ ಅಂಗಳದಲ್ಲಿ ವಾಸಸ್ಥಳ ನಿರ್ಮಿಸಲು ಐಐಎಸ್ಸಿ ಮತ್ತು ಇಸ್ರೋ ಸಂಶೋಧಕರು ಅಭಿವೃದ್ಧಿಪಡಿಸಿರುವ ಇಟ್ಟಿಗೆ. | Kannada Prabha

ಸಾರಾಂಶ

ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸಸ್ಥಳ ನಿರ್ಮಾಣಕ್ಕೆ ಬೇಕಾಗುವ ಇಟ್ಟಿಗೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮಹತ್ವದ ಸಂಶೋಧನಾ ಕಾರ್ಯವನ್ನು ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿಯಾಗಿ ಕೈಗೊಂಡಿವೆ.

  ಬೆಂಗಳೂರು : ಭವಿಷ್ಯದಲ್ಲಿ ಚಂದ್ರನ ಮೇಲೆ ವಾಸಸ್ಥಳ ನಿರ್ಮಾಣಕ್ಕೆ ಬೇಕಾಗುವ ಇಟ್ಟಿಗೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಮಹತ್ವದ ಸಂಶೋಧನಾ ಕಾರ್ಯವನ್ನು ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜಂಟಿಯಾಗಿ ಕೈಗೊಂಡಿವೆ.

ಎರಡು ಪ್ರತಿಷ್ಠಿತ ಸಂಸ್ಥೆಗಳ ಸಂಶೋಧಕರು ಚಂದ್ರನ ಮೇಲಿನ ಮಣ್ಣು, ಕೆಲ ಬ್ಯಾಕ್ಟೀರಿಯಾ, ಸುಲಭವಾಗಿ ಲಭ್ಯವಾಗುವ ವಸ್ತುಗಳನ್ನು ಬಳಸಿ ಇಟ್ಟಿಗೆ ನಿರ್ಮಿಸುವ ಸುಸ್ಥಿರ ಪ್ರಕ್ರಿಯೆ ಅಭಿವೃದ್ಧಿಪಡಿಸಿದ್ದಾರೆ.

ಭೂಮಿ ಮೇಲಿನ ಸಂಪನ್ಮೂಲಗಳು ವೇಗವಾಗಿ ಕಡಿಮೆಯಾಗುತ್ತಿರುವ ಕಾರಣ ಕಳೆದೊಂದು ಶತಮಾನದಿಂದ ವಿಜ್ಞಾನಿಗಳು ಚಂದ್ರ ಅಂಗಳ ಮತ್ತು ಸಾಧ್ಯವಾದರೆ ಅನ್ಯಗ್ರಹಗಳ ಮೇಲೆ ವಾಸಿಸಲು ಅನೇಕ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಆದರೆ, ಒಂದು ಪೌಂಡ್ ತೂಕದ ವಸ್ತುಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು 7.5 ಲಕ್ಷ ರು. ಖರ್ಚಾಗುತ್ತದೆ. ಆದರೆ, ನಮ್ಮ ಸಂಶೋಧನೆಯಲ್ಲಿ ಖರ್ಚು ಕಡಿಮೆ ಎನ್ನುತ್ತಾರೆ ಐಐಎಸ್ಸಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಲೋಕ್ ಕುಮಾರ್. ಇವರ ಅಧ್ಯಯನ ವರದಿಯು ಸೆರಾಮಿಕ್ಸ್ ಇಂಟರ್‌ನ್ಯಾಷನಲ್‌ನಲ್ಲಿ ಪ್ರಕಟಗೊಂಡಿದೆ.

ಚಯಾಪಚಯ ಕ್ರಿಯೆ ಮೂಲಕ ಕೆಲ ಅತಿಸೂಕ್ಷ್ಮ ಜೀವಕಣಗಳು ಖನಿಜಗಳನ್ನು ಉತ್ಪತ್ತಿ ಮಾಡುತ್ತವೆ. ಅವುಗಳಲ್ಲಿ ಸ್ಪೋರೋಸಾರ್ಸಿನಾ ಪ್ಯಾಸ್ಚ್ಯೂರಿ ಎಂಬ ಬ್ಯಾಕ್ಟೀರಿಯಾವು ಕ್ಯಾಲ್ಸಿಯಂ ಕಾರ್ಬೋನೇಟ್ ಕಣಗಳನ್ನು ಉತ್ಪಾದಿಸುತ್ತವೆ. ಇದು ಚಂದ್ರನ ಮೇಲಿನ ಮಣ್ಣು ಗಟ್ಟಿಯಾಗಿ ಜೋಡಣೆಯಾಗಲು ನೆರವಾಗುತ್ತದೆ. ಮತ್ತೊಂದೆಡೆ ಸಿಮೆಂಟ್‌ನಂತೆಯೇ ಕೆಲಸ ಮಾಡುವ ಗೋರಿಕಾಯಿಯಿಂದ ತೆಗೆಯುವ ಅಂಟು ಬಳಸುವುದರಿಂದ ಇಟ್ಟಿಗೆ ಜೋಡಣೆಗೆ ಸಿಮೆಂಟ್ ಬೇಕಾಗುವುದಿಲ್ಲ. ಇದು ಸುಸ್ಥಿರ ಅಭಿವೃದ್ಧಿಗೆ ಪೂರಕವಾಗುವ ಜೊತೆಗೆ ಖರ್ಚು ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಜೀವಶಾಸ್ತ್ರ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ ನೈಪುಣ್ಯತೆಯನ್ನು ಒಂದುಗೂಡಿಸಿ ಒಂದು ರೋಮಾಂಚಕ ಸಂಶೋಧನಾ ಕಾರ್ಯ ನಡೆಸಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ಇಟ್ಟಿಗೆ ನಿರ್ಮಾಣ ಪ್ರಕ್ರಿಯೆ:

ಐಐಎಸ್ಸಿಯ ಪ್ರಯೋಗಾಲಯದಲ್ಲಿ ಮೊದಲು ಬ್ಯಾಕ್ಟೀರಿಯಾವನ್ನು ಚಂದ್ರನ ಮಣ್ಣಿಗೆ ಹೋಲಿಕೆಯಾಗುವ ಮಣ್ಣಿನ ಜೊತೆ ಮಿಶ್ರಣ ಮಾಡಲಾಗಿದೆ. ನಂತರ ಅಗತ್ಯ ಪ್ರಮಾಣದ ಯೂರಿಯಾ ಮತ್ತು ಕ್ಯಾಲ್ಸಿಯಂ ಜೊತೆಗೆ ಗೋರಿಕಾಯಿಯ ಅಂಟು ಸೇರಿಸಲಾಗುತ್ತದೆ. ಈ ಮಿಶ್ರಣವನ್ನು ಕೆಲ ದಿನಗಳ ಕಾಲ ಹಾಗೆಯೇ ಬಿಟ್ಟಾಗ ಬಲವಾದ ಇಟ್ಟಿಗೆ ಮಾದರಿ ಸಿದ್ಧವಾಗಿದೆ. ಇದನ್ನು ಲೇತ್ ಯಂತ್ರ ಬಳಸಿ ಬೇಕಾದ ರೂಪ ನೀಡಬಹುದು ಎಂದು ಸಂಶೋಧಕರು ತಮ್ಮ ಸಂಶೋಧನಾ ವರದಿಯಲ್ಲಿ ತಿಳಿಸಿದ್ದಾರೆ.ಪಾಯಿಂಟ್ಸ್‌:

ಅನ್ಯಗ್ರಹಗಳ ಮೇಲೆ ವಾಸಿಸಲು ನಡೆಸಲಾಗುತ್ತಿರುವ ಪ್ರಯತ್ನದತ್ತ ದಿಟ್ಟ ಹೆಜ್ಜೆ.

ಐಐಎಸ್ಸಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ವಿಜ್ಞಾನಿಗಳ ಶೋಧ.

ಜೀವಶಾಸ್ತ್ರ-ಮೆಕ್ಯಾನಿಕಲ್ ಎಂಜಿನಿಯರಿಂಗ್‌ ನೈಪುಣ್ಯತೆಯ ಸಂಯೋಜನೆ.

ಸೆರಾಮಿಕ್ಸ್ ಇಂಟರ್‌ನ್ಯಾಷನಲ್‌ನಲ್ಲಿ ಸಂಶೋಧನಾ ವರದಿ ಪ್ರಕಟ.

ಸಿಮೆಂಟ್‌ ಬದಲಿಗೆ ಗೋರಿಕಾಯಿಯ ಅಂಟು ಬಳಕೆ.

ಇಟ್ಟಿಗೆ ಜೋಡಣೆಗೆ ಸಿಮೆಂಟ್ ಬೇಕಿಲ್ಲ.

ಸುಸ್ಥಿರ ಅಭಿವೃದ್ಧಿಗೆ ಪೂರಕ, ಖರ್ಚು ಕೂಡ ಕಡಿಮೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''