ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಹಲವು ವಿರೋಧಗಳ ನಡುವೆಯೂ ಯಾರಿಗೂ ತಿಳಿಯದ ಹಾಗೆ ರಾತ್ರೋರಾತ್ರಿ ಕಾಮಗಾರಿ ಪೂರ್ಣಗೊಳಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 160 ವರ್ಷಗಳಿಗೂ ಹಳೆಯದಾದ ಭದ್ರಾ ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ಈ ಸೇತುವೆಗೆ ಬದಲಾಗಿ ಹೊಸ ಸೇತುವೆ ನಿರ್ಮಾಣ ಮಾಡು ವಂತೆ ಹಲವಾರು ವರ್ಷಗಳಿಂದ ನಿರಂತರವಾದ ಹೋರಾಟಗಳು ನಡೆದ ಪರಿಣಾಮ ಕೊನೆಗೂ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು.ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ 2018ರಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಅಂದಾಜು 21.34 ಕೋ. ರು.ವೆಚ್ಚದಲ್ಲಿ 240.5 ಮೀಟರ್ ಉದ್ದದ ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ಮೆ. ಎಸ್‌ಪಿಎಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಚೆನ್ನೈ ಕಂಪನಿಗೆ ಗುತ್ತಿಗೆಯನ್ನೂ ನೀಡಲಾಗಿದೆ. ನಿರ್ವಹಣಾ ಸಲಹೆ ಗಾರರಾಗಿ ಮೆ.ಸತ್ರ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಅವರನ್ನು ನೇಮಕಗೊಳಿಸಲಾಗಿದೆ. ಸೇತುವೆ ನಿರ್ಮಾಣಗೊಂಡ ನಂತರ 5 ವರ್ಷಗಳವರೆಗೆ ನಿರ್ವಹಣಾ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.ಇನ್ನು, ಸೇತುವೆಯನ್ನು ಕಮಾನು ಮಾದರಿಯಲ್ಲಿ ವಿಶಿಷ್ಟವಾಗಿ ನಿರ್ಮಿಸಲಾಗುತ್ತಿದೆ. ಆದರೆ ಸುಮಾರು 6 ವರ್ಷ ಕಳೆದರೂ ಸಹ ಕಾಮಗಾರಿ ಮುಕ್ತಾಯಗೊಂಡಿಲ್ಲ. ಕೆಲವು ಕಾರಣಗಳಿಂದ ಕೊನೆಯ ಹಂತದ ಶೇ.10ರಷ್ಟು ಕಾಮಗಾರಿ ಮಾತ್ರ ಬಾಕಿ ಉಳಿದಿತ್ತು. ಸೇತುವೆ ಕಾಮಗಾರಿ ಶೀಘ್ರವಾಗಿ ಮುಕ್ತಾಯಗೊಳಿಸಿ ಸೇತುವೆ ಸಾರ್ವಜನಿಕ ಸೇವೆಗೆ ಸಮರ್ಪಿಸುವಂತೆ ಹೋರಾಟಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ದಿಢೀರನೇ ಕಾಮಗಾರಿಯಲ್ಲಿನ ಮೂಲನಕ್ಷೆಯನ್ನು ಬದಲಿಸಿ, ಇದೀಗ ಏಕಾಏಕಿ ಕೊನೆಯ ಹಂತದ ಕಾಮಗಾರಿಯನ್ನು ಮುಕ್ತಾಯಗೊಳಿಸಲಾಗಿದೆ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ನಗರಸಭೆಯ ಸದಸ್ಯರಾದ ಜಾರ್ಜ್, ಮೋಹನ್ ಕುಮಾರ್, ಉದಯ ಕುಮಾರ್, ಮಾಜಿ ಉಪಮೇಯರ್ ಮಹ್ಮದ್ ಸನಾವುಲ್ಲಾ, ಮುಖಂಡರಾದ ರಮೇಶ್ ರೇವಣ್ಕರ್, ಕೃಷ್ಣಪ್ಪ, ಶಂಕರ್‌ರಾವ್, ತರುಣ್ ಕುಮಾರ್, ನರಸಿಂಹ, ಮೂರ್ತಿ, ಸರವಣ, ಮಿಸಾಳೆ, ರಾಜಶೇಖರ್ ಸೇರಿದಂತೆ ಇನ್ನಿತರರು ಪ್ರಸ್ತುತ ಕೈಗೊಂಡಿ ರುವ ಕಾಮಗಾರಿ ಅವೈಜ್ಞಾನಿಕವಾಗಿದೆ. ಕಾಮಗಾರಿಯನ್ನು ಮೂಲ ನೀಲನಕ್ಷೆಯಂತೆಯೇ ಮತ್ತೆ ಕಾಮಗಾರಿ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.