ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದ ತಮಿಳುನಾಡು ಸರ್ಕಾರದ ಆಸೆಗೆ ತಣ್ಣಿರೆರಚುವಂತೆ, ಅದನ್ನು ಕೇಂದ್ರ ಸರ್ಕಾರ ಉಡಾನ್‌ ಪಟ್ಟಿಯಿಂದ ಹೊರಗಿಟ್ಟಿದೆ. ಇದಕ್ಕೆ, ಬೆಂಗಳೂರು ವಿಮಾನ ನಿಲ್ದಾಣ (ಬಿಎಎಲ್‌) ಜೊತೆಗೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಕಾರಣವನ್ನು ನೀಡಲಾಗಿದೆ.

ಚೆನ್ನೈ: ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದ ತಮಿಳುನಾಡು ಸರ್ಕಾರದ ಆಸೆಗೆ ತಣ್ಣಿರೆರಚುವಂತೆ, ಅದನ್ನು ಕೇಂದ್ರ ಸರ್ಕಾರ ಉಡಾನ್‌ ಪಟ್ಟಿಯಿಂದ ಹೊರಗಿಟ್ಟಿದೆ. ಇದಕ್ಕೆ, ಬೆಂಗಳೂರು ವಿಮಾನ ನಿಲ್ದಾಣ (ಬಿಎಎಲ್‌) ಜೊತೆಗೆ ಮಾಡಿಕೊಳ್ಳಲಾಗಿರುವ ಒಪ್ಪಂದದ ಕಾರಣವನ್ನು ನೀಡಲಾಗಿದೆ.

ಹೊಸೂರು ಸಮೀಪದ ಶೂಲಗಿರಿಯಲ್ಲಿ 2,300 ಎಕರೆಯಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ರಾಜ್ಯಸರ್ಕಾರ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದ್ದು, ಕೇಂದ್ರದ ಪರವಾನಗಿ ಸಿಗುವುದು ಬಾಕಿಯಿದೆ. ಆದರೆ ಉಡಾನ್‌ ನಿಯಮದ ಪ್ರಕಾರ, ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 150 ಕಿ.ಮೀ. ಒಳಗಿರುವ ಪ್ರದೇಶದಲ್ಲಿ ಇನ್ನೊಂದು ಏರ್‌ಪೋರ್ಟ್‌ ನಿರ್ಮಾಣ ಮಾಡುವಂತಿಲ್ಲ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊಸೂರು ಕೇವಲ 80 ಕಿ.ಮೀ. ದೂರವಿರುವ ಕಾರಣ, ಒಪ್ಪಂದದ ಪ್ರಕಾರ 2033ರ ವರೆಗೆ ಅಲ್ಲಿ ಏರ್‌ಪೋರ್ಟ್‌ ನಿರ್ಮಾಣ ಸಾಧ್ಯವಿಲ್ಲ. ಹೀಗಾಗಿ ಉಡಾನ್‌ ಪಟ್ಟಿಯಲ್ಲಿ ಹೊಸೂರು ನಿಲ್ದಾಣ ಜಾಗ ಪಡೆದಿಲ್ಲ. ಆದರೆ ತಮಿಳುನಾಡಿನ ವೆಲ್ಲೂರು ಮತ್ತು ನೆಯ್ವೇಲಿಯಲ್ಲಿ ತಲೆಯೆತ್ತಲಿರುವ ವಿಮಾನ ನಿಲ್ದಾಣಗಳನ್ನು ಪರಿಗಣಿಸಲಾಗಿದೆ. ಆದರೆ ತಮಿಳುನಾಡು ಸರ್ಕಾರ ಮಾತ್ರ ಉದ್ಯಮ ಚಟುವಟಿಕೆಗಳು, ಟ್ರಾಫಿಕ್‌ನಂತಹ ಕಾರಣಗಳನ್ನು ನೀಡಿ ತನ್ನ ಯೋಜನೆ ಕೈಬಿಡಲು ನಿರಾಕರಿಸಿದ್ದು, ಬಿಐಎಎಲ್‌ ಜತೆ ಮಾತುಕತೆಗೆ ಮುಂದಾಗಿದೆ. ಒಂದೊಮ್ಮೆ ಈ ಒಪ್ಪಂದ ಏರ್ಪಡದಿದ್ದಲ್ಲಿ, 2033ರ ವರೆಗೆ ಏರ್‌ಪೋರ್ಟ್‌ ನಿರ್ಮಾಣ ಸಾಧ್ಯವಾಗುವುದಿಲ್ಲ.