- ನಾಯಿಗಳ ಕಾಟ ತಡೆಗೆ ಕೆಟಿಜೆ ನಗರ ಮಹಿಳೆಯರ ವಿನೂತನ ಪ್ರಯತ್ನ
- - -- ನೇರಳೆ ಬಣ್ಣದ ನೀರಿನ ಬಾಟಲು, ಡಬ್ಬ ಇಟ್ಟರೆ ಶ್ವಾನಗಳೇ ಬರೋದಿಲ್ಲವಂತೆ
- ಬೆನ್ನುಹತ್ತಿ ಕಚ್ಚುಲು ಬರುವ ನಾಯಿಗಳ ಸುಳಿವಿಲ್ಲ, ಮನೆ ಅಂಗಳವೂ ಸ್ವಚ್ಛ- - -
ಕನ್ನಡಪ್ರಭ ವಾರ್ತೆ ದಾವಣಗೆರೆಹುಚ್ಚುನಾಯಿ, ಬೀದಿನಾಯಿಗಳ ಹಾವಳಿಯಿಂದ ರೋಸಿಹೋಗಿದ್ದ, ದಾಳಿಗೆ ತುತ್ತಾದ ಜನರು ಈಗ ನಾಯಿಗಳ ಕಾಟದಿಂದ ಬಚಾವಾಗಲು, ಮನೆ-ಅಂಗಳ ಸ್ವಚ್ಛವಾಗಿ ಕಾಪಾಡಿಕೊಳ್ಳಲು ಬಿಳಿಬಣ್ಣದ ಬಟ್ಟೆ ಶುಭ್ರಗೊಳಿಸಲು ಹಾಕುವ, ಉಜಾಲ ನೀಲಿ/ನೇರಳೆ ಬಣ್ಣದ ದ್ರವದ ಮೊರೆಹೋಗಿದ್ದಾರೆ, ಕೊಂಚ ಯಶಸ್ಸೂ ಕಂಡಿದ್ದಾರೆ!
ಹೌದು. ಇದು ಅಚ್ಚರಿ ಎನಿಸಿದರೂ ಸತ್ಯ. ಕೆಟಿಜೆ ನಗರ 10ನೇ ತಿರುವಿನ ಕೆಲ ಮಹಿಳೆಯರು , ವೃದ್ಧೆಯರು ಬೀದಿನಾಯಿಗಳ ಉಪಟಳ ವಿರುದ್ಧ ನೀಲಿ ನೀರಿನ ಸಮರ ಸಾರಿದ್ದಾರೆ. ಉಜಾಲ ಅಥವಾ ರೂಬಿ ಸೇರಿದಂತೆ ಬಿಳಿಬಟ್ಟೆಗೆ ಹಾಕುವ ನೇರಳೆ ಬಣ್ಣದ ರಾಸಾಯನಿಕ ನೀರು ನಾಯಿ ಓಡಿಸೋಕೆ ಬಳಸುತ್ತಿರೋದು ಕುತೂಹಲಕ್ಕೆ ಕಾರಣವಾಗಿದೆ. ಈ ರಾಸಾಯನಿಕ ನೀರಿಗೂ, ನಾಯಿಗಳಿಗೂ ಇರುವ ದ್ವೇಷ/ಹೆದರಿಕೆ ಎಂಥದ್ದು ಎಂಬ ಹುಳು ಎಲ್ಲರ ತಲೆಹೊಕ್ಕಿದೆ.ಕೆಲ ದಿನಗಳ ಹಿಂದೆ ಕೆಟಿಜೆ ನಗರದ ಕೆಲ ಮನೆಗಳ ಅಂಗಳದಲ್ಲಿ ನೇರಳೆ/ನೀಲಿ ಬಣ್ಣದ ನೀರನ್ನು ಪಾರದರ್ಶಕ ಪ್ಲಾಸ್ಟಿಕ್ ಬಾಟಲುಗಳಲ್ಲಿ ತುಂಬಿಡುತ್ತಿದ್ದರು. ಇದು ಜನರ ಗಮನ ಅಷ್ಟೇನೂ ಸೆಳೆದಿರಲಿಲ್ಲ. ಆದರೆ, ಬಾಟಲಿಗಳಲ್ಲಿ ಉಜಾಲ ರಾಸಾಯನಿಕ ಹಾಕಿದ ನೀರು ತುಂಬಿಟ್ಟವರ ಮನೆ ಬಳಿ ಅಪ್ಪಿತಪ್ಪಿಯೂ ನಾಯಿ ಸುಳಿದಿಲ್ಲವಂತೆ. ಮನೆ ಸಮೀಪ ಮಲ-ಮೂತ್ರ ವಿಸರ್ಜಸುವ ನಾಯಿಗಳೂ ಕಂಡಿಲ್ಲವಂತೆ!
ಇದೇ ಟ್ರಿಕ್ ಅನ್ನು 10ನೇ ಕ್ರಾಸ್‌ನ ಅನೇಕ ಮನೆಗಳವರು ಅರಿತು ಮಕ್ಕಳು, ಮಹಿಳೆಯರು, ವೃದ್ಧರನ್ನು ನಾಯಿಗಳಿಂದ ರಕ್ಷಿಸಲು ಉಜಾಲ/ರೂಬಿ ಬೆರೆಸಿದ ನೀರು ರಾಮಬಾಣ ಎಂದರಿತಿದ್ದಾರೆ. ತಮ್ಮ ಮನೆ ಬಳಿಯೂ ಬಾಟಲಿಗಳಲ್ಲಿ ನೇರಳೆ ನೀರು ತುಂಬಿಡುತ್ತಿದ್ದೇವೆ. ಹೀಗೆ ಉಜಾಲ ನೀರಿನ ಬಾಟಲುಗಳನ್ನು ತುಂಬಿಟ್ಟು, ನಾಯಿಗಳ ಹಾವಳಿಇಂದ ಸದ್ಯಕ್ಕೆ ಪಾರಾಗಿದ್ದೇವೆ ಎನ್ನುತ್ತಾರೆ ಸ್ಥಳೀಯರಾದ ಬಾಲನಾಗಮ್ಮ, ಯಲ್ಲಮ್ಮ, ಶೋಭಾ, ನೂರ್ ಜಹಾನ್, ಲಕ್ಷ್ಮಮ್ಮ.ವಿದ್ಯಾರ್ಥಿ ಭವನದಿಂದ ಹರ್ಷ ಬಾರ್‌ವರೆಗಿನ ಹದಡಿ ರಸ್ತೆಯ ಉದ್ದಕ್ಕೂ ಮಾಂಸದಂಗಡಿಗಳ ಸಾಲುಗಳಿವೆ. ಹೋಟೆಲ್‌ಗಳಲ್ಲಿ ಉಳಿದ ಮಾಂಸಾಹಾರ ಸೇವಿಸಿ, ವ್ಯಗ್ರವಾಗಿ, ಮದವೇರಿಸಿಕೊಂಡ ನಾಯಿಗಳು ರಸ್ತೆಯಲ್ಲಿ ದಾರಿಹೋಕರು, ಮಕ್ಕಳು, ಮಹಿಳೆಯರು, ವೃದ್ಧರನ್ನು ಕಚ್ಚಿ ಗಾಯಗೊಳಿಸುತ್ತಿವೆ. ಇನ್ನು ದ್ವಿಚಕ್ರ ವಾಹನ ಸವಾರರಿಗೆ ಈ ನಾಯಿಗಳ ಹಿಂಡು ಬೆನ್ನುಹತ್ತಿ, ಬೀಳಿಸಿರುವ ನಿದರ್ಶನಗಳೂ ಇವೆ. ಇಲ್ಲಿಯೂ ಉಜಾಲ/ರೂಬಿ ಬೆರೆಸಿದ ನೇರಳೆ ನೀರು ತುಂಬಿಟ್ಟಲ್ಲಿ ಫಲ ದೊರೆಯುತ್ತಾ ಅನ್ನೋದು ಪ್ರಶ್ನೆ. ನಾಯಿಗಳು ಯಾಕೆ ನೀಲಿ ನೀರಿನ ಬಾಟಲಿ ಬಳಿ ಬರುತ್ತಿಲ್ಲ, ಬಾಟಲಿ ಮೂಸಿ ಓಡಿ ಹೋಗುತ್ತವೋ ಗೊತ್ತಿಲ್ಲ. ಹೀಗೊಂದು ಪ್ರಯೋಗ ಮಾಡಿದ್ದವರು ನಮ್ಮ ರಸ್ತೆ ಮಹಿಳೆಯರು ಎನ್ನುತ್ತಾರೆ ಕಾಂಗ್ರೆಸ್ ಮುಖಂಡ, ಪಾಲಿಕೆ ಸದಸ್ಯ ಡಿ.ಎನ್.ಜಗದೀಶ, ಬಿಜೆಪಿ ಮುಖಂಡರಾದ ಪಿ.ಎನ್.ಜಗದೀಶಕುಮಾರ ಪಿಸೆ, ಕೆಟಿಜೆ ನಗರ ಲೋಕೇಶ.
ಸದ್ಯಕ್ಕೆ ಇಂತಹ ಪ್ರಯೋಗ ಸ್ಥಳೀಯರಲ್ಲೂ ಕುತೂಹಲ ಮೂಡಿಸಿದೆ. ಹೀಗೆ ರಾಸಾಯನಿಕದ ನೇರಳೆ ನೀರಿನ ಬಾಟಲಿಗೆ ಹೆದರಿ ನಾಯಿಗಳು ಬರುತ್ತಿಲ್ಲ ಅನ್ನೋದು ಅದೆಷ್ಟು ಸತ್ಯವೋ, ಮಿಥ್ಯವೋ. ಒಟ್ಟಾರೆ ನಾಯಿಗಳು ಬಂದರೂ, ನೇರಳೆ ನೀರಿನ ಬಾಟಲಿಯಿರುವ ಮನೆಯತ್ತ ಮಾತ್ರ ಸುಳಿಯದೇ, ವಾರೆನೋಟ ಬೀರುತ್ತ ತನ್ನ ಪಾಡಿಗೆ ಮುಂದೆ ಹೋಗೋದು ಮಾತ್ರ ವಿಶೇಷವಾಗಿದೆ.- - -
(ಬಾಕ್ಸ್) * ಮಹಾನಗರ ಪಾಲಿಕೆ ಬೀದಿಶ್ವಾನಗಳ ಹಿಡಿಯೋದಿಲ್ವೆ? ದಾವಣಗೆರೆಯಲ್ಲಿ ಬೀದಿನಾಯಿಗಳ ಹಾವಳಿ ಮಿತಿ ಮೀರುತ್ತಿದೆ. 2-3 ದಿನಕ್ಕೊಮ್ಮೆ 2-3 ಮಕ್ಕಳು, ಹಿರಿಯರು, ಮಹಿಳೆಯರು, ಯುವತಿಯರು ನಾಯಿ ಕಡಿತಕ್ಕೆ ಒಳಗಾಗುತ್ತಿದ್ದಾರೆ. ಆದರೆ, ನಾಯಿ ಹಾವಳಿಗೆ ಕಡಿವಾಣ ಹಾಕಬೇಕಾದ ಪಾಲಿಕೆ ಅಧಿಕಾರಿಗಳು-ಸಿಬ್ಬಂದಿ ಮಾತ್ರ ಪ್ರಾಣಿ ದಯಾಪರರು ಎಂಬವರಿಗೆ ಹೆದರಿ ಮೌನವಾಗಿರುವಂತಿದೆ.ಸಾರ್ವಜನಿಕರ ದೂರಿನ ಮೇರೆಗೆ ಸ್ವತಃ ಪಾಲಿಕೆ ಆಯುಕ್ತರೇ ಬೀದಿನಾಯಿಗಳನ್ನು ಹಿಡಿಯುವ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಧಿಕಾರಿ-ಸಿಬಂದಿ ತೋರಿಕೆಗೆ ಒಂದೆರೆಡು ನಾಯಿಗಳ ಹಿಡಿಯುತ್ತಾರೆ. ಮತ್ತಗೆ ಆ ನಾಯಿಗಳು ಹೊಸದಾಗಿ 3-4 ನಾಯಿಗಳ ಹಿಂಡಿನೊಂದಿಗೆ ಬಂದು ಕೆಟಿಜೆ ನಗರದ 10ರಿಂದ 16ನೇ ಕ್ರಾಸ್‌ವರೆಗಿನ ಜನರಿಗೆ ಕಾಟ ಕೊಡುತ್ತಿವೆ, ಕೆಲವರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ 10, 11, 12, 13ನೇ ಕ್ರಾಸ್‌ನ ನಿವಾಸಿಗಳ ಪಾಲಿಗೆ ಸಿಂಹಸ್ವಪ್ನವಾಗಿವೆ. ಶ್ವಾನಗಳ ಕಾಟಕ್ಕೆ ಕೊನೆ ಎಂದು?
- - --1ಕೆಡಿವಿಜಿ14,15.ಜೆಪಿಜಿ:
ದಾವಣಗೆರೆ ಕೆಟಿಜೆ ನಗರ 10ನೇ ಕ್ರಾಸ್‌ನಲ್ಲಿ ಬೀದಿನಾಯಿಗಳ ಹಾವಳಿಯಿಂದ ಮುಕ್ತರಾಗಲು ಮಹಿಳೆಯರು ಉಜಾಲ ನೀಲಿ ಬಣ್ಣದ ನೀರಿನ ಮೊರೆ ಹೋಗಿರುವುದು. -1ಕೆಡಿವಿಜಿ16, 17, 18.ಜೆಪಿಜಿ:ದಾವಣಗೆರೆ ಕೆಟಿಜೆ ನಗರ 10ನೇ ಕ್ರಾಸ್‌ನಲ್ಲಿ ನಾಯಿಗಳ ಹಾವಳಿಯಿಂದ ಮುಕ್ತರಾಗಲು ವೃದ್ಧೆಯೊಬ್ಬರು ಉಜಾಲ ನೀಲ್ ಬಣ್ಣದ ನೀರಿನ ಬಾಟಲಿಗೆ ಮೊರೆಹೋಗಿರುವುದು.