ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕ್ಯಾ.ಬ್ರಿಜೇಶ್‌ ಚೌಟ

KannadaprabhaNewsNetwork |  
Published : Mar 14, 2024, 02:08 AM IST
ಕ್ಯಾ.ಬ್ರಿಜೇಶ್‌ ಚೌಟ | Kannada Prabha

ಸಾರಾಂಶ

ಬುಧವಾರ ದೆಹಲಿಯಿಂದ ಹೊರಡಿಸಲಾದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕ್ಯಾ.ಬ್ರಿಜೇಶ್‌ ಚೌಟ ಅವರ ಹೆಸರು ಪ್ರಕಟ ಮಾಡುವುದರೊಂದಿಗೆ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಅವಕಾಶ ನಿರಾಕರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ದ.ಕ. ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸೇನಾಧಿಕಾರಿ, ಯುವ ನಾಯಕ, ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ ಅವರ ಹೆಸರನ್ನು ಪಕ್ಷದ ವರಿಷ್ಠರು ಘೋಷಣೆ ಮಾಡಿದ್ದಾರೆ. ಈ ಮೂಲಕ ಕೇಸರಿಯ ಭದ್ರಕೋಟೆಯಲ್ಲಿ ಹೊಸ ಮುಖಕ್ಕೆ ಆರ್‌ಎಸ್‌ಎಸ್‌ ಮಣೆ ಹಾಕಿದಂತಾಗಿದೆ. ಬುಧವಾರ ದೆಹಲಿಯಿಂದ ಹೊರಡಿಸಲಾದ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಕ್ಯಾ.ಬ್ರಿಜೇಶ್‌ ಚೌಟ ಅವರ ಹೆಸರು ಪ್ರಕಟ ಮಾಡುವುದರೊಂದಿಗೆ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಅವಕಾಶ ನಿರಾಕರಿಸಲಾಗಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಬದಲಾವಣೆ ಆಗಲೇ ಬೇಕು ಎಂದು ಪಕ್ಷ ಕಾರ್ಯಕರ್ತರ ಅಭಿಯಾನ ಹಾಗೂ ಸಂಘಪರಿವಾರ ಕೂಡ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಅಭ್ಯರ್ಥಿ ಬದಲಾವಣೆಗೆ ಅಂಕಿತ ಹಾಕಿದ್ದಾರೆ. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್‌ ಆಗಿ ಸ್ವಯಂ ನಿವೃತ್ತಿ ಹೊಂದಿರುವ ಕ್ಯಾ.ಬ್ರಿಜೇಶ್‌ ಚೌಟ ಅವರು ಸಮಾಜಸೇವೆಗೆ ಇಳಿದಿದ್ದರು. ನಳಿನ್‌ ಕುಮಾರ್‌ಗೆ ಟಿಕೆಟ್‌ ಮಿಸ್‌ ಹೇಗೆ?:ಮೂರು ಬಾರಿ ಸಂಸತ್‌ ಸದಸ್ಯರಾಗಿ, ನಾಲ್ಕೂವರೆ ವರ್ಷ ಕಾಲ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು ಕೇಂದ್ರ ನಾಯಕರ ಪಾಲಿಗೆ ನೀಲಿ ಕಣ್ಣಿನ ಹುಡುಗನೇ ಆಗಿದ್ದರು. ರಾಜ್ಯಾಧ್ಯಕ್ಷರಾಗಿ ಅತೀ ಹೆಚ್ಚು ಬಾರಿ ರಾಜ್ಯವನ್ನು ಸುತ್ತಾಡಿ ಪಕ್ಷವನ್ನು ಸಂಘಟಿಸಿದ್ದಲ್ಲದೆ, ಕೇರಳದ ಚುನಾವಣಾ ಸಹ ಪ್ರಭಾರಿಯೂ ಆಗಿದ್ದರು. ಆದರೂ ನಳಿನ್‌ ಕುಮಾರ್‌ ಕಟೀಲ್‌ಗೆ ನಾಲ್ಕನೇ ಬಾರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಆರಂಭಿಕ ದಿನಗಳಲ್ಲಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ನಳಿನ್‌ ಕುಮಾರ್ ಸುದ್ದಿಯಾಗಿದ್ದರು, ನಂತರ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾಗ ನಾಯಕರನ್ನು ಕಡೆಗಣಿಸುವ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ಪಕ್ಷದೊಳಗೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಜಿಲ್ಲೆಯಲ್ಲಿ ಸ್ಥಳೀಯವಾಗಿ ಕಾರ್ಯಕರ್ತರ ಪ್ರತಿರೋಧ, ಸಂಘಪರಿವಾರದ ಕೆಂಗಣ್ಣು ಇವೇ ಮೊದಲಾದವು ನಳಿನ್‌ ಕುಮಾರ್‌ ಕಟೀಲ್‌ಗೆ ಟಿಕೆಟ್‌ ನಿರಾಕರಣೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ಅಲ್ಲದೆ ತವರು ಜಿಲ್ಲೆಯ ಪುತ್ತೂರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಕಾಣಿಸಿದ ಅರುಣ್‌ ಕುಮಾರ್‌ ಪುತ್ತಿಲ ಬಂಡಾಯವನ್ನು ಸರಿಪಡಿಸುವಲ್ಲಿ ಸಾಕಷ್ಟು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಅಂದು ವಿಜಯೇಂದ್ರ ಘೋಷಿಸಿದ್ದು...: ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ನಾಲ್ಕನೇ ಬಾರಿ ಸ್ಪರ್ಧೆಗೆ ಉತ್ಸುಕರಾಗಿದ್ದರು. ಕೆಲವು ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಆಗಮಿಸಿದ ವಿಜಯೇಂದ್ರ ಅವರು ಮತ್ತೊಮ್ಮೆ ನಳಿನ್‌ ಕುಮಾರ್‌ ಅವರನ್ನು ಗೆಲ್ಲಿಸುವಂತೆ ಕರೆ ನೀಡಿ ಅಚ್ಚರಿ ಮೂಡಿಸಿದ್ದರು. ಇದು ಸಂಘಪರಿವಾರದ ಸಿಟ್ಟಿಗೆ ಕಾರಣವಾಗಿತ್ತು. ಆರ್‌ಎಸ್‌ಎಸ್‌ ಶಕ್ತಿ ಕೇಂದ್ರದ ಮುನಿಸು: ನಂತರದ ಬೆಳವಣಿಗೆಯಲ್ಲಿ ನಳಿನ್‌ ಕುಮಾರ್‌ ಕಟೀಲ್‌ಗೆ ಪರ್ಯಾಯವಾಗಿ ಕ್ಯಾ.ಬ್ರಿಜೇಶ್‌ ಚೌಟ ಅವರನ್ನುಸಂಘಪರಿವಾರ ತನ್ನ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಲೋಕಸಭಾ ಅಖಾಡಕ್ಕೆ ಇಳಿಯುವ ಮುನ್ಸೂಚನೆ ನೀಡಿತ್ತು. ಇಡೀ ಜಿಲ್ಲೆಯ ಸಂಘಪರಿವಾರ ಹಾಗೂ ಸಂಘಪರಿವಾರದ ಶಕ್ತಿ ಕೇಂದ್ರದ ಪ್ರಮುಖರು ಅಭ್ಯರ್ಥಿ ಬದಲಾವಣೆ ಮಾಡುವಲ್ಲಿ ಶಕ್ತಿಮೀರಿ ಶ್ರಮಿಸಿದೆ ಎಂದು ಹೇಳಲಾಗುತ್ತಿದೆ.

ನಳಿನ್‌ ಕುಮಾರ್‌ 15 ವರ್ಷ ಸಂಸದ: ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಬಿಜೆಪಿಯ ಧನಂಜಯ ಕುಮಾರ್‌ 12 ವರ್ಷ, ಕಾಂಗ್ರೆಸ್‌ನ ಜನಾರ್ದನ ಪೂಜಾರಿ 14 ವರ್ಷ ಕಾಲ ಸಂಸದರಾಗಿದ್ದರು, ನಳಿನ್‌ ಕುಮಾರ್‌ ಕಟೀಲ್ ಅವರು 15 ವರ್ಷ ಕಾಲ ಸಂಸದರಾಗಿ ದಾಖಲೆ ಬರೆದಿದ್ದಾರೆ.ಧನಂಜಯ ಕುಮಾರ್‌, ಡಿ.ವಿ.ಸದಾನಂದ ಗೌಡ ಬಳಿಕ ನಳಿನ್‌ ಕುಮಾರ್‌ ಕಟೀಲ್‌ ಸುದೀರ್ಘ ಅವಧಿಗೆ ಸಂಸದರಾದ ಹೆಗ್ಗಳಿಗೆ ಪಡೆದಿದ್ದಾರೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ