ಅದ್ಭುತ ಆಡಳಿತಗಾರ ಎಸ್.ಎಂ.ಕೃಷ್ಣ: ಸಚಿವ ಎನ್.ಚಲುವರಾಯಸ್ವಾಮಿ

KannadaprabhaNewsNetwork |  
Published : May 04, 2026, 01:45 AM IST
3ಕೆಎಂಎನ್ ಡಿ17,18 | Kannada Prabha

ಸಾರಾಂಶ

ಎಸ್.ಎಂ.ಕೃಷ್ಣ ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ಎದುರಾದ ಸತತ ನಾಲ್ಕು ವರ್ಷಗಳ ಕಾಲ ತೀವ್ರ ಬರಗಾಲ, ಕಾವೇರಿ ನೀರಿನ ಸಮಸ್ಯೆ, ಹೋರಾಟ, ವೀರಪ್ಪನ್‌ನಿಂದ ನಟ ಡಾ.ರಾಜ್ ಕುಮಾರ್ ಅವರ ಅಪಹರಣ ಪ್ರಕರಣದಂತಹ ಹಲವು ಕಠಿಣ ಸವಾಲು ಎದುರಿಸಿದ ನಾಯಕ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರು ಬೆಂಗಳೂರಿನಲ್ಲಿ ಐಟಿ-ಬಿಟಿ ಕಂಪನಿಗಳನ್ನು ಸ್ಥಾಪಿಸುವ ಮೂಲಕ ಸಿಲಿಕಾನ್ ಸಿಟಿಯನ್ನು ವಿಶ್ವದಲ್ಲೇ ಗಮನ ಸೆಳೆಯುವಂತೆ ಮಾಡಿದ ಅದ್ಭುತ ಆಡಳಿತಗಾರ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಬಣ್ಣಿಸಿದರು.

ನಗರದಲ್ಲಿ ವಕೀಲರ ಸಂಘದಿಂದ ಜಂಟಲ್‌ಮನ್ ರಾಜಕಾರಣಿ ಕೃಷ್ಣ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯವರೇ ಆದ ಎಸ್.ಎಂ.ಕೃಷ್ಣರು ರಾಜ್ಯದ ಮುಖ್ಯಮಂತ್ರಿಯಾಗಿ ಒಳ್ಳೆಯ ಆಡಳಿತ ನೀಡಿದರಾದರೂ ಮಂಡ್ಯದ ಅಭಿವೃದ್ಧಿಗೆ ಸರಿಯಾದ ರೀತಿಯಲ್ಲಿ ಸ್ಥಳೀಯ ರಾಜಕಾರಣಿಗಳು ಬಳಸಿಕೊಳ್ಳಲಿಲ್ಲ ಎಂದು ವಿಷಾದಿಸಿದರು.

ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ಎದುರಾದ ಸತತ ನಾಲ್ಕು ವರ್ಷಗಳ ಕಾಲ ತೀವ್ರ ಬರಗಾಲ, ಕಾವೇರಿ ನೀರಿನ ಸಮಸ್ಯೆ, ಹೋರಾಟ, ವೀರಪ್ಪನ್‌ನಿಂದ ನಟ ಡಾ.ರಾಜ್ ಕುಮಾರ್ ಅವರ ಅಪಹರಣ ಪ್ರಕರಣದಂತಹ ಹಲವು ಕಠಿಣ ಸವಾಲು ಎದುರಿಸಿದ ನಾಯಕ ಎಂದರು.

ಎಸ್.ಎಂ.ಕೃಷ್ಣರು ಒಂದು ರೀತಿಯಲ್ಲಿ ಸ್ಟೈಲಿಶ್ ರಾಜಕಾರಣಿ. ಶಿಸ್ತುಬದ್ಧ ಜೀವನವನ್ನು ನಡೆಸಿದವರು. ಮೈಸೂರು-ಬೆಂಗಳೂರು ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಿದರು. ಕೆಂಗಲ್ ಹನುಮಂತಯ್ಯ ಅವರು ವಿಧಾನ ಸೌಧ ನಿರ್ಮಾಣ ಮಾಡಿದರೆ, ಅದರ ಪಕ್ಕದಲ್ಲಿಯೇ ಎಸ್.ಎಂ.ಕೃಷ್ಣ ಅವರು ವಿಕಾಸ ಸೌಧ ನಿರ್ಮಿಸಿ ಮಾದರಿಯಾದರು. ದೂರದೃಷ್ಟಿಯುಳ್ಳ ಚಿಂತಕರಾಗಿದ್ದರು ಎಂದು ಬಣ್ಣಿಸಿದರು.

ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮಾತನಾಡಿ, ರಾಜಕೀಯದಲ್ಲಿ ಸಾಕ್ಷಿಗುಡ್ಡೆ ಬಿಟ್ಟು ಹೋದ ಎಸ್.ಎಂ.ಕೃಷ್ಣ ಅವರು ಅಂತಾರಾಷ್ಟ್ರೀಯ ಕಂಪನಿಗಳಿಗೆ ಹೆಚ್ಚು ಒತ್ತು ನೀಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದರು. ಸಿಎಂ ಆಗಿ ರಾಜ್ಯದ ಬಜೆಟ್ ಗಾತ್ರವನ್ನು ಹೆಚ್ಚಿಸಿ ಅಭಿವೃದ್ಧಿಗೆ ನಾಂದಿಯಾಡಿದ ಮಹಾನ್ ನಾಯಕ ಎಂದು ಶ್ಲಾಘಿಸಿದರು.

ಮೈಸೂರಿನ ರಾಮಕೃಷ್ಣ ಆಶ್ರಮ ಅಧ್ಯಕ್ಷ ಮುಕ್ತಿದಾನಂದ ಮಹಾರಾಜ್ ಸ್ವಾಮೀಜಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಯಾವ ಪರಿಸ್ಥಿತಿಯಲ್ಲಿಯೂ ಯಾವುದೇ ಒತ್ತಡಕ್ಕೆ ಒಳಗಾಗದೆ ಸಹಜವಾಗಿಯೇ ಕೆಲಸ ನಿರ್ವಹಿಸುತ್ತಿದ್ದರು. ಅವರ ವ್ಯಕ್ತಿತ್ವ ಈಗಿನ ರಾಜಕಾರಣಿಗಳಿಗೆ ಅವಶ್ಯವಾಗಿ ಬೇಕಿದೆ ಎಂದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಹತ್ತಿರದಿಂದ ನಾನು ಎಸ್.ಎಂ.ಕೃಷ್ಣರನ್ನು ನೋಡಿಲ್ಲ. ಆದರೆ, ರಾಜಕಾರಣದಲ್ಲಿ ಉನ್ನತ ಹುದ್ದೆ ಪಡೆದವರು. ಮುಖ್ಯಮಂತ್ರಿ ಸ್ಥಾನದಿಂದ ವಿದೇಶಾಂಗ ಸಚಿವ ಸ್ಥಾನದವರೆಗೂ ಉತ್ತಮ ಕೆಲಸ ಮಾಡಿದರು. ರಾಜಧಾನಿ ಬೆಂಗಳೂರಿಗೆ ಕೊಟ್ಟಂತಹ ಕೊಡುಗೆ ಅಪಾರ ಎಂದರು.

ಇದೇ ವೇಳೆ ಮಾಜಿ ಶಾಸಕ ಹಾಗೂ ಹಿರಿಯ ವಕೀಲ ಎಂ.ಶ್ರೀನಿವಾಸ್ ಅವರನ್ನು ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅಭಿನಂದಿಸಿದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಟಿ.ಎಸ್.ಸತ್ಯಾನಂದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ಮುಖಂಡರಾದ ಎಚ್.ಎನ್.ಯೋಗೇಶ್, ಚಲುವರಾಜು, ಜೋಗೀಗೌಡ, ವಕೀಲರ ಸಂಘದ ಕಾರ್ಯದರ್ಶಿ ಸತೀಶ್ ಇತರರುಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬುದ್ಧನ ಪ್ರೀತಿ, ಬಸವಣ್ಣನ ಸಮಾನತೆ, ಅಂಬೇಡ್ಕರ್ ಸಂವಿಧಾನದಿಂದ ಸಮ ಸಮಾಜ ನಿರ್ಮಾಣ
ಬೆಳೆದು ನಿಂತಿರುವ ಬೆಳೆಗಳ ರಕ್ಷಣೆಗೆ ಆಗ್ರಹಿಸಿ ರೈತಸಂಘದಿಂದ ಪ್ರತಿಭಟನೆ