ಆತ್ಮಭೂಷಣ್
ಒಂದನೇ ತರಗತಿಯಿಂದ 10ನೇ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಕಡ್ಡಾಯ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಜಾರಿಗೊಳಿಸಬೇಕು ಎಂದು ಹಿರಿಯ ಸಾಹಿತಿ ಡಾ.ಬಿ.ಪ್ರಭಾಕರ ಶಿಶಿಲ ಆಶಯ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಶುಕ್ರವಾರ ಎರಡು ದಿನಗಳ ದ.ಕ.ಜಿಲ್ಲಾ 27ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಐರೋಪ್ಯ ದೇಶಗಳಿಗೆ ಭೇಟಿ ನೀಡಿದ ವೇಳೆ ಅಲ್ಲಿ ಪ್ರಾಂತ್ಯದ ಭಾಷೆಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ಅದನ್ನೇ ಶಿಕ್ಷಣದಲ್ಲಿ ಬಳಸುತ್ತಾರೆ. ಇಂಗ್ಲಿಷ್ ಭಾಷೆಯನ್ನು ಲಿಂಕ್ ಭಾಷೆಯಾಗಿ ಬಳಕೆ ಮಾಡುತ್ತಾರೆ. ಯುನೆಸ್ಕೋ ಕೂಡ ಕನ್ನಡ ಭಾಷೆಗೆ ಬಹಳ ವರ್ಷಗಳ ಬಳಿಕ ಅಪಾಯದ ಮಾತನ್ನು ಹೇಳಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಭಾಷೆಯ ಬಗ್ಗೆ ಅವಜ್ಞೆ ಈಗಲೂ ಮುಂದುವರಿದಿದೆ. ಆದ್ದರಿಂದ 1ರಿಂದ 10ನೇ ತರಗತಿ ವರೆಗೆ ಕನ್ನಡದಲ್ಲೇ ಶಿಕ್ಷಣ ನೀಡುವ ಬಗ್ಗೆ ಸುಗ್ರೀವಾಜ್ಞೆಯನ್ನು ಸರ್ಕಾರ ಪಾಸು ಮಾಡಿ ರಾಜ್ಯಪಾಲರಿಗೆ ಕಳುಹಿಸಬೇಕು. ರಾಜ್ಯಪಾಲರು ಅಂಕಿತ ಹಾಕುವ ಭರವಸೆ ಇದೆ ಎಂದರು.ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಶಿಕ್ಷಕರ ಕೊರತೆಯನ್ನು ಎದುರಿಸುತ್ತಿವೆ. ಎರಡು ವರ್ಷಗಳ ಹಿಂದೆ 50 ಸಾವಿರ ಶಿಕ್ಷಕರು ನಿವೃತ್ತರಾಗಿದ್ದರು, 2026ರಲ್ಲಿ 38 ಸಾವಿರ ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಬದಲಿ ಶಿಕ್ಷಕರ ನೇಮಕ ಆಗದಿದ್ದರೆ, ಅಲ್ಲಿಗೆ ಸರ್ಕಾರಿ ಕನ್ನಡ ಶಾಲೆಗಳೂ ಮುಚ್ಚುವ ಪರಿಸ್ಥಿತಿ ಎದುರಾಗುತ್ತದೆ ಎಂದು ಅವರು ಎಚ್ಚರಿಸಿದರು.
ಶಾಲಾ ಕಾಲೇಜು ಮಕ್ಕಳಲ್ಲಿ ಕೋಮುವಾದಕ್ಕಿಂತ ಕತ್ತಿ, ದೊಣ್ಣೆ ಹಿಡಿಯುವ ರಾಜಕೀಯ ಕೋಮುವಾದ ಗಂಭೀರ ಸಂಗತಿಯಾಗಿದೆ. ಜಾತಿ ಮುನ್ನೆಲೆಗೆ ಬಂದ ಕೂಡಲೇ ಕಲೆ, ಸಂಸ್ಕೃತಿ ಬದಿಗೆ ತಳ್ಳಲ್ಪಟ್ಟಿದೆ. ಕೋಮುವಾದದ ಇನ್ನೊಂದು ಸ್ವರೂಪವೇ ಸಂವಿಧಾನವನ್ನು ಬದಲಾಯಿಸುವುದು. ಪೀಠಾಧಿಪತಿಗಳು ಜಗದ್ಗುರುಗಳಾಗುವ ಬದಲು ಅವರ ಬಾಯಿಯಿಂದಲೇ ಕೋಮುವಾದದ ಮಾತು ಹೊರಬರುತ್ತಿರುವುದು ಖೇದಕರ ಎಂದರು.
ಎಡ-ಬಲ ಪಂಥದ ವಿರುದ್ಧ ದೊಡ್ಡ ಹೋರಾಟವೇ ಪಂಪನ ಕಾಲದಿಂದ ನಡೆಯುತ್ತಿದೆ. ಪಂಪ ಎಡಪಂಥೀಯ ಹೋರಾಟಗಾರನಾಗಿದ್ದು, ಅಲ್ಲಿಂದ ಬಸವಣ್ಣ, ಅಕ್ಕಮಹಾದೇವಿ, ಕನಕದಾಸ, ಸಿದ್ಧಲಿಂಗಯ್ಯ ವರೆಗೂ ಹೋರಾಟ ನಡೆಯುತ್ತಲೇ ಇದೆ. ಕನ್ನಡ ಸಾಹಿತ್ಯ ಜಾತೀಯ ವ್ಯವಸ್ಥೆಯನ್ನು ವಿರೋಧಿಸುತ್ತಲೇ ಬಂದಿದೆ. ಪುಸ್ತಕೋದ್ಯಮ ಎನ್ನುವುದು ಸಂಸ್ಕೃತಿಯ ಭಾಗವಾಗಬೇಕು. ಲೇಖಕರು ಇದಕ್ಕೆ ಧ್ವನಿಯಾಗಬೇಕು. ಪ್ರತಿ ಮನೆಗಳಲ್ಲಿ ಪುಟ್ಟ ಗ್ರಂಥಾಲಯ ಇರಲಿ ಎಂದರು.
--------------ಯಕ್ಷಗಾನ ರಾಜ್ಯದ ಕಲೆಯಾಗಲಿ: ಡಾ.ಪ್ರಭಾಕರ ಶಿಶಿಲ
ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ಸರ್ವಾಧ್ಯಕ್ಷರು ಅಧ್ಯಕ್ಷ ಭಾಷಣವನ್ನು ಪೂರ್ತಿಯಾಗಿ ಓದುವುದು ವಾಡಿಕೆ. ಇಲ್ಲವೇ ಮುದ್ರಿತ ಪ್ರತಿಯನ್ನು ಹಿಡಿದುಕೊಂಡೇ ಅಲ್ಲಲ್ಲಿ ನೇರ ಮಾತನಾಡುವುದೂ ಇದೆ. ಆದರೆ ಸಮ್ಮೇಳನಾಧ್ಯಕ್ಷ ಡಾ.ಪ್ರಭಾಕರ ಶಿಶಿಲ ಅವರು ಈ ಎಲ್ಲದಕ್ಕೂ ಅಪವಾದ. ಸುಮಾರು 1.35 ಗಂಟೆಗಳ ಕಾಲ ಅಧ್ಯಕ್ಷ ಪೀಠದ ಎದುರೇ ನಿಂತುಕೊಂಡು ಮುದ್ರಿತ ಪ್ರತಿಯ ಸಹಾಯವಿಲ್ಲದೆಯೇ ನಿರರ್ಗಳ ಮಾತನಾಡಿ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಡಾ.ಪ್ರಭಾಕರ ಶಿಶಿಲ ಅವರ 76 ವಯಸ್ಸಿನ ಹುರುಪಿನ ನೇರ ಭಾಷಣಕ್ಕೆ ತಲೆದೂಗಿದ ಪ್ರೇಕ್ಷಕರು, ಭಾಷಣ ಮುಕ್ತಾಯ ಬಳಿಕ ಎದ್ದು ನಿಂತು ಭಾರಿ ಕರತಾಡನದೊಂದಿಗೆ ಗೌರವ ಸಲ್ಲಿಸಿದರು. ಅಧ್ಯಕ್ಷರ ಭಾಷಣದ ಪ್ರತಿಯನ್ನು ಭಾಷಣ ಮುಕ್ತಾಯದ ಬಳಿಕ ಎಲ್ಲರಿಗೆ ಹಂಚಲಾಯಿತು.