ಅಂಧ-ಅನಾಥ ಮಕ್ಕಳನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತಂದು ಬಿಡಿ: ಶ್ರೀ ಕಲ್ಲಯ್ಯಜ್ಜ

KannadaprabhaNewsNetwork |  
Published : Jun 01, 2025, 02:52 AM IST
ಬಳ್ಳಾರಿ ತಾಲೂಕಿನ ಡಿ.ಕಗ್ಗಲ್ ಗ್ರಾಮದಲ್ಲಿ ಜರುಗಿದ ಅಜಾತ ನವಲಗುಂದ ನಾಗಲಿಂಗ ಅಜ್ಜನವರ ಪುರಾಣ ಮಹಾಮಂಗಲ ವೇಳೆ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀಕಲ್ಲಯ್ಯಜ್ಜನವರಿಗೆ ತುಲಾಭಾರ ನೆರವೇರಿಸಲಾಯಿತು.  | Kannada Prabha

ಸಾರಾಂಶ

ರಾಜ್ಯದಲ್ಲಿ ಎಲ್ಲೇ ಅಂಧ-ಅನಾಥ ಮಕ್ಕಳು ಕಂಡು ಬಂದರೆ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತಂದು ಬಿಡಿ. ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ನೀಡಿ ಅವರ ಬದುಕು ರೂಪಿಸುವ ಜವಾಬ್ದಾರಿಯನ್ನು ಪುಣ್ಯಾಶ್ರಮ ತೆಗೆದುಕೊಳ್ಳಲಿದೆ.

ಗದುಗಿನ ಶ್ರೀ ಕಲ್ಲಯ್ಯಜ್ಜನರಿಗೆ ಡಿ. ಕಗ್ಗಲ್‌ ಗ್ರಾಮದಲ್ಲಿ ತುಲಾಭಾರ

ತುಲಾಭಾರ ಕಾರ್ಯಕ್ರಮದಲ್ಲಿ ಭಕ್ತ ಸಮೂಹಕ್ಕೆ ಮನವಿ

ವೀರೇಶ್ವರ ಪುಣ್ಯಾಶ್ರಮಕ್ಕೆ ಬಳ್ಳಾರಿ ಜಿಲ್ಲೆ ತವರು ಮನೆ ಇದ್ದಂತೆ

ಪೋಷಕರು ಬಾಲ್ಯದಲ್ಲಿಯೇ ಮಕ್ಕಳಿಗೆ ದೇಶಪ್ರೇಮ ಮೂಡಿಸಿ

ಕನ್ನಡಪ್ರಭ ವಾರ್ತೆ ಬಳ್ಳಾರಿ

ರಾಜ್ಯದಲ್ಲಿ ಎಲ್ಲೇ ಅಂಧ-ಅನಾಥ ಮಕ್ಕಳು ಕಂಡು ಬಂದರೆ ಗದುಗಿನ ವೀರೇಶ್ವರ ಪುಣ್ಯಾಶ್ರಮಕ್ಕೆ ತಂದು ಬಿಡಿ. ಮಕ್ಕಳಿಗೆ ಉಚಿತ ಊಟ, ವಸತಿ, ಶಿಕ್ಷಣ ನೀಡಿ ಅವರ ಬದುಕು ರೂಪಿಸುವ ಜವಾಬ್ದಾರಿಯನ್ನು ಪುಣ್ಯಾಶ್ರಮ ತೆಗೆದುಕೊಳ್ಳಲಿದೆ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಹೇಳಿದರು.

ತಾಲೂಕಿನ ಡಿ. ಕಗ್ಗಲ್ ಗ್ರಾಮದಲ್ಲಿ ಜರುಗಿದ ಅಜಾತ ನವಲಗುಂದ ನಾಗಲಿಂಗ ಅಜ್ಜನವರ ಪುರಾಣ ಮಹಾಮಂಗಲ ಹಾಗೂ ಶ್ರೀಗಳ ತುಲಾಭಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಕವಿ ಗವಾಯಿಗಳು ಅವಿರತ ಶ್ರಮದಿಂದ ರಾಜ್ಯದ ನಾಲ್ಕು ಕಡೆ ಪುಣ್ಯಾಶ್ರಮಗಳನ್ನು ಆರಂಭಿಸಲಾಗಿದೆ. ಅಂಧ-ಅನಾಥರಿಗೆ ಆಶ್ರಯ ನೀಡಿ, ಶಿಕ್ಷಣ ನೀಡಲಾಗುತ್ತದೆ. ನಮ್ಮ ಆಶ್ರಮಕ್ಕೆ ಹಣ, ಚಿನ್ನ ಮತ್ತಿತರ ವಸ್ತುಗಳನ್ನು ನೀಡಿ ಎಂದು ಕೇಳುವುದಿಲ್ಲ. ಅಂಧ-ಅನಾಥರು ಕಂಡು ಬಂದರೆ ಅವರಿಗೆ ಆಶ್ರಮದ ಆಶ್ರಯ ಕೊಡಿಸಿ. ನಿಮಗೆ ಪುಣ್ಯ ಲಭಿಸಲಿದೆ. ಜತೆಗೆ ಸತ್ಕಾರದಲ್ಲಿ ಭಾಗಿಯಾದ ಸಾರ್ಥಕತೆ ಮೂಡಲಿದೆ ಎಂದರು.

ಗದುಗಿನ ಪುಣ್ಯಾಶ್ರಮಕ್ಕೆ ಬಳ್ಳಾರಿ ಜಿಲ್ಲೆ ತವರುಮನೆ ಇದ್ದಂತೆ. ಬಳ್ಳಾರಿ ಬಳಿಯ ಶ್ರೀಧರಗಡ್ಡೆ, ಡಿ. ಕಗ್ಗಲ್, ದಮ್ಮೂರು, ಚಾನಾಳು, ಸಿರುಗುಪ್ಪ ತಾಲೂಕಿನ ಕರೂರು, ಶಿರಿಗೇರಿ ಹೀಗೆ ಹತ್ತಾರು ಗ್ರಾಮಗಳ ಭಕ್ತರು ಪುಣ್ಯಾಶ್ರಮಕ್ಕೆ ಪ್ರತಿವರ್ಷ ಹತ್ತಾರು ಕ್ವಿಂಟಲ್ ಅಕ್ಕಿಯನ್ನು ದೇಣಿಗೆಯಾಗಿ ನೀಡುತ್ತಿದ್ದು, ಭಕ್ತರು ನೀಡಿದ ಧಾನ್ಯಗಳಿಂದ ಆಶ್ರಮದಲ್ಲಿರುವ ಮಕ್ಕಳಿಗೆ ನಿತ್ಯ ಊಟೋಪಚಾರ ಮಾಡಲು ಸಾಧ್ಯವಾಗಿದೆ. ಭಕ್ತರು ಪೂರೈಸುವ ತುಲಾಭಾರದ ಮೊತ್ತವನ್ನು ಸಹ ವೀರೇಶ್ವರ ಪುಣ್ಯಾಶ್ರಮದ ಸೇವೆಗೆ ಸಲ್ಲುತ್ತದೆ ಎಂದು ಹೇಳಿದರು.

ಭಾರತದಲ್ಲಿ ಜನಿಸಿದ ಪ್ರತಿ ಮಗುವೂ ಭಾರತರತ್ನ ಇದ್ದಂತೆ. ಮಗುವಿಗೆ ಉತ್ತಮ ಸಂಸ್ಕಾರ, ಶಿಕ್ಷಣ ನೀಡಿದಲ್ಲಿ ದೇಶಕ್ಕಾಗಿ ಸೇವೆ ಮಾಡುವ ಮನೋಭಾವ ಬೆಳೆಯುತ್ತದೆ. ಬಾಲ್ಯದಲ್ಲಿಯೇ ಮಕ್ಕಳಿಗೆ ದೇಶಪ್ರೇಮ ಮೂಡಿಸುವ ಕೆಲಸವನ್ನು ಪೋಷಕರು ಮಾಡಬೇಕು ಎಂದು ಹೇಳಿದರು.

ಇದೇ ವೇಳೆ ಗ್ರಾಮದ ಶ್ರೀ ಈಶ್ವರ ದೇವಸ್ಥಾನ ಮುಂಭಾಗದಲ್ಲಿ ಜರುಗಿದ 15 ದಿನಗಳ ಪುರಾಣ ಮಹಾಮಂಗಲಗೊಂಡಿತು. ಗದುಗಿನ ಶಿವಲಿಂಗಯ್ಯಶಾಸ್ತ್ರಿ ಹಿರೇಮಠ ಪುರಾಣ ಪ್ರವಚನ ನೀಡಿದರು. ದೊಡ್ಡಬಸವ ಗವಾಯಿ ಡಿ. ಕಗ್ಗಲ್ ಹಾರ್ಮೋನಿಯಂ ಹಾಗೂ ಸಂಗನಕಲ್ಲು ಯೋಗೀಶ್ ಕುಮಾರ್ ತಬಲಾ ಸಾಥ್ ನೀಡಿದರು. ಪುರಾಣ ಮಹಾಮಂಗಲ ದಿನದಂದು ಗ್ರಾಮದ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಗಂಗೆಪೂಜೆ, ಈಶ್ವರ ಲಿಂಗಕ್ಕೆ ಮಹಾರುದ್ರಾಭಿಷೇಕ ನಡೆಯಿತು. ಡಿ. ಕಗ್ಗಲ್ ಗ್ರಾಮದ ಶ್ರೀ ಪಂಚಾಕ್ಷರಿ ಕಲ್ಚರಲ್ ಟ್ರಸ್ಟ್ ಪುರಾಣ ಪ್ರವಚನ ಹಾಗೂ ಶ್ರೀ ಕಲ್ಲಯ್ಯಜ್ಜನವರ ತುಲಾಭಾರ ಕಾರ್ಯಕ್ರಮ ಆಯೋಜಿಸಿತ್ತು. ಗ್ರಾಮದ ವಿವಿಧ ಭಕ್ತರ 20 ತುಲಾಭಾರಗಳು ನಡೆದವು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌