ಬುದ್ಧಿಮಾಂದ್ಯ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತನ್ನಿ

KannadaprabhaNewsNetwork | Published : Feb 3, 2025 12:31 AM

ಸಾರಾಂಶ

ನಮ್ಮ ಆಶ್ರಮ ಮಹಾವನ ಬೌದ್ಧಿಕ ವಿಕಲ ಚೇತನರ ವಸತಿಯುಕ್ತ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿದ ಸಚಿವ ಸುಧಾಕರ್‌

ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ಬುದ್ಧಿಮಾಂದ್ಯ ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸ ಮಹತ್ತರವಾದದ್ದು. ಸಮಾಜ ಸೇವೆ ಮಾಡುವಂತ ಗುಣಗಳನ್ನು ಬೆಳೆಸಿಕೊಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಪಟ್ಟಣದ ಹಾನಗಲ್ ರಸ್ತೆಯಲ್ಲಿ ನಮ್ಮ ಆಶ್ರಮ ಮಹಾವನ ಬೌದ್ಧಿಕ ವಿಕಲ ಚೇತನರ ವಸತಿಯುಕ್ತ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಸಮಾಜ ಮುಕಿ ಸೇವೆಗಳು ಮಾಡುವುದು ವಿರಳ. ಸರ್ಕಾರಿ ಅಧಿಕಾರಿಯಾಗಿ ನಿವೃತ್ತಿ ಪಡೆದು ಬುದ್ಧಿಮಾಂದ್ಯ ಮಕ್ಕಳಿಗೆ ವಿದ್ಯೆ ನೀಡುವವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿರ್ಧಾರ ಮಾಡಿರುವ ಶ್ರೀನಿವಾಸ ಮೂರ್ತಿಗಳ ಕಾರ್ಯ ಅವಿಸ್ಮರಣೀಯ. ಮಾನಸಿಕ ವಿಕಲೇತನರನ್ನು ನಿರ್ಲಕ್ಷ ಮಾಡದೆ ಅವರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸಬೇಕು. ಅಂತಹ ಮಕ್ಕಳನ್ನು ಸಮಾಜದಲ್ಲಿ ಸಬಲಾರಣ್ಣಗಿಸಬೇಕು. ಈ ಕಾರ್ಯಕ್ಕೆ ಸರ್ಕಾರದಿಂದ ಸಿಗುವ ಸೌಲಭ್ಯವನ್ನು ನೀಡುತ್ತೇನೆ. ಮುಂದಿನ ದಿನಗಳಲ್ಲಿ ನಮ್ಮ ಆಶ್ರಮ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸಿದರು.

ನಮ್ಮ ಆಶ್ರಮ ಸಂಸ್ಥಾಪಕ ಮೊಳಕಾಲ್ಮುರು ಶ್ರೀನಿವಾಸ ಮೂರ್ತಿ ಮಾತನಾಡಿ, ಮಾನಸಿಕ ವಿಕಲ ಚೇತನರ ಪೋಷಣೆಯ ಜತಗೆ ಅವರನ್ನು ಇತರೆ ಮಕ್ಕಳಂತೆ ಉತ್ತಮ ಸ್ಥಾನ ನೀಡುವುದು ಎಲ್ಲರ ಕರ್ತವ್ಯ. ಇಲ್ಲಿನ ಶಾಲೆಯಲ್ಲಿ ಬುದ್ಧಿಮಾಂದ್ಯ ಮಕ್ಕಳಿಗೆ ಊಟ ವಸತಿ ಸೌಲಬ್ಯ ಕಲ್ಪಿಸಿ ಅವರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡುತ್ತಿದ್ದೇವೆ. ಪ್ರತಿಯೊಬ್ಬರೂ ಅಂತಹ ಮಕ್ಕಳನ್ನು ಇಲ್ಲಿಗೆ ದಾಖಲಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಸವ ಸಮಿತಿ ಅಂತಾರಾಷ್ಟ್ರೀಯ ಅಧ್ಯಕ್ಷ ಲಂಡನ್ ಮಹದೇವಯ್ಯ, ಗ್ರಾಪಂ ಅಧ್ಯಕ್ಷೆ ಸ್ವಪ್ನ ಶ್ರೀನಿವಾಸ, ಕೃಷ್ಣ ಟ್ರಸ್ಟ ಅಧ್ಯಕ್ಷ ಎಂ.ಸದಾ ಶಿವಪ್ಪ, ಬೌದ್ಧ ಬಿಕ್ಕಿಣಿ ಮೈತ್ರಿ ಮಾತಾಜಿ, ತಹಸೀಲ್ದಾರ್

ಜಗದೀಶ್ ಸೇರಿ ಹಲವರು ಇದ್ದರು.

ಸಚಿವ ಡಿ.ಸುಧಾಕರ್ ವಿರುದ್ಧ ಪ್ರತಿಭಟನೆ:

ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲೂಕುಗಳಿಗೆ ಮಲತಾಯಿ ಧೋರಣೆ ತೋರಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಪದಾಧಿಕಾರಿಗಳು ಸಚಿವ ಡಿ.ಸುಧಾಕರ್ ವಿರುದ್ಧ ಪ್ರತಿಭಟಿಸಿದ ಘಟನೆ ನಡೆಯಿತು.

ಮೊಳಕಾಲ್ಮುರು ಪಟ್ಟಣದಲ್ಲಿ ಭಾನುವಾರ ಬುದ್ಧಿಮಾಂದ್ಯ ಶಾಲಾ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಸಚಿವರನ್ನು ಸುತ್ತುವರೆದ ರೈತರು ದಿಕ್ಕಾರದ ಘೋಷಣೆಗಳನ್ನು ಕೂಗಿ ಗೆರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲೂಕುಗಳು ಸದಾ ಬರಗಾಲಕ್ಕೆ ತುತ್ತಾಗಿವೆ. ಭದ್ರಾ ಯೋಜನೆಯಲ್ಲಿ ಕೇವಲ ಹಿರಿಯೂರು ತಾಲೂಕಿಗೆ ಸೀಮಿತರಾಗಿ ಅಲ್ಲಿನ 25 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿ ಜಿಲ್ಲೆಯ ಉಳಿದ ತಾಲೂಕುಗಳನ್ನು ಕಡೆಗಣಿಸಿದ್ದೀರಿ. ಜಿಲ್ಲೆಯ ಮಂತ್ರಿಯಾಗಿ ಕೇವಲ ಸ್ವ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವ ಮೂಲಕ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ನಿರ್ಲಕ್ಷ ಮಾಡಿದ್ದೀರಿ. ಯೋಜನೆಗಾಗಿ ತಂದಿದ್ದ ಕೋಟ್ಯಾಂತರ ರು. ಬೆಲೆ ಬಾಳುವ ಯಂತ್ರಗಳು ತುಕ್ಕು ಹಿಡಿದಿವೆ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತನಾಡಿದ ಸಚಿವ ಡಿ.ಸುಧಾಕರ್ ಮಾತನಾಡಿ, ನನ್ನ ಮೂಲ ತಾಲೂಕು ಇದೆ, ಚಳ್ಳಕೆರೆ ಮತ್ತು ಮೊಳಕಾಲ್ಮುರು ಎರಡೂ ಮುಖ್ಯ. ಭದ್ರಾ ಯೋಜನೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ನ್ಯಾಯ ನೀಡಿದ್ದೇವೆ. ಕೆಲವೇ ತಿಂಗಳಲ್ಲಿ ನೀರು ಹರಿಸಲು ಸೂಚನೆ ನೀಡಿದ್ದೇನೆ. ಯಾವ ತಾಲೂಕಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಸರ್ಕಾರ ಯೋಜನೆಗೆ ಅನುದಾನ ನೀಡುತ್ತಿದೆ. ಆದಷ್ಟು ಶೀಘ್ರವಾಗಿ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸುತ್ತೇನೆ ಎಂದು ಸ್ಪಷ್ಟ ಪಡಿಸಿದರು. ಈ ವೇಳೆ ರಾಜ್ಯ ರೈತ ಸಂಘದ ಬೇಡ ರೆಡ್ಡಿ ಹಳ್ಳಿ ಬಸವರೆಡ್ಡಿ, ನಿಜಲಿಂಗಪ್ಪ, ರವಿಕುಮಾರ್, ಮಂಜುನಾಥ ಸೇರಿ ಅನೇಕರಿದ್ದರು.

Share this article