ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ಆನಂದದಾಯಕ ರೀತಿಯಲ್ಲಿ ಶಿಕ್ಷಣ, ಕಲಿಕೆಯ ಕೌಶಲ್ಯಗಳನ್ನು ಪರಿಚಯಿಸಿ, ಅವರಲ್ಲಿ ಸೃಜನಶೀಲತೆ ಮತ್ತು ಸಹಯೋಗವನ್ನು ಬೆಳೆಸುವ ಶೈಕ್ಷಣಿಕ ಹಬ್ಬವೇ ಕಲಿಕಾ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿ.ಹನುಮಂತಪ್ಪ ಅವರು ಹೇಳಿದರು.
ಮಕ್ಕಳಲ್ಲಿ ವಿವಿಧ ರೀತಿಯ ಅಗಾಧ ಪ್ರತಿಭೆಗಳು ಅಡಗಿದ್ದು, ಅಗತ್ಯವಾದ ಪ್ರೋತ್ಸಾಹಿಸಿವಿರುವುದಿಲ್ಲ. ಮಕ್ಕಳಲ್ಲಿ ಕಲಿಕೆಯ ಕುತೂಹಲ, ಆಸಕ್ತಿ, ಅಭಿರುಚಿಯನ್ನು ಶಿಕ್ಷಕ ವರ್ಗ ಬೆಳೆಸಬೇಕು. ಪಠ್ಯ ವಿಷಯಗಳ ಕಲಿಕೆಯ ಜೊತೆಗೆ ಪಠ್ಯೇತರ ವಿಷಯಗಳಾದ ಸಾಹಿತ್ಯ, ಚಿತ್ರಕಲೆ ಸೇರಿದಂತೆ ಇನ್ನಿತರೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರಹೊಮ್ಮಿಸಬೇಕು ಎಂದರು.
ಪ್ರಸ್ತುತ ಸಮಾಜಕ್ಕೆ ಹೆಣ್ಣು ಮತ್ತು ಗಂಡು ಇಬ್ಬರ ಅವಶ್ಯಕತೆ ಇದೆ. ಕೆಲವು ಕುಟುಂಬಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಂಡು ಮಗುವಿಗೆ ನೀಡಲಾಗುತ್ತಿದೆ. ಹೆಣ್ಣು ಮಗುವೆಂದರೆ ಅಸಡ್ಡೆ ತೋರುವ ಸನ್ನಿವೇಶವಿದೆ. ಭ್ರೂಣದಲ್ಲಿ ಗಂಡು, ಹೆಣ್ಣು ಪತ್ತೆ ಮಾಡಲು ಕಾನೂನು ವಿರುದ್ಧವಾಗಿ ಕುಟುಂಬಸ್ಥರು ಮುಂದಾಗುತ್ತಿರುವುದು ವಿಷಾಧಕರ ಸಂಗತಿ ಎಂದು ಹೇಳಿದರು.ಹೆಣ್ಣು ಸಂತಾನ ಕಾಪಾಡುವುದು ಪ್ರತಿ ನಾಗರಿಕರ ಕರ್ತವ್ಯ. ತಾಯಿ, ಮಡದಿ ಹೆಣ್ಣೆಂಬುದು ಮನಗಾಣಬೇಕು. ಆದರೆ, ಕೆಲವು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ಭ್ರೂಣಲಿಂಗ ಪತ್ತೆ ಅಪರಾಧವಾದರೂ ಹೆಚ್ಚಿನ ಹಣ ಗಳಿಸುವುದಕ್ಕಾಗಿ ಭ್ರೂಣಲಿಂಗ ಪತ್ತೆಯಲ್ಲಿ ತೊಡಗಿರುವುದು ಖಂಡನೀಯ. ಜೊತೆಗೆ ಪಾಲಕರು ಹೆಣ್ಣನ್ನು ನಶಿಸಲು ಈ ರೀತಿ ಕಾರ್ಯಕ್ಕೆ ಮುಂದಾಗಬಾರದು ಎಂದರು.
ನಗರಸಭೆ ಸದಸ್ಯ ಮುನೀರ್ ಅಹ್ಮದ್ ಮಾತನಾಡಿ, ಕಲಿಕಾ ಹಬ್ಬವು ಮಕ್ಕಳಲ್ಲಿರುವ ವಿವಿಧ ಬಗೆಯ ಪ್ರತಿಭೆಯ ಸಾಮರ್ಥ್ಯವನ್ನು ಪ್ರಸ್ತುತಪಡಿಸಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಾಗುವಂತೆ ಮಾಡುತ್ತದೆ. ಕಲಿಕಾ ಹಬ್ಬ ಚಟುವಟಿಕೆ ಆಧಾರಿತವಾಗಿದೆ. ಇದರಿಂದ ಹೊಸ ಹೊಸ ಬಗೆಯ ಪಠ್ಯೇತರ ಚಟುವಟಿಕೆಯನ್ನು ಮಗು ಕಲಿಯಲು ಸಾಧ್ಯವಾಗುತ್ತದೆ ಎಂದರು.
ಇದೇ ವೇಳೆ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಶಾಲಾವೃದ್ಧಿ ಸಮಿತಿ ಅಧ್ಯಕ್ಷ ಅಜಮ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ಶಾಲಿನಿ, ಮಮತ ನಿರೂಪಿಸಿದರು. ಮುಖ್ಯೋಪಾಧ್ಯಾಯ ಎಸ್.ಟಿ.ಚಂದ್ರಯ್ಯ ಸ್ವಾಗತಿಸಿದರು. ವಸಂತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕಿ ಮಲ್ಲಿಕಾ ವಂದಿಸಿದರು.