ಗದಗ: ಸರ್ಕಾರದಿಂದ ವಿವಿಧ ಇಲಾಖೆಗಳಿಗೆ ಯೋಜನೆಗಳ ಅನುಷ್ಠಾನದಲ್ಲಿ ನಿಗದಿಪಡಿಸಿದ ಆರ್ಥಿಕ ಹಾಗೂ ಭೌತಿಕ ಗುರಿ ಸಾಧಿಸಬೇಕು. ಜನ ಸಾಮಾನ್ಯರಿಗೆ ಯೋಜನೆಯ ಫಲ ತಲುಪಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಶುಕ್ರವಾರ ಸಂಜೆ ಜಿಲ್ಲಾಡಳಿತ ಭವನದಲ್ಲಿ ಜರುಗಿದ ದಿಶಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸರಿಯಾದ ಅನುಷ್ಠಾನ ಆಗಲಿ ಅರ್ಹರಿಗೆ ಯೋಜನೆಗಳು ತಲುಪಲಿ. ಕಳೆದ ಬಾರಿ ಸಭೆಯ ಸೂಚನೆ ಏನು ಪಾಲಿಸಿದ್ದೀರಿ, ಮಾಹಿತಿ ನೀಡುವಂತೆ ಕೇಳುತ್ತಿದ್ದಂತೆ, ಪ್ರತಿಕ್ರಿಯೆ ನೀಡಿದ ನಗರಾಭಿವೃದ್ಧಿ ಪ್ರಾಧಿಕಾರದ ಶರಣಪ್ಪ ಅವರು ಅಸಮರ್ಪಕ ಮಾಹಿತಿ ನೀಡುತ್ತಿದ್ದಂತೆ, ಅಸಮರ್ಪಕ ಮಾಹಿತಿಯೊಂದಿಗೆ ಸಭೆ ಹಾಜರಾಗುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಗದಗ-ಬೆಟಗೇರಿ ಅವಳಿ ನಗರದ ನೀರು ಪೂರೈಕೆ ಕುರಿತಂತೆ ಪೌರಾಯುಕ್ತ ರಾಜಾರಾಮ್ ಪವಾರ್ ಮಾಹಿತಿ ನೀಡಿ, ನಗರದಲ್ಲಿ 5-6 ದಿನಕ್ಕೊಮ್ಮೆ ನೀರು ನೀಡಲಾಗುತ್ತದೆ. ಪೈಪ್‌ಲೈನ್, ವಾಲ್ ಅಳವಡಿಕೆ ಕುರಿತು ಕ್ರಿಯಾಯೋಜನೆ ಸಿದ್ಧಪಡಿಸಿದ್ದೇವೆ ಎಂದು ಸಭೆಗೆ ಮಾಹಿತಿ ಒದಗಿಸಿದರು. ಇದಕ್ಕೆ ಪ್ರತಿಕ್ರಿಸಿದ ಸಂಸದ ಬಸವರಾಜ್ ಬೊಮ್ಮಾಯಿ ಅವರು, ಗದಗ ಜನ ಸಹನೆ ಉಳ್ಳವರು ಹಾಗೂ ಒಳ್ಳೆಯವರು. ನೀವು 15 ದಿನಕ್ಕೊಮ್ಮೆ ನೀರು ಬಿಡುತ್ತಿರುವುದು ನನ್ನ ಗಮನಕ್ಕಿದೆ. ಕೆಲವು ಪ್ರದೇಶಗಳಲ್ಲಿ ಮಾತ್ರವೇ 5-6 ದಿನಕ್ಕೊಮ್ಮೆ ನೀರು ಸರಬರಾಜಾಗುತ್ತಿದೆ ಎಂದರು.ಬೇಸಿಗೆ ಆರಂಭವಾಗುತ್ತಿದೆ, ಜನಸಾಮಾನ್ಯರಿಗೆ ನಿಯಮಿತವಾಗಿ ಅಗತ್ಯಕ್ಕೆ ತಕ್ಕಂತೆ ನೀರು ಸರಬರಾಜು ಆಗಬೇಕು ಕನಿಷ್ಠ ಮೂರು ದಿನಕ್ಕೊಮ್ಮೆ ನೀರು ಒದಗಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.
ಗ್ರಾಮಗಳಲ್ಲಿ ಈಗಾಗಲೇ ಶೌಚಾಲಯಗಳು ನಿರ್ಮಾಣವಾಗಿದೆ, ಇನ್ನು ಕಾಮಗಾರಿ ಪ್ರಾರಂಭಿಸದಿರುವವರನ್ನು ಗುರುತಿಸಿ ಗ್ರಾಮ ಪಂಚಾಯತಿಯಿಂದ ಪ್ರೋತ್ಸಾಹಿಸಿ ಆದಷ್ಟು ಬೇಗ ಶೌಚಾಲಯ ನಿರ್ಮಾಣ ಆಗಬೇಕು ಎಂದರು. ಜಲ ಜೀವನ ಮಿಷನ್ ಕೇಂದ್ರ ಸರಕಾರದ ಮಹತ್ವಾಕ್ಷಾಂಕ್ಷಿ ಯೋಜನೆಯಾಗಿದ್ದು ಈಗಾಗಲೇ ಗ್ರಾಮಗಳಲ್ಲಿ ಮನೆಗಳ ಮುಂದೆ ನಳಗಳು ಇದ್ದು ಆದರೆ ಅದರಲ್ಲಿ ನೀರು ಬರಲಾರದಂತಹ ಸ್ಥಿತಿ ಇದೆ. ಜಿಪಂ ಜಿಪಂ ಸಿಇಓ ಅವರು ಕಾಳಜಿ ವಹಿಸಿ ಪ್ರತಿಯೊಬ್ಬರಿಗೂ ಉತ್ತಮ ಕುಡಿಯುವ ನೀರು ಕೊಡಿಸುವ ವ್ಯವಸ್ಥೆ ಆಗಬೇಕು ಎಂದರು.ಜಿಲ್ಲೆ ತುಂಗಭದ್ರಾ ಮತ್ತು ಮಲಪ್ರಭಾ ನದಿಗಳನ್ನು ಹೊಂದಿದ್ದು, ತೋಟಗಾರಿಗೆ ಬೆಳೆಗೆ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಹಾಗಾಗಿ ತೋಟಗಾರಿಕೆ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಶ್ರಮವಹಿಸಬೇಕು. ಅತ್ಯಂತ ಹಿಂದುಳಿದ ತಾಲೂಕಿನಲ್ಲಿರುವ ಶಾಲೆಯಲ್ಲಿ ಅತಿಥಿ ಶಿಕ್ಷಕರನ್ನು ನಿಯೋಜಿಸಿರುವ ನಂತರವು ವಿಜ್ಞಾನ, ಗಣಿತ, ಇಂಗ್ಲಿಷ್ ವಿಷಯಗಳಿಗೆ ಪರಿಣಿತರಿಂದ ಬೋಧನೆಯನ್ನು ಕೈಗೊಳ್ಳಿ. ಬೋಧಕರಿಗೆ ತಮ್ಮ ಟ್ರಸ್ಟ್‌ನಿಂದ ಹಣ ಒದಗಿಸಲಾಗುವುದು ಎಂದು ತಿಳಿಸಿದರು. ಆರೋಗ್ಯ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಕುರಿತು ಚರ್ಚಿಸಲಾಯಿತು.
ನರಗುಂದ ಶಾಸಕ ಸಿಸಿ ಪಾಟೀಲ ಮಾತನಾಡಿ, ನಗರಸಭೆಯಲ್ಲಿ ನೀವು ಯಶಸ್ವಿ ಪೌರಾಯುಕ್ತರಾಗಲು ಮೊದಲು ನೀರಿನ ಪ್ರಮುಖ ಪೈಪ್‌ಲೈನ್‌ಗೆ ಇರುವ ನೇರ ಕನೆಕ್ಷನ್ ಕಟ್ ಮಾಡಬೇಕು. ವಿನಾಕಾರಣ ನೀರು ಪೋಲಾಗುವುದನ್ನು ತಡೆದರೆ, ನಿಯಮಿತವಾಗಿ ನೀರು ಸರಬರಾಜು ಮಾಡಬಹುದು ಹಾಗೂ ಕೇಂದ್ರ ಸರ್ಕಾರದಿಂದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿಕರಿಗೆ ತರಬೇತಿ ನಡೆಸಲು ಆದೇಶಿಸಲಾಗಿದೆ. ತರಬೇತಿಯನ್ನು ಆದಷ್ಟು ಬೇಗ ಪ್ರಾರಂಭಿಸಲು ತಿಳಿಸಿದರು.ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿದರು. ಸಭೆಯಲ್ಲಿ ಜಿಪಂ ಸಿಇಓ ಭರತ್ ಎಸ್, ಎಡಿಸಿ ಅನ್ನಪೂರ್ಣ, ಕೃಷಿ ಜೆಡಿ ತಾರಾಮಣಿ, ಜಿಪಂ ಮುಖ್ಯ ಯೋಜನಾಧಿಕಾರಿ ನಿರ್ಮಲ, ಡಿಎಚ್ಓ ಡಾ.ಎಸ್.ಎಸ್. ನೀಲಗುಂದ, ತೋಟಗಾರಿಕೆ ಜೆಡಿ ಶಶಿಕಾಂತ ಕೋಟೆಮನೆ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳು ಹಾಜರಿದ್ದರು.