ಗೋಕರ್ಣ ಮೆಣಸಿಗೆ ರೋಗಬಾಧೆ, ಇಳುವರಿ ಕುಸಿತ

KannadaprabhaNewsNetwork |  
Published : Feb 23, 2025, 12:34 AM IST
ಮಜ್ಜಿಗೆ ಮೆಣಸು | Kannada Prabha

ಸಾರಾಂಶ

ಮಜ್ಜಿಗೆ ಮೆಣಸು, ಸಂಡಿಗೆ ಮಾಡಲೆಂದು ಗ್ರಾಹಕರು ಮುಗಿಬಿದ್ದು ಖರೀದಿಸುವ ಗೋಕರ್ಣ ಮೆಣಸಿನ ಇಳುವರಿ ರೋಗಬಾಧೆಯಿಂದ ಕುಂಠಿತವಾಗಿದೆ.

ವಸಂತಕುಮಾರ್ ಕತಗಾಲ

ಕಾರವಾರ: ಮಜ್ಜಿಗೆ ಮೆಣಸು, ಸಂಡಿಗೆ ಮಾಡಲೆಂದು ಗ್ರಾಹಕರು ಮುಗಿಬಿದ್ದು ಖರೀದಿಸುವ ಗೋಕರ್ಣ ಮೆಣಸಿನ ಇಳುವರಿ ರೋಗಬಾಧೆಯಿಂದ ಕುಂಠಿತವಾಗಿದೆ. ಮಾರುಕಟ್ಟೆಯಲ್ಲಿ ಮೆಣಸಿನ ಬರದಿಂದಾಗಿ ದರದಲ್ಲಿ ಭಾರಿ ಹೆಚ್ಚಳ ಉಂಟಾಗಿದೆ.

ಗೋಕರ್ಣದ ರುದ್ರಪಾದ, ಬಾವಿಕೊಡ್ಲ, ಗಂಗಾವಳಿ, ಗಂಗೆಕೊಳ್ಳ ಮತ್ತಿತರ ಕಡೆಗಳಲ್ಲಿ 8-10 ಹೆಕ್ಟೇರ್ ಪ್ರದೇಶದಲ್ಲಿ ವಿಶೇಷವಾಗಿ ಹಾಲಕ್ಕಿ ಒಕ್ಕಲಿಗರು ಮೆಣಸಿನ ಬೆಳೆ ಬೆಳೆಯುತ್ತಾರೆ. ಈ ಬಾರಿ ಥ್ರಿಪ್ಸ್ ನುಸಿ ಬಾಧೆಯಿಂದ ಮೆಣಸಿನ ಎಲೆಗಳು ಮೇಲ್ಮುಖದಲ್ಲಿ ಮುರುಟಿ ಹೋಗುತ್ತಿವೆ. ಕ್ರಮೇಣ ಹಳದಿ ಬಣ್ಣಕ್ಕೆ ತಿರುಗಿ ಎಲೆಗಳು ಉದುರಿ ಹೋಗುತ್ತವೆ. ಇದರಿಂದ ಗಿಡಗಳೂ ಸರಿಯಾಗಿ ಬೆಳವಣಿಗೆಯಾಗುತ್ತಿಲ್ಲ. ಗಿಡಗಳಿಗೆ ಮೆಣಸೂ ಕಚ್ಚುತ್ತಿಲ್ಲ. ಇದಕ್ಕೆ ಸ್ಥಳೀಯವಾಗಿ ಎಲೆ ಸುಳಿ ರೋಗ, ಎಲೆ ಮುರುಟು ರೋಗ ಎಂದೂ ಹೇಳುತ್ತಾರೆ.

ಗೋಕರ್ಣದ ಮಜ್ಜಿಗೆ ಮೆಣಸು, ಸಂಡಿಗೆ ಇದ್ದರೆ ಊಟದ ರುಚಿಯೇ ಬೇರೆ. ಮಳೆಗಾಲದ ಊಟಕ್ಕಾಗಿ 5-10 ಕೆಜಿ ಖರೀದಿಸಿ ಮಜ್ಜಿಗೆ ಮೆಣಸು ಮಾಡುವುದು ಬಹುಕಾಲದಿಂದ ನಡೆದುಬಂದಿದೆ.

ಈ ಮೆಣಸನ್ನು ಸ್ಥಳೀಯವಾಗಿ ಅಷ್ಟೇ ಅಲ್ಲ, ಕುಮಟಾ, ಹೊನ್ನಾವರ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಯಲ್ಲಾಪುರ ಮತ್ತಿತರ ಕಡೆಗಳಲ್ಲಿ ಪ್ರತಿ ವರ್ಷ ಮಜ್ಜಿಗೆ ಮೆಣಸು ಮಾಡಿ ಸಂಗ್ರಹಿಸಿಡುತ್ತಾರೆ. ಬೆಂಗಳೂರು, ಮುಂಬಯಿಗಳಲ್ಲಿನ ಜಿಲ್ಲೆಯ ಮೂಲದವರು ಈ ಮೆಣಸನ್ನು ಕೊಂಡೊಯ್ದು ಸಂಡಿಗೆ ಮಾಡುತ್ತಾರೆ.

ಈ ಬಾರಿ ಗೋಕರ್ಣ ಮೆಣಸು ಹುಡುಕಿಕೊಂಡು ಬಂದವರಿಗೆ ನಿರಾಸೆ ಉಂಟಾಗುತ್ತಿದೆ. ಅಗತ್ಯ ಇರುವಷ್ಟು ಮೆಣಸು ಸಿಗುತ್ತಿಲ್ಲ. ದರ ಮಾತ್ರ ಪ್ರತಿ ಕಿಲೋಗ್ರಾಂಗೆ ₹180-200 ಆಗಿದೆ. ಕಳೆದ ವರ್ಷ ₹80-90ಗಳಲ್ಲಿ ಮೆಣಸು ಸಿಗುತ್ತಿತ್ತು.

ಗೋಕರ್ಣದ ಮೆಣಸಿಗೆ ಅದರದ್ದೇ ಆದ ಸ್ವಾದ ಇದೆ. ಪರಿಮಳವೂ ಇದೆ. ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದೆ. ಬೇರೆ ಹಸಿ ಮೆಣಸಿಗಿಂತ ಸ್ವಲ್ಪ ದರ ಹೆಚ್ಚೇ ಆದರೂ ಗ್ರಾಹಕರು ಮುಗಿಬಿದ್ದು ಕೊಂಡುಕೊಳ್ಳುತ್ತಾರೆ.

ಮೆಣಸಿನ ಬೆಳೆಗಾರ ಬಾವಿಕೊಡ್ಲದ ದಿನೇಶ ಗೌಡ ಕಳೆದ ವರ್ಷ ವಾರಕ್ಕೆ 1 ಕ್ವಿಂಟಲ್‌ನಷ್ಟು ಇಳುವರಿ ಪಡೆಯುತ್ತಿದ್ದರು. ಈ ವರ್ಷ ಅಷ್ಟೇ ಪ್ರದೇಶದಲ್ಲಿ ಮೆಣಸು ಬೆಳೆದರೂ ವಾರಕ್ಕೆ 10 ಕೆಜಿಯಷ್ಟೂ ಮೆಣಸು ಸಿಗುತ್ತಿಲ್ಲ ಎನ್ನುತ್ತಾರೆ.

ಚಳಿಗಾಲದಲ್ಲಿ ಈ ರೋಗ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಈ ರೋಗಕ್ಕೆ ಇಮಿಡಾ ಸೇರಿದಂತೆ ಇನ್ನು ಕೆಲ ಔಷಧಿಗಳಿವೆ. ಅವುಗಳನ್ನು ಸಿಂಪಡಿಸಿದಲ್ಲಿ ರೋಗ ನಿಯಂತ್ರಿಸಲು ಸಾಧ್ಯ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚೇತನ್.

ಗೋಕರ್ಣ ಮೆಣಸಿನ ಪರಿಮಳ, ರುಚಿಯೇ ಬೇರೆ. ಇದರ ಮೂಲ ತಳಿಯನ್ನು ಉಳಿಸಬೇಕು. ಇದರ ಭೌಗೋಳಿಕ ಗುರುತಿಸುವಿಕೆ (ಜಿಐ) ಆಗಬೇಕು ಎನ್ನುತ್ತಾರೆ ಪರಿಸರ ಬರಹಗಾರ ಶಿವಾನಂದ ಕಳವೆ.

PREV

Recommended Stories

ಉತ್ಪನ್ನ ಗುಣಮಟ್ಟ ಹೆಚ್ಚಿಸಿ ರಫ್ತು ಏರಿಸಿ: ರೆಡ್ಡಿ
ಪ್ಯಾರಾ ಥ್ರೋ ಬಾಲ್: ರಾಜ್ಯ ಮಹಿಳಾ ತಂಡಕ್ಕೆ ಟ್ರೋಫಿ