ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಸರ್ಕಾರ : ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

KannadaprabhaNewsNetwork |  
Published : Feb 23, 2025, 12:34 AM ISTUpdated : Feb 23, 2025, 01:06 PM IST
nikhil kumaraswamy

ಸಾರಾಂಶ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯ ಕಡೆಗಣಿಸಿ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸ್ ವಾಹನ, ಠಾಣೆ ಮೇಲೆ ಕಲ್ಲು ತೂರುವ, ಕಾನೂನಿನ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ.

 ತುಮಕೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಹೀಗಾಗಿ ರಾಜ್ಯದಲ್ಲಿ ಇರುವುದು ಅಭಿವೃದ್ಧಿ ಶೂನ್ಯ ಸರ್ಕಾರ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಶನಿವಾರದ ನಗರದ ಹೊರವಲಯದ ರೆಸಾರ್ಟ್ನಲ್ಲಿ ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಜೆಡಿಎಸ್ ಪ್ರಮುಖರ ಸಭೆ ನಡೆಸಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಅಭಿವೃದ್ಧಿಗೆ ಶಾಸಕರಿಗೆ ನೀಡಬೇಕಾದ ಅನುದಾನ ಬಿಡುಗಡೆ ಮಾಡಿಲ್ಲ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಆಡಳಿತ ಹಿಡಿದ ಕಾಂಗ್ರೆಸ್ ನುಡಿದಂತೆ ನಡೆಯುತ್ತಿಲ್ಲ, ಪ್ರತಿ ತಿಂಗಳೂ ಗೃಹಲಕ್ಷ್ಮೀ ಯೋಜನೆಯಡಿ ಕೊಡಬೇಕಾದ ಹಣವನ್ನು ಕಳೆದ 3- 4 ತಿಂಗಳಿನಿಂದ ಕೊಟ್ಟಿಲ್ಲ ಎಂದು ತಾಯಂದಿರು ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ ಎಂದರು.

ಬೇಸಿಗೆಯಲ್ಲಿ ವಿದ್ಯುತ್ ಇಲ್ಲದೆ ರೈತರು ತಮ್ಮ ಬೆಳೆಗೆ ನೀರು ಹಾಯಿಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ರೈತರ ಕಷ್ಟ ಕೇಳುತ್ತಿಲ್ಲ ಎಂದು ರಾಜ್ಯ ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾರ್ಯ ಕಡೆಗಣಿಸಿ ಭ್ರಷ್ಟಾಚಾರದಲ್ಲಿ ತೊಡಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಪೊಲೀಸ್ ವಾಹನ, ಠಾಣೆ ಮೇಲೆ ಕಲ್ಲು ತೂರುವ, ಕಾನೂನಿನ ಭಯವಿಲ್ಲದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಸೇವೆಗಳ ಬೆಲೆ, ದಿನಬಳಕೆ ಪದಾರ್ಥಗಳ ಬೆಲೆ ದುಬಾರಿಯಾಗಿ ಜನಸಾಮಾನ್ಯರು ಜೀವನ ನಡೆಸಲು ಸಂಕಟಪಡುತ್ತಿದ್ದಾರೆ. ಸರ್ಕಾರಕ್ಕೆ ಜನರ ಹಿತಬೇಕಾಗಿಲ್ಲ. ಬೇಸಿಗೆಯಲ್ಲಿ ರೈತರಿಗೆ ಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುವಲ್ಲಿ ವಿಫಲವಾಗಿ ವಿರೋಧಿ ಸರ್ಕಾರ ಎಂಬುದನ್ನು ಎರಡು ವರ್ಷಗಳಿಂದ ಸಾಬೀತುಪಡಿಸಿದೆ ಎಂದು ಟೀಕಿಸಿದರು.

ಭಗವಂತನೇ ಭೂಮಿಗೆ ಇಳಿದು ಬಂದರೂ ಬೆಂಗಳೂರಿನ ಅಭಿವೃದ್ಧಿ ಸುಧಾರಣೆ ಆಗುವುದಿಲ್ಲ ಎಂದು ಉಪ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದವರು ಬೆಂಗಳೂರಿನ ಅಭಿವೃದ್ಧಿ ನಿರ್ಲಕ್ಷಿಸಿದ್ದಾರೆ. ಸರ್ಕಾರ ಕೆಲಸ ಮಾಡಿ ಮುಗಿಸಿದ ಗುತ್ತಿಗೆದಾರರಿಗೆ ಬಿಲ್ ಹಣ ಪಾವತಿ ಮಾಡಿಲ್ಲ, ಗುತ್ತಿಗೆದಾರರನ್ನು ಬೀದಿಗೆ ತರುವಂತಹ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ಧೋರಣೆ ವಿರುದ್ಧ ಜೆಡಿಎಸ್ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ರಾಜ್ಯದ ಜನರೂ ಸರ್ಕಾರದ ಆಡಳಿತದ ವಿರುದ್ಧ ಬೇಸತ್ತಿದ್ದಾರೆ ಎಂದರು. ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಜನ ಸಜ್ಜಾಗಿದ್ದಾರೆ. ಈ ಚುನಾವಣೆಗಳಲ್ಲಿ ಕಾಂಗ್ರೆಸ್ ವಿರುದ್ಧ ಗೆಲುವು ಸಾಧಿಸಲು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಸಿದ್ಧರಾಗಬೇಕು, ಪಕ್ಷವನ್ನು ಸುಭದ್ರವಾಗಿ ಸಂಘಟಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರ ಪರಿಣಾಮ 19 ಸ್ಥಾನ ಗೆಲ್ಲಲು ಸಾಧ್ಯವಾಯಿತು. ಮುಂದಿನ ಜಿಲ್ಲಾ, ತಾಲೂಕು ಪಂಚಾಯ್ತಿ ಚುನಾವಣೆಗಳಲ್ಲಿ ಮೈತ್ರಿ ಪಕ್ಷಗಳು ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಎರಡೂ ಪಕ್ಷಗಳ ನಾಯಕರು ಚರ್ಚಿಸಿ ಸಮನ್ವಯ ಸಮಿತಿ ರಚನೆ ಮಾಡುತ್ತಾರೆ. ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲೂ ಸಮನ್ವಯ ಸಮಿತಿ ರಚನೆ ಮಾಡಲಾಗುವುದು ಎಂದರು.

ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಎಂ.ಟಿ.ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ಎಂ.ವಿ.ವೀರಭಧ್ರಯ್ಯ, ಕೆ.ಎಂ.ತಿಮ್ಮರಾಯಪ್ಪ, ಸುಧಾಕರಲಾಲ್, ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಕೆ.ಟಿ.ಶಾಂತಕುಮಾರ್, ಗುಬ್ಬಿ ನಾಗರಾಜು, ಡಾ.ರವಿ ನಾಗರಾಜಯ್ಯ, ಕೊಂಡವಾಡಿ ಚಂದ್ರಶೇಖರ್, ಸೋಲಾರ್ ಕೃಷ್ಣಮೂರ್ತಿ, ಮೊದಲಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ