ಶಿಗ್ಗಾಂವಿ: ಇಂದಿನ ದಿನಮಾನಗಳಲ್ಲಿ ಮೊಬೈಲ್ ಮತ್ತು ಟಿವಿ ಹಾವಳಿಯಿಂದ ಗ್ರಾಮೀಣ ಕಲೆಗಳು ನಶಿಸಿ ಹೋಗುತ್ತಿದೆ ಎಂದು ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಎಸ್. ಖಾದ್ರಿ ಹೇಳಿದರು.
ಬಡವರ ಶತ್ರು ಅಶುದ್ಧ ಕುಡಿಯುವ ನೀರಾಗಿದ್ದು, ಬಹುತೇಕ ಬಡಮಕ್ಕಳು ವ್ಯಾಸಂಗ ಮಾಡುತ್ತಿರುವ ಎಂಪಿಎಂ ಸಂಸ್ಕೃತಿ ಪ್ರಾಥಮಿಕ ಶಾಲೆಗೆ ಅಂದಾಜು ₹೩ ಲಕ್ಷ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನನ್ನ ಸ್ವಂತ ವೆಚ್ಚದಲ್ಲಿ ನಿರ್ಮಾಣ ಮಾಡಿಕೊಡುತ್ತೇನೆ. ಸಾಮಾಜಿಕ ಕಳಕಳಿಯುಳ್ಳ ಶಾಲೆಗಳನ್ನು ಸಾರ್ವಜನಿಕರು ಬೆಳೆಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ಮಕ್ಕಳಿಗೆ ಅತ್ಯುತ್ತಮ ಸಂಸ್ಕಾರ ಕೊಡುವ ಕೆಲಸ ಮನೆಯಿಂದಲೆ ಪ್ರಾರಂಭವಾಗಿ, ಶಾಲೆಗಳಲ್ಲಿ ಅವುಗಳನ್ನು ಬೆಳೆಸುವ ಕಾರ್ಯ ಆಗಬೇಕು. ಮಕ್ಕಳು ಓದುವಾಗ ಪಾಲಕರು ಟಿವಿ, ಮೊಬೈಲ್‌ಗಳನ್ನು ಬಳಸದೇ ಅವರೊಂದಿಗೆ ಜತೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ತಂದೆಯಂದಿರು ತಮ್ಮ ದೈನಂದಿನ ವ್ಯವಹಾರ, ವೃತ್ತಿಗಳ ಹೊರೆಯಿಂದ ಮಕ್ಕಳ ಕಲಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿರುವುದು ಕಂಡುಬರುತ್ತಿದ್ದು, ಮಕ್ಕಳ ಕಲಿಕೆಯಲ್ಲಿ ಶಿಕ್ಷಕರು, ತಾಯಂದಿರ ಪಾತ್ರದಷ್ಟೇ ಮಹತ್ವವನ್ನು ತಂದೆಯಂದಿರ ಪಾತ್ರ ಅವಶ್ಯಕವಿದೆ. ಹುಟ್ಟಿದ ಮಕ್ಕಳೆಲ್ಲರೂ ಬುದ್ಧಿವಂತರೇ ಆಗಿದ್ದು ಅವರನ್ನು ಸರಿಯಾದ ರೀತಿಯಲ್ಲಿ ಬೆಳೆಸಿ ಅವರಲ್ಲಿನ ವೈಶಿಷ್ಟ್ಯಗಳನ್ನು ಗುರುತಿಸಿ ಬೆಳಗಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದರು.ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ ಮೊರಬದ, ಸಂಸ್ಥಾಪಕ ಕಾರ್ಯದರ್ಶಿ ದೇವರಾಜ ಸುಣಗಾರ, ಸಂಸ್ಥಾಪಕ ಸದಸ್ಯ ರಮೇಶ ಭಾವಿ, ಮುಖಂಡರಾದ ಸಂತೋಷ ಮೊರಬದ, ಮಂಜುನಾಥ ಬ್ಯಾಹಟ್ಟಿ, ಅಣ್ಣಪ್ಪ ನಡಟ್ಟಿ, ಅಣ್ಣಪ್ಪ ಲಮಾಣಿ, ಶಶಿಕಾಂತ ರಾಠೋಡ, ಬೀರೇಶ ಜಟ್ಟೆಪ್ಪನವರ, ರವಿ ಕೋಣನವರ, ಅನ್ವರ, ವಿನಯ, ಮಾಲತೇಶ ಮೊರಬದ, ಮುಖ್ಯೋಪಾಧ್ಯಾಯಿನಿ ಅನಿತಾ ಹಿರೇಮಠ ಇತರರಿದ್ದರು.