ರಸ್ತೆ ಅಪಘಾತ ಪ್ರಮಾಣ ಶೂನ್ಯಕ್ಕೆ ತನ್ನಿ: ಸಚಿವ ಲಾಡ್‌

KannadaprabhaNewsNetwork |  
Published : Feb 06, 2025, 12:18 AM IST
ರ್‍ಯಾಲಿ | Kannada Prabha

ಸಾರಾಂಶ

ಬೈಕ್‌ನಲ್ಲಿ ಸಂಚರಿಸುವ ಯುವಕರ ಸಂಖ್ಯೆ ಹೆಚ್ಚಿದೆ. ದೇಶದಲ್ಲಿ ಶೇ. 22ರಷ್ಟು ಯುವಕರು ರಸ್ತೆ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ದೇಶದ ಶೇ.1ರಷ್ಟು ಜಿಡಿಪಿಗೆ ಮಾರಕವಾಗಲಿದೆ. ಕುಟುಂಬಕ್ಕೆ ಆರ್ಥಿಕವಾಗಿ ಬಹಳ ದೊಡ್ಡ ಹೊಡೆತ ಬೀಳಲಿದೆ.

ಹುಬ್ಬಳ್ಳಿ:

ರಸ್ತೆ ಸುರಕ್ಷತೆ ಕುರಿತು ಸಮಾಜದಲ್ಲಿ ಅರಿವು ಮೂಡಿಸುವುದು ಅಗತ್ಯ. ರಸ್ತೆ ಅಪಘಾತ ಪ್ರಮಾಣವನ್ನು ಶೂನ್ಯಕ್ಕೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಇಲ್ಲಿನ ವಿದ್ಯಾನಗರದ ಬಿವಿಬಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಲ್ಲಾಡಳಿತ, ಸಾರಿಗೆ ಇಲಾಖೆ, ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರ, ಹುಬ್ಬಳ್ಳಿ ಧಾರವಾಡ ಮೋಟಾರು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್, ವಾಯುಮಾಲಿನ್ಯ ಪರೀಕ್ಷಣಾ ಕೇಂದ್ರ ಪ್ರವರ್ತಕರು, ಕೆಎಲ್‌ಇ ಟೆಕ್ನಾಲಾಜಿಕಲ್ ಯುನಿವರ್ಸಿಟಿ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿ ಮೋಟಾರು ವಾಹನ ಡೀಲರ್ಸ್ ಸಹಯೋಗದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಜಾಗೃತಿ ಮಾಸಾಚರಣೆ 2025ರ ಅಂಗವಾಗಿ ಆಯೋಜಿಸಿದ್ದ ಬೈಕ್ ಹಾಗೂ ಕಾರ್ ರ್‍ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೈಕ್‌ನಲ್ಲಿ ಸಂಚರಿಸುವ ಯುವಕರ ಸಂಖ್ಯೆ ಹೆಚ್ಚಿದೆ. ದೇಶದಲ್ಲಿ ಶೇ. 22ರಷ್ಟು ಯುವಕರು ರಸ್ತೆ ಅಪಘಾತಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ದೇಶದ ಶೇ.1ರಷ್ಟು ಜಿಡಿಪಿಗೆ ಮಾರಕವಾಗಲಿದೆ. ಕುಟುಂಬಕ್ಕೆ ಆರ್ಥಿಕವಾಗಿ ಬಹಳ ದೊಡ್ಡ ಹೊಡೆತ ಬೀಳಲಿದೆ. ಕುಟುಂಬವು ಉತ್ತಮ ಜೀವನ ನಡೆಸಲು ಹಲವು ವರ್ಷ ಬೇಕಾಗುತ್ತದೆ. ಯುವಕರು ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದು ಮನವಿ ಮಾಡಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ರಸ್ತೆ ಅಪಘಾತದಲ್ಲಿ ಧಾರವಾಡ ಜಿಲ್ಲೆಯು ರಾಜ್ಯದಲ್ಲಿ 15ನೇ ಸ್ಥಾನದಲ್ಲಿದೆ. ಜಿಲ್ಲೆಯನ್ನು 30ನೇ ಸ್ಥಾನಕ್ಕೆ ತರಬೇಕಾಗಿದೆ. ಬೈಕ್‌ನಲ್ಲಿ 3ರಿಂದ 4ಜನರು ಸಂಚರಿಸುವುದನ್ನು ನೋಡಿದ್ದೇವೆ. ಇದು ಸರಿಯಲ್ಲ. ವಾಹನ ಚಲಾಯಿಸುವಾಗ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಬೇಕು ಎಂದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ರಸ್ತೆ ಸುರಕ್ಷತೆ ಒಂದು ಇಲಾಖೆ ಅಥವಾ ಸರ್ಕಾರದ ಕೆಲಸವಲ್ಲ. ಎಲ್ಲರೂ ರಸ್ತೆ ನಿಯಮ ಪಾಲಿಸಬೇಕು. ರಸ್ತೆ ಸುರಕ್ಷತೆಯಲ್ಲಿ ಎಂಜಿನಿಯರಿಂಗ್, ಶಿಕ್ಷಣ ಹಾಗೂ ಜಾರಿ ನಿಯಮಗಳು ಎಂಬ ಮೂರು ಅಂಶಗಳು ಪ್ರಮುಖವಾಗಿದೆ. ಎಂಜಿನಿಯರ್‌ಗಳು ಗುಣಮಟ್ಟದ ರಸ್ತೆ ನಿರ್ಮಿಸಬೇಕು. ಜಾಗೃತಿ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಅರಿವು ಮೂಡಿಸುವುದು ಶಿಕ್ಷಣದ ಉದ್ದೇಶವಾಗಿದೆ. ಸರ್ಕಾರಗಳು ಜಾರಿಗೆ ತರುವ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಇದೇ ವೇಳೆ ರಸ್ತೆ ಸುರಕ್ಷತಾ ಸರಂಜಾಮು ಹಾಗೂ ಕರಪತ್ರ ಬಿಡುಗಡೆ ಮಾಡಲಾಯಿತು. ವಾಹನಗಳಿಗೆ ರಸ್ತೆ ಸುರಕ್ಷತಾ ಸ್ಟೀಕರ್‌ ಅಂಟಿಸಲಾಯಿತು. ಬೈಕ್ ಮತ್ತು ಕಾರ ರ್‍ಯಾಲಿಯೂ ಬಿವಿಬಿ ಕಾಲೇಜಿನಿಂದ ಟೆಂಡರ್ ಶೂರ್ ರಸ್ತೆ ಮೂಲಕ ತೋಳನಕೆರೆ ವರೆಗೆ ಸಾಗಿ ಕೊನೆಗೊಂಡಿತು.

ಹುಡಾ ಅಧ್ಯಕ್ಷ ಶಾಕೀರ್ ಸನದಿ, ಜಿಪಂ ಸಿಇಒ ಭುವನೇಶ ಪಾಟೀಲ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಡಿಸಿಪಿ ಮಹಾನಿಂಗ ನಂದಗಾವಿ, ಎಸಿಪಿ ವಿನೋದ ಮುಕ್ತೆದಾರ, ಜಂಟಿ ಸಾರಿಗೆ ಆಯುಕ್ತ ಎಂ.ಪಿ. ಓಂಕಾರೇಶ್ವರಿ, ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಪ್ರಕಾಶ ತೆವರಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ. ದಾಮೋದರ, ಹುಬ್ಬಳ್ಳಿ ಗ್ರಾಮೀಣ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ, ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದಲಿಂಗೇಶ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ