ಖಾಜು ಸಿಂಗೆಗೋಳ
ಸಹೋದರತ್ವದ ಸಂಕೇತವಾದ ರಕ್ಷಾ ಬಂಧನಕ್ಕೆ ಇಂಡಿ ನಗರ ಹಾಗೂ ತಾಲೂಕಿನಲ್ಲಿ ರಾಖಿ (ನೂಲು) ಖರೀದಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಮಹಿಳೆಯರು, ಯುವತಿಯರು ರಾಖಿ ಅಂಗಡಿಗಳಿಗೆ ಮುಗಿ ಬಿದ್ದಿದ್ದಾರೆ.
ನಗರದೆಲ್ಲೆಡೆ ಅಂಗಡಿ-ಮುಂಗಟ್ಟುಗಳು ಹಾಗೂ ರಸ್ತೆ ಬದಿಯ ಬಂಡಿಗಳ ಮೇಲೂ ರಾಖಿ ಮಾರಾಟ ನಡೆಯುತ್ತಿದೆ. ವಿವಿಧ ನಮೂನೆಯ, ಆಕರ್ಷಕ ರಾಖಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ನೋಡುಗರನ್ನು ತನ್ನತ್ತ ಸೆಳೆಯುತ್ತಿವೆ. ಸಹೋದರರಿಗಾಗಿ ಸಹೋದರಿಯರು ರಾಖಿಗಳ ಖರೀದಿಯಲ್ಲಿ ಮಗ್ನರಾಗಿದ್ದಾರೆ.ಇಲ್ಲಿನ ವಿವಿಧೆಗಳಲ್ಲಿನ ಅಂಗಡಿ-ಮುಂಗಟ್ಟು ಹಾಗೂ ರಸ್ತೆ ಬದಿ ತಳ್ಳು ಗಾಡಿಗಳ ಮೇಲೂ ರಾಖಿ ಮಾರಾಟ ಭರ್ಜರಿಯಾಗಿ ನಡೆದಿದೆ. ಇನ್ನು ಹಲವೆಡೆ ಹಬ್ಬದ ನಿಮಿತ್ತವಾಗಿಯೇ ರಸ್ತೆ ಮೇಲೆ ಅಂಗಡಿಗಳನ್ನು ತೆರೆಯಲಾಗಿದೆ. ರಸ್ತೆ ಮೇಲೆ ಟೆಂಟ್ ಹಾಕಿ ರಾಖಿಗಳನ್ನು ಮಾರಾಟ ಮಾಡಲಾಗುತ್ತಿದ್ದು, ಮಹಿಳೆಯರು ಮುಗಿ ಬಿದ್ದಿದ್ದಾರೆ.
---------------
ಅಕ್ಕ-ತಂಗಿ ಪವಿತ್ರ ಬಂಧನ:
ಜನರು ತಮ್ಮ ಇಷ್ಟಕ್ಕೆ ಅನುಗುಣವಾಗಿ ವಿವಿಧ ಬಗೆಯ ರಾಖಿ ಖರೀದಿಸಲು ಮುಗಿ ಬಿದ್ದಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ನೂಲಿನಿಂದ ಹಿಡಿದು ಹಲವಾರು ಬಗೆಯ ರಾಖಿಗಳಿವೆ. ₹20ರಿಂದ ₹280ರವರೆಗೆ ಮಾರಾಟ ಆಗುತ್ತಿವೆ. ಮಾರುಕಟ್ಟೆಯಲ್ಲಿ ಈ ಬಾರಿ ಹೆಚ್ಚಿನ ಸರಕು ಬಂದಿದ್ದು, ಒಳ್ಳೆ ಡಿಸೈನ್‌ಗಳು ಹೊಂದಿದ ರಾಖಿಗಳು ಇವೆ. ನೂಲು, ರುದ್ರಾಕ್ಷಿ, ಮುತ್ತು, ಹೂವು ಮತ್ತಿತರ ಆಕಾರದ ರಾಖಿಗಳು ಗಮನ ಸೆಳೆಯುತ್ತಿವೆ. ಮಕ್ಕಳು ಹಾಗೂ ಹಿರಿಯರಿಗಾಗಿ ವಿಭಿನ್ನ ರೀತಿಯ ರಾಖಿಗಳು ಮಾರಾಟಕ್ಕಿವೆ ಎಂದು ಮಂಗಳೇಶ್ವರಿ, ಗಿಫ್ಟ್ ಸೆಂಟರ್ ನ ಸಂಜೀವ ದಶವಂತ ತಿಳಿಸಿದರು.