ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಪ್ರೀತಿಗೆ ಕಣ್ಣಿಲ್ಲ, ಪ್ರೀತಿ ಕುರುಡು ಎಂದೆಲ್ಲ ಹೇಳಲಾಗುತ್ತದೆ. ಅಷ್ಟೇ ಅಲ್ಲ, ಅದಕ್ಕೆ ಗಡಿಯ ಮಿತಿಯೂ ಇಲ್ಲ ಎನ್ನುವುದನ್ನು ಭಾರತದ ಯುವಕನನ್ನು ವರಿಸುವ ಮೂಲಕ ಬ್ರಿಟನ್ ಯುವತಿ ಸಾಬೀತುಪಡಿಸಿದ್ದಾಳೆ.
ಏ. 1ರಂದು ಮದುವೆ ನೋಂದಣಿ ಮಾಡಿಕೊಂಡಿರುವ ಇವರು, ಈಗ ಹುಡುಗಿ ಅಪೇಕ್ಷೆಯಂತೆ ಮೇ 9ರಂದು ಭಾರತೀಯ ಸಂಪ್ರದಾಯದಂತೆ, ಶಾಸ್ತ್ರೋಕ್ತವಾಗಿ ಮದುವೆಯಾಗಲಿದ್ದಾರೆ. ಇದಕ್ಕಾಗಿ ಮದುವೆ ಆಹ್ವಾನ ಪತ್ರಿಕೆ ಮುದ್ರಿಸಿ, ಭರ್ಜರಿ ತಯಾರಿ ಮಾಡುತ್ತಿದ್ದಾರೆ.ಗಂಗಾವತಿ ತಾಲೂಕಿನ ವಿರೂಪಾಪುಗಡ್ಡೆಯ ಬಳಿ ಇರುವ ಬಸಾಪುರ ಗ್ರಾಮದ ನಿವಾಸಿ ಪಾರ್ವತಮ್ಮ ಜಿ. ನರಸಿಂಹಾಚಾರ್ಯ ಅವರ ಪುತ್ರ ಮುರಳೀಧರ ಹಾಗೂ ಇಂಗ್ಲೆಂಡ್ ಬ್ರಿಡ್ಜೆಟ್ ಹಾಗೂ ಪಾಲ್ ಸ್ಕಾಪ್ ಪಿಂಕ್ಲರ್ ದಂಪತಿಯ ಪುತ್ರಿ ಶಾರ್ಲೋಟ್ಟಿ ಅವರ ನಡುವೆ ಮೇ 9ರಂದು ಬಸಾಪುರ ಗ್ರಾಮದ ಬಳಿ ಇರುವ ಮುರಳಿ ರೆಸಾರ್ಟ್‌ನಲ್ಲಿ ಮದುವೆ ನಡೆಯಲಿದೆ.
ಪ್ರೇಮಾಂಕುರವಾಗಿದ್ದು ಹೇಗೆ?:ಹುಡುಗನಿಗೆ ಸಿನಿಮಾ ನಿರ್ದೇಶನ ಮಾಡುವ ಹುಚ್ಚು. ಈಗಾಗಲೇ ಶಾರ್ಟ್ ಮೂವಿಗಳನ್ನು ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ಹುಡುಗಿಗೂ ಸಿನಿಮಾ ಕಥೆ ಬರೆಯುವುದು ಪ್ರವೃತ್ತಿ. ಹಂಪಿಯಲ್ಲಿ ಮೈ ಲವ್ ಕಂಟ್ರಿ ಶಾರ್ಟ್ ಮೂವಿ ಚಿತ್ರೀಕರಣ ಮಾಡುವ ವೇಳೆಯಲ್ಲಿ ಮುರುಳೀಧರ್ ಅವರಿಗೆ ಶಾರ್ಲೋಟ್ಟಿ ಭೇಟಿಯಾಗಿದ್ದಾರೆ. ಆ ವೇಳೆ ಪರಸ್ಪರ ಮಾತುಕತೆಯಾಗಿದೆ. ಹಾಗೆ ಇದು ಆಗಾಗ ಭೇಟಿಗೂ ಕಾರಣವಾಗಿದೆ. ಮೊದಮೊದಲು ಸ್ನೇಹ ಬೆಳೆದಿದೆ. ಸ್ನೇಹದಿಂದ ಭೇಟಿಯೂ ಹೆಚ್ಚಾಗಿದೆ. ಆನಂತರ ಅದು ಪ್ರೇಮಕ್ಕೆ ತಿರುಗಿದೆ. ಇದನ್ನು ಮನೆಯಲ್ಲಿ ಹೇಳಿದಾಗ ಎರಡು ಮನೆಯವರು ಒಪ್ಪಿದ್ದಾರೆ. ಹೀಗಾಗಿ, ಏ. 1ರಂದು ಗಂಗಾವತಿ ನೋಂದಣಿ ಇಲಾಖೆಯಲ್ಲಿ ಮದುವೆ ನೋಂದಣಿ ಮಾಡಿಸಿದ್ದಾಳೆ. ಆದರೆ ಶಾರ್ಲೋಟ್ಟಿ ಅವರಿಗೆ ಭಾರತೀಯ ಸಂಪ್ರದಾಯದಂತೆ ಮದುವೆಯಾಗುವ ಬಯಕೆ. ಅದಕ್ಕೆ ಮುರಳೀಧರ ಕುಟುಂಬದವರು ಸಮ್ಮತಿ ನೀಡಿದ್ದಾರೆ. ಹೀಗಾಗಿ, ಎರಡು ಕುಟುಂಬದವರು ಈಗ ಮೇ 9ರಂದು ಮುರಳಿ ರೆಸಾರ್ಟ್‌ನಲ್ಲಿಯೇ ಭಾರತೀಯ ಸಂಪ್ರದಾಯದಂತೆ ಮದುವೆ ನಿಶ್ಚಯ ಮಾಡಿದ್ದಾರೆ.
ಶಾರ್ಲೋಟ್ಟಿ ಕುಟುಂಬದ ಅನೇಕರು ಮದುವೆಗೆ ಆಗಮಿಸಲಿದ್ದಾರೆ. ಸ್ಥಳೀಯರು ಸೇರಿಕೊಂಡು ಅಪ್ಪಟ ಭಾರತೀಯ ಸಂಪ್ರದಾಯದಂತೆ ಮದುವೆ ಮಾಡಲು ಈಗಾಗಲೇ ಬಸಾಪುರ ಗ್ರಾಮದ ಹುಡುಗನ ಮನೆಯಲ್ಲಿ ಭರ್ಜರಿ ತಯಾರಿ ನಡೆಸಿದ್ದಾರೆ.ಪ್ರೀತಿ ಒಡಮೂಡಿದ ಮೇಲೆ ಅದಕ್ಕೆ ಭಾಷೆ, ಧರ್ಮ, ಗಡಿಯ ಹಂಗು ಇರುವುದಿಲ್ಲ. ಹೀಗಾಗಿ ನಾವು ಪರಸ್ಪರ ಪ್ರೀತಿಸಿ, ನಮ್ಮಿಬ್ಬರ ಮನೆಯಲ್ಲಿ ಒಪ್ಪಿಸಿ, ಭಾರತೀಯ ಸಂಪ್ರದಾಯದಂತೆ ಮೇ 9ರಂದು ಮದುವೆ ನಿಶ್ಚಯ ಮಾಡಿದ್ದೇವೆ.ಮುರಳೀಧರ ಬಸಾಪುರ ಗ್ರಾಮದ ನಿವಾಸಿ ಭಾರತದ ಬಗ್ಗೆ ನನಗೆ ಎಲ್ಲಿಲ್ಲದ ಹೆಮ್ಮೆ. ಅದರಲ್ಲೂ ಇಲ್ಲಿನ ಒಟ್ಟಾಗಿ ಇರುವ ಕುಟುಂಬದ ಬಗ್ಗೆ ಅಪಾರ ಪ್ರೀತಿ. ಭಾರತದ ಯುವಕನ್ನೇ ಪ್ರೀತಿಸಿರುವುದರಿಂದ ಭಾರತೀಯ ಸಂಪ್ರದಾಯದಂತೆ ಮದುವೆಯಾಗುತ್ತಿದ್ದೇನೆ.
ಶಾರ್ಲೋಟ್ಟಿ, ಯುವತಿ