ವೇದ ಘೋಷ, ಜಯಜಯಕಾರ ಹಾಗೂ ವಾದ್ಯ ಮೇಳದ ನಿನಾದದೊಂದಿಗೆ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಉಜಿರೆ ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮಕಲಶಾಭಿಷೇಕ ಬುಧವಾರ ಬೆಳಿಗ್ಗೆ ಸಹಸ್ರಾರು ಭಕ್ತಬಂಧುಗಳ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಬೆಳ್ತಂಗಡಿ: ವೇದ ಘೋಷ, ಜಯಜಯಕಾರ ಹಾಗೂ ವಾದ್ಯ ಮೇಳದ ನಿನಾದದೊಂದಿಗೆ ಬೆಳ್ತಂಗಡಿ ತಾಲೂಕಿನ ಇತಿಹಾಸ ಪ್ರಸಿದ್ಧ ಉಜಿರೆ ಶ್ರೀ ಜನಾರ್ದನ ಸ್ವಾಮಿಗೆ ಬ್ರಹ್ಮಕಲಶಾಭಿಷೇಕ ಬುಧವಾರ ಬೆಳಿಗ್ಗೆ ಸಹಸ್ರಾರು ಭಕ್ತಬಂಧುಗಳ ಸಮ್ಮುಖದಲ್ಲಿ ಸಂಪನ್ನಗೊಂಡಿತು.
ಬುಧವಾರ ಬೆಳಿಗ್ಗೆ ನೀಲೇಶ್ವರ ಆಲಂಬಾಡಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಮಾಧವನ್ ತಂತ್ರಿಗಳ ಮಾರ್ಗದರ್ಶನದಲ್ಲಿ ಬೆಳಿಗ್ಗೆ ಗಣಪತಿ ಹೋಮ, ಸುಮುಹೂರ್ತದಲ್ಲಿ ಕವಾಟೋದ್ಘಾಟನೆ ನಡೆದು ಅಭಿಷೇಕ, ಪ್ರಾಯಶ್ಚಿತ್ತ ಹೋಮ, ಕಲಶಾಭಿಷೇಕ, ತತ್ವಕಲಶಾಭಿಷೇಕ, ಮಹಾಬಲಿಪೀಠ ಪ್ರತಿಷ್ಠೆ, ಸಹಸ್ರ ಪರಿಕಲಶಾಭಿಷೇಕ, ಕುಂಭೇಶ ಕಲಶಾಭಿಷೇಕ, 1008 ಕಲಶಗಳ ಬ್ರಹ್ಮಕಲಶಾಭಿಷೇಕ ಸಂಭ್ರಮದಿಂದ ಸಂಪನ್ನಗೊಂಡಿತು. ಬೆಳಿಗ್ಗೆ ಸುಯಜ್ಞ ಯಾಗ ಮಂಟಪದಲ್ಲಿ ಕಿರಣ ರಾವ್ ಮತ್ತು ಮನೆಯವರ ಸೇವಾರ್ಥ ಶ್ರೀ ಹರಿವಾಯುಸ್ತುತಿ ಪುರಶ್ಚರಣ ಹೋಮವನ್ನು ವೇದಮೂರ್ತಿ ಚೆನ್ನೈ ಪುರೋಹಿತ ಹರೀಶ್ ಹೊಳ್ಳ ನೆರವೇರಿಸಿದರು. ವಿಪ್ರ ಬಾಂಧವರಿಂದ ವೇದ ಪಾರಾಯಣ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಠಣ ನಡೆಯಿತು. ಬ್ರಹ್ಮಕಲಶೋತ್ಸವದ ಸುಮುಹೂರ್ತದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರು, ಪವಿತ್ರ ಪಾಣಿ ಶಿವರಾಮ ಪಡುವೆಟ್ನಾಯ, ನಾಳ್ವಿಕೆಯವರಾದ ಅನಂತಮೋಹನ ಮೂಡಣ್ಣಾಯ, ವಿಜಯಗೋಪುರ ನಿರ್ಮಾಣ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಪ್ರತಾಪಸಿಂಹ ನಾಯಕ್ , ಶಾಸಕ ಹರೀಶ್ ಪೂಂಜ, ಸಮಿತಿ ಸಂಚಾಲಕ ಕೆ.ಮೋಹನ ಕುಮಾರ್, ಕೋಶಾಧಿಕಾರಿ ರಾಜೇಶ್ ಪೈ, ಬೆಂಗಳೂರು ಸಮಿತಿಯ ಮಂಜುನಾಥ ಕನ್ಯಾಡಿ, ವೆಂಕಟ್ರಮಣ ರಾವ್ , ಗಾಯಕ ಶಶಿಧರ್ ಕೋಟೆ, ಸಮಿತಿ ಪದಾಧಿಕಾರಿಗಳು ಸಹಸ್ರಾರು ಭಕ್ತಾದಿಗಳು ಉಪಸ್ಥಿತರಿದ್ದು ಭಕ್ತಿಭಾವದ ಪುಣ್ಯ ಕ್ಷಣವನ್ನು ಕಣ್ತುಂಬಿಕೊಂಡರು. ಸುನಾದ ಭಜನಾ ಕುಟೀರದಲ್ಲಿ ಉದಯಾಸ್ತಮಾನ ನಿರಂತರ ಭಜನಾ ಸೇವೆ ನಡೆಯಿತು. ಮದ್ಯಾಹ್ನ ಸುಪ್ರಸಾದ ಛತ್ರದಲ್ಲಿ ಪಲ್ಲಪೂಜೆ ನಡೆದು ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ನಡೆದ ಸಾರ್ವಜನಿಕ ಅನ್ನಸಂತರ್ಪಣೆ ಯಲ್ಲಿ ಸಹಸ್ರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.
ಕೃಷ್ಣಾನುಗ್ರಹ ಸಭಾಭವನದಲ್ಲಿ ಬೆಳಿಗ್ಗೆ ಉಜಿರೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಾಯೋಜಕತ್ವದಲ್ಲಿ ಗಾನಗಂಧರ್ವ ಶಶಿಧರ ಕೋಟೆ ಮತ್ತು ತಂಡದವರಿಂದ ಭಕ್ತಿ ಸಂಗೀತ ಸಂಭ್ರಮ ಕಾರ್ಯಕ್ರಮ ನಡೆಯಿತು. ಕಲಾವಿದರನ್ನು ಸಮಿತಿ ಕಾರ್ಯಾಧ್ಯಕ್ಷ ಶಶಿಧರ ಶೆಟ್ಟಿ, ಅಧ್ಯಕ್ಷ ಪ್ರತಾಪಸಿಂಹ ನಾಯಕ್, ಶಾಸಕ ಹರೀಶ್ ಪೂಂಜಾ, ಅರ್ಚಕ ಶ್ರೀನಿವಾಸ ಹೊಳ್ಳ, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಸಾದ್ ಬಿ. ಎಸ್ , ಕಾರ್ಯದರ್ಶಿ ರವೀಂದ್ರ ಶೆಟ್ಟಿ ಮೊದಲಾದವರು ಸನ್ಮಾನಿಸಿ ಗೌರವಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.