ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಸೋಮವಾರಪೇಟೆಯ ಕಲ್ಯಾಣ ಮಂಟಪವೊಂದರಲ್ಲಿ ಮೇ 5ರಂದು ನಿಗದಿಯಾಗಿದ್ದ ಮದುವೆಯೊಂದು ಕ್ಷುಲ್ಲಕ ಕಾರಣಕ್ಕೆ ರದ್ದುಗೊಂಡಿದ್ದಿಂದ ಆಕ್ರೋಶಗೊಂಡ ವಧುವಿನ ಕಡೆಯವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ಸೋಮವಾರಪೇಟೆಯ ಪೊಲೀಸ್ ಠಾಣೆಯಲ್ಲಿ ವರನ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಮಾನಹಾನಿ, ವಂಚನೆ ಇನ್ನಿತರ ಪ್ರಕರಣಗಳು ದಾಖಲಾಗಿವೆ.ಪ್ರಕರಣ ಹಿನ್ನೆಲೆ:
ಮೂಲತಃ ತುಮಕೂರಿನ ಹರ್ಷಿತ್‌ನೊಂದಿಗೆ ಸೋಮವಾರಪೇಟೆಯ ಮಾಜಿ ಸೈನಿಕರ ಪುತ್ರಿ ಜೊತೆ ವಿವಾಹ ಏರ್ಪಡಿಸಲಾಗಿತ್ತು. ಆದರೆ ವರನ ಕಡೆಯವರು ಕ್ಷುಲ್ಲಕ ಕಾರಣಕ್ಕೆ ಮದುವೆಯ ಹಿಂದಿನ ದಿನ ಊಟ ಸರಿಯಿಲ್ಲವೆಂದು ಖ್ಯಾತೆ ತೆಗೆದೆ ಹಿನ್ನಲೆಯಲ್ಲಿ ವಿವಾಹದ ಹಿಂದಿನ ದಿನ ಛತ್ರದಲ್ಲಿ ಗಲಾಟೆ ಆರಂಭವಾಗಿತ್ತು ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ವಿಚಾರ ವರದಕ್ಷಿಣೆಗಾಗಿ ನಡೆದಿದೆ ಎಂದು ನಂತರ ತಿಳಿದುಬಂದಿದೆ.ಮದುವೆ ಮಾತುಕತೆಯಲ್ಲಿ ೧೦೦ಗ್ರಾಂ ಚಿನ್ನ, ಮತ್ತು ಬೆಂಗಳೂರಿನಲ್ಲಿ ರು.೧೦ಲಕ್ಷ ಸೈಟ್ ಮತ್ತು ವಾಸಕ್ಕೆ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಕೊಠಡಿ ಬೇಕೆಂದು ವರನ ಕಡೆಯವರು ಕೇಳಿದ್ದರು ಎನ್ನಲಾಗಿದೆ. ಆದರೆ ಮದುವೆಯ ಹಿಂದಿನ ದಿನ ವರನ ಕಡೆಯವರು ಚಿನ್ನ ಎಷ್ಟು ಬಂದಿದೆ ಎಂದು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಆದರೆ ಕೇವಲ ೬೦ ಗ್ರಾಂ ಚಿನ್ನ ಮಾತ್ರ ಇದ್ದ ಹಿನ್ನೆಲೆಯಲ್ಲಿ ಮತ್ತು ೧೦ ಲಕ್ಷದ ಸೈಟ್ ನೀಡದ್ದರಿಂದ ವರನ ಕಡೆಯವರು ಖ್ಯಾತೆ ತೆಗೆದಿದ್ದಾರೆ ಎನ್ನಲಾಗಿದೆ.
ಆದರೆ ರು.೨೦ ಲಕ್ಷ ವೆಚ್ಚ ಮಾಡಿ ಮದುವೆ ಮಾಡಲು ಸಿದ್ಧತೆ ನಡೆಸಿದ್ದ ವಧುವಿನ ಕಡೆಯವರು ತಕ್ಷಣ ಕಂಗಾಲಾಗಿದ್ದಾರೆ. ಆದರೆ ಸ್ವೀಟ್ ನೀಡಲಿಲ್ಲ ಎಂದು ಖ್ಯಾತೆ ತೆಗೆದಿರುವುದು ಅವರಿಗೆ ಬೇಸರ ಮೂಡಿಸಿದೆ. ಈ ಹಿನ್ನಲೆಯಲ್ಲಿ ಜಗಳ ತಾರಕಕ್ಕೆ ಹೋಗಿ ವಿಚಾರ ಸೋಮವಾರಪೇಟೆ ಪೋಲಿಸ್ ಠಾಣೆ ಮುಟ್ಡಿದೆ.ಆದರೆ ವರನ ಕಡೆಯವರು ತುಮಕೂರಿನವರಾಗಿದ್ದು, ಅಲ್ಲಿನ ಪ್ರಭಾವಿ ಮುಖಂಡರೊಬ್ಬರಿಂದ ಕರೆ ಮಾಡಿಸಿದ ಹಿನ್ನೆಲೆಯಲ್ಲಿ ವಧುವಿಗೆ ನ್ಯಾಯ ದೊರಕಿಲ್ಲ ಎಂದು ವಧುವಿನ ತಂದೆ ಹಾಗೂ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ವಧುವಿನ ತಂದೆಯ ಹೇಳಿಕೆಯಂತೆ ಮಂಗಳವಾರ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚನೆ ಮೇರೆಗೆ ಮೋಸ ಮಾಡಿದ ಆರೋಪದಲ್ಲಿ ವರನ ವಿರುದ್ಧ ವರದಕ್ಷಿಣೆ ಕಿರುಕುಳ, ಮಾನಹಾನಿ ಪ್ರಕರಣವನ್ನು, ವರನ ತಾಯಿ, ಸಹೋದರ, ಅತ್ತಿಗೆ, ಸೋದರಮಾವ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.