- 400 ಮಹಿಳೆಯರ ಮೇಲೆ ರೇಪ್ ಮಾಡಿದ್ದು ಅವರಿಗೆ ಹೇಗೆ ಗೊತ್ತು? । ಮೊದಲೇ ಅವರಿಗೆ ಎಲ್ಲಾ ಮಾಹಿತಿ ಇತ್ತಾ?ಕನ್ನಡಪ್ರಭ ವಾರ್ತೆ ಬೆಂಗಳೂರು
ಸಂಸದ ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬುದಾಗಿ ಹೇಳಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರನ್ನು ಎಸ್‌ಐಟಿ ವಿಚಾರಣೆಗೆ ಕರೆಯಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಅಂಕಿ ಅಂಶಗಳ ಸಮೇತ ಹೇಳಿದ್ದಾರೆ. ಎಲ್ಲರಿಗಿಂತ ಮೊದಲೇ ಈ ಮಾಹಿತಿ ಅವರಿಗೆ ಲಭ್ಯವಾಗಿರಬೇಕು. ಪೆನ್‌ಡ್ರೈವ್‌ನಲ್ಲಿದ್ದ ವಿಡಿಯೋಗಳನ್ನು ಅವರು ನೋಡಿರಬಹುದು. ಈ ಹಿನ್ನೆಲೆಯಲ್ಲಿ ತನಿಖಾ ತಂಡ ಸಮನ್ಸ್ ಜಾರಿ ಮಾಡಿ ಮಾಹಿತಿ ಪಡೆಯಬೇಕು ಎಂದು ಹೇಳಿದರು.
ರಾಹುಲ್ ಗಾಂಧಿ ಅವರು ಅತ್ಯಾಚಾರಕ್ಕೊಳಗಾದವರಲ್ಲಿ 16 ವರ್ಷದೊಳಗಿನ ಹೆಣ್ಣುಮಕ್ಕಳಿದ್ದಾರೆ ಎಂದಿದ್ದಾರೆ. ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ. ‘ಎಸ್ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್ ಅವರೇ, ಯಾಕಪ್ಪಾ ಇನ್ನೂ ರಾಹುಲ್ ಗಾಂಧಿಗೆ ನೋಟಿಸ್ ಕೊಟ್ಟಿಲ್ಲ’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.ಪ್ರಕರಣದಲ್ಲಿ ಪ್ರಧಾನಿ ಮತ್ತು ಕೇಂದ್ರದ ಗೃಹ ಸಚಿವರನ್ನು ಯಾಕೆ ಎಳೆದು ತರಲಾಗುತ್ತಿದೆ? ಜೆಡಿಎಸ್- ಬಿಜೆಪಿ ಮೈತ್ರಿ ಆದಾಗಲೇ ಕಾಂಗ್ರೆಸ್ ನಿದ್ದೆಹೋಗಿದೆ. ಅದಕ್ಕೆ ಈ ಪ್ರಕರಣವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸುದ್ದಿ ಮಾಡಿಸಲಾಗುತ್ತಿದೆ. ರಾಜ್ಯದ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಅವರು ಸಂತ್ರಸ್ತರಿಗೆ ಹಣಕಾಸು ಪರಿಹಾರ ಕೊಡಲಾಗುವುದು ಎಂದಿದ್ದಾರೆ. ಯಾವ ವಿಡಿಯೋ ಮೊದಲು ಬಿಡಬೇಕು, ಯಾವುದನ್ನು ಆಮೇಲೆ ಬಿಡಬೇಕು ಎಂಬುದನ್ನು ಯೋಜಿಸಿದ್ದು ಯಾರು? ಈಗ ಸಂತ್ರಸ್ತರಿಗೆ ಪರಿಹಾರ ನೀಡುತ್ತೇವೆ ಎನ್ನುತ್ತಿರುವುದಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.