ಮುಂಡರಗಿ: 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಗೆ ಬರುವ ಮುಂಡರಗಿ ಪಟ್ಟಣವೂ ಸೇರಿದಂತೆ ತಾಲೂಕಿನಾದ್ಯಂತ ಶಾಂತಿಯುತ ಮತದಾನ ಜರುಗಿತು.
ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ಬಿಸಿಲಿನ ತಾಪದಿಂದ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಅಷ್ಟೋಂದು ಕಾಣಲಿಲ್ಲವಾದರೂ ಬಿಸಿಲಿನಲ್ಲಿಯೂ ಸಹ ಕೆಲವರು ಬಂದು ಮತ ಹಾಕಿದ್ದು ಕಂಡು ಬಂದಿತು. ಮತ್ತೆ 4 ಗಂಟೆಗೆ ನಂತರ ಮತದಾನ ಚುರುಕಾಗಿ ಜರುಗಿ 5.30 ರಿಂದ ಬಹುತೇಕ ಮತಗಟ್ಟೆಗಳಲ್ಲಿ ಮತದಾನ ಮುಗಿದಿರುವುದು ಕಂಡು ಬಂದಿತು.
ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ತಾಲೂಕಿನ ಹೆಸರೂರ, ನಾಗರಳ್ಳಿ, ಬೆಣ್ಣಿಹಳ್ಳಿ, ಕೊರ್ಲಹಳ್ಳಿ, ಗಂಗಾಪುರ, ಶೀರನಹಳ್ಳಿ, ಸಿಂಗಟಾಲೂರು, ಹಮ್ಮಿಗಿ, ಬಾಗೇವಾಡಿ, ಹಾರೋಗೇರಿ, ಹಿರೇವಡ್ಡಟ್ಟಿ, ಡಂಬಳ, ಡೋಣಿ ಸೇರಿದಂತೆ ಎಲ್ಲ ಗ್ರಾಮಗಳಲ್ಲಿ ಮತದಾನ ಜೋರಾಗಿಯೇ ನಡೆಯಿತು. ಎಲ್ಲೆಡೆ ಪುರುಷರು, ಮಹಿಳೆಯರು ಸರದಿ ಸಾಲಿನಲ್ಲಿ ನಿಂತು ಸಮಾಧಾನದಿಂದ ಮತ ಚಲಾಯಿಸಿದ್ದು, ಈ ಬಾರಿ ಬಹುತೇಕ ಗ್ರಾಮಗಳಲ್ಲಿ ಮಹಿಳಾ ಮತದಾರರು ಸರದಿ ಸಾಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಕಂಡು ಬಂದಿತು.ತಾಲೂಕಿನ ಕೊರ್ಲಹಳ್ಳಿ, ಶೀರನಹಳ್ಳಿ, ಸಿಂಗಟಾಲೂರು, ಹಮ್ಮಿಗಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತದಾರರು ಜಾತ್ರೆಗೆ ಬರುವಂತೆ ಹಿಂಡು ಹಿಂಡಾಗಿ ಮತಗಟ್ಟೆ ಕೇಂದ್ರದತ್ತ ಧಾವಿಸಿ ಬರುತ್ತಿರುವುದು ಕಂಡು ಬಂದಿತು. ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ಜರುಗಿಲ್ಲ. ಎಲ್ಲೆಡೆ ಶಾಂತಿಯುತ ಮತದಾನವಾಗಿದೆ.