ಸೂಕ್ತ ತನಿಖೆ ನಡೆಸಿ ಶಿಕ್ಷೆ ನೀಡಲಿ
ಕನ್ನಡಪ್ರಭ ವಾರ್ತೆ ಹಾಸನವಿಡಿಯೋ ಮೂಲಕ ಹೆಣ್ಣುಮಕ್ಕಳ ಮಾನ ಹಾಳು ಮಾಡುತ್ತಿರುವ ವಕೀಲ ಜಿ.ದೇವರಾಜೇಗೌಡರನ್ನು ಬಂಧಿಸಿ ಎಸ್‌ಐಟಿ ತಂಡ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಎಚ್.ಕೆ. ಮಹೇಶ್ ಆಗ್ರಹಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ‘ಲೋಕಸಭಾ ಚುನಾವಣೆ ಸಮಯದಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯ ಜನರು ತಲೆತಗ್ಗಿಸುವಂತೆ ಮಾಡಿದೆ. ಸರ್ಕಾರದ ಆದೇಶದಂತೆ ಎಸ್ಐಟಿ ತಂಡ ರಚನೆಯಾಗಿ ತನಿಖೆ ಪ್ರಗತಿಯಲ್ಲಿದೆ. ಈ ನಡುವೆ ದೌರ್ಜನ್ಯ ಎಸಗಿರುವ ವ್ಯಕ್ತಿ ದೇಶವನ್ನು ಬಿಟ್ಟು ಪರಾರಿಯಾಗಿದ್ದಾರೆ. ಕಳೆದ ಒಂದು ದಿನಗಳ ಹಿಂದೆ ಬಿಜೆಪಿ ಮುಖಂಡ ದೇವರಜೇಗೌಡ, ಒಂದು ಹೇಳಿಕೆ ಬಿಡುಗಡೆ ಮಾಡಿದ್ದು, ಡಿ.ಕೆ. ಶಿವಕುಮಾರ್ ಇದಕ್ಕೆ ರೂವಾರಿ, ಪೆನ್‌ಡ್ರೈವ್ ಇಟ್ಟುಕೊಂಡಿದ್ದಾರೆ ಎಂದಿದ್ದಾರೆ. ವಕೀಲ ದೇವರಾಜೇಗೌಡ ಬ್ಲಾಕ್‌ಮೇಲ್ ಮನುಷ್ಯ ಅನಿಸುತ್ತದೆ. ಏನೂ ಗೊತ್ತಿಲ್ಲದ ಡಿ.ಕೆ.ಶಿವಕುಮಾರ್, ಇತರರ ಮೇಲೆ ಆರೋಪ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.‘ಅಶ್ಲೀಲ ಸೆಲ್ಫಿ ವಿಡಿಯೋ ಮಾಡಿದವರು ಅವರೇ, ರಿಲೀಸ್ ಮಾಡಿರುವುದು ಅವರೇ, ಇದೀಗ ಬಿಜೆಪಿ ಮುಖಂಡ ದೇವರಾಜೇಗೌಡ ಆಡಿಯೋ ರಿಲೀಸ್ ಮಾಡಿ ಡಿಸಿಎಂ ಡಿ.ಕೆ ಶಿವಕುಮಾರ್ ಪೆನ್‌ಡ್ರೈವ್ ರಿಲೀಸ್ ಆಗಲು ಪ್ರಮುಖ ರೂವಾರಿ ಎಂದು ಆರೋಪಿಸಿರುವುದು ಎಷ್ಟು ಸರಿಯಲ್ಲ. ವಕೀಲ ದೇವರಾಜೇಗೌಡ ಬ್ಲಾಕ್‌ಮೇಲ್ ರಾಜಕಾರಣ ಮಾಡುತ್ತಿದ್ದು ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ತಮ್ಮ ಬಳಿ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ಇದ್ದು ಎನ್.ಆರ್. ವೃತದಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶನ ಮಾಡುವುದಾಗಿ ರೇವಣ್ಣ ಕುಟುಂಬದ ವಿರುದ್ಧ ಮಾತನಾಡುತ್ತಿದ್ದರು. ನಂತರ ಲೋಕಸಭೆ ಚುನಾವಣೆಯಲ್ಲಿ ಅದೇ ಕುಟುಂಬದ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ಮಾಡಿದರು. ಇದೀಗ ಪೆನ್‌ಡ್ರೈವ್ ಹಂಚಿಕೆ ವಿಚಾರದಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಶಿವರಾಮೇಗೌಡರ ಹೆಸರನ್ನು ಎಳೆದು ತರುತ್ತಿದ್ದಾರೆ’ ಎಂದು ದೂರಿದರು.
‘ಪೆನ್‌ಡ್ರೈವ್ ಪ್ರಕರಣದಲ್ಲಿ ಆಡಿಯೋ ಇದೆ ಎಂದು ಹೇಳುತ್ತಿರುವ ವಕೀಲ ದೇವರಾಜೇಗೌಡ ಡಿ.ಕೆ. ಶಿವಕುಮಾರ್ ಸಂಭಾಷಣೆಯ ಪೂರ್ಣ ಆಡಿಯೋ ದಾಖಲೆಯನ್ನು ಬಿಡುಗಡೆ ಮಾಡಲಿ. ಪೆನ್‌ಡ್ರೈವ್ ಪ್ರಕರಣದಲ್ಲಿ ಜಿಲ್ಲೆಯ ನೂರಾರು ಮಹಿಳೆಯರ ಮಾನ ಹರಾಜು ಆಗಿದೆ. ಇದಕ್ಕೆಲ್ಲ ಕಾರಣಕರ್ತರು ದೇವರಾಜಗೌಡರೇ. ಇವರು ತಮ್ಮ ಬಳಿ ಪೆನ್‌ಡ್ರೈವ್ ಇರುವುದಾಗಿ ಆರು ತಿಂಗಳ ಹಿಂದೆಯೇ ಹೇಳಿದ್ದರು. ಎಸ್ಐಟಿ ಮೊದಲು ದೇವರಾಜೇಗೌಡ ಅವರನ್ನು ಬಂಧನ ಮಾಡಬೇಕು. ದೇವರಾಜೇಗೌಡ ಭ್ರಷ್ಟ ವಕೀಲರಾಗಿದ್ದು, ಆ ವೃತ್ತಿಯಲ್ಲಿ ಇರಲು ಅವರು ನಾಲಾಯಕ್ ವ್ಯಕ್ತಿಯಾಗಿದ್ದಾರೆ’ ಎಂದು ಕಿಡಿಕಾರಿದರು.‘ಡಿಕೆಶಿ ಅವರು ಈ ಪ್ರಕರಣದಲ್ಲಿ ಯಾವುದೇ ಭಾಗಿ ಆಗದಿದ್ದರೂ ಸುಮ್ಮನೆ ಎಳೆದು ತರಲಾಗುತ್ತಿದೆ. ಪೆನ್‌ಡ್ರೈವ್ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳ ಯಾವುದೇ ಪಾತ್ರವಿಲ್ಲ. ಎಸ್ಐಟಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವಕೀಲ ದೇವರಾಜೇಗೌಡ ಅವರನ್ನು ಬಂಧನ ಮಾಡಿದರೆ ಎಲ್ಲಾ ವಿಚಾರವೂ ಹೊರಬರುತ್ತದೆ. ಪೆನ್‌ಡ್ರೈವ್ ಅಶ್ಲೀಲ ವಿಡಿಯೋದಲ್ಲಿ ಇರುವಂತಹ ಮಹಿಳೆಯರನ್ನೇ ಗುರಿಯಾಗಿಸಿ, ಆ ಕುಟುಂಬದಿಂದ ಕೋಟ್ಯಂತರ ರು. ಹಣ ವಸೂಲಿ ಮಾಡಿರುವ ಬಗ್ಗೆ ಮಾತುಗಳು ಹರಿದಾಡುತ್ತಿದ್ದು ಈ ಬಗ್ಗೆಯೂ ಎಸ್ಐಟಿ ಗಂಭೀರವಾಗಿ ತನಿಖೆ ನಡೆಸಿ ದೇವರಾಜೇಗೌಡರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಮುಖಂಡ ಅಬ್ದೂಲ್ ಕಹಿಂ, ಇತರರು ಇದ್ದರು.ಕಾಂಗ್ರೆಸ್ ಪಕ್ಷದ ಮುಖಂಡ ಎಚ್.ಕೆ. ಮಹೇಶ್ ಮಾಧ್ಯಮಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು.