ಚಂದ್ರು ಕೊಂಚಿಗೇರಿ
ತಾಲೂಕಿನ ಅತಿ ದೊಡ್ಡ ಕೆರೆಯೆಂಬ ಹೆಗ್ಗಳಿಕೆ ಹೊಂದಿರುವ ಹಗರನೂರು ಕೆರೆ 703 ಎಕರೆ ವಿಸ್ತೀರ್ಣ ಹೊಂದಿದೆ. 166 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಸಣ್ಣ ನೀರಾವರಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ಈ ಹಗರನೂರು ಕೆರೆಯ ಅಕ್ಕಪಕ್ಕದಲ್ಲಿ ಹಗರನೂರು, ಹಿರೇಹಡಗಲಿ, ಹಿರೇ ಕೊಳಚಿ, ಚಿಕ್ಕ ಕೊಳಚಿ ಸೇರಿದಂತೆ ಇತರೆ ಗ್ರಾಮಗಳ ರೈತರ ಜಮೀನು, ಜಾನುವಾರುಗಳು ಮತ್ತು ಬೇರೆ ಜಿಲ್ಲೆಗಳಿಂದ ಮೇವು ನೀರು ಅರಿಸಿ ಬಂದ ಕುರಿ ಮೇಕೆಗಳಿಗೆ ನೀರು ಆಸರೆಯಾಗಿದೆ.
500 ಎಕರೆಗೆ ಅಕ್ರಮ ನೀರು:ಹಗರನೂರು ಕೆರೆಗೆ ಅಧಿಕೃತವಾಗಿ 166 ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಇದು ರೈತರ ಪಹಣಿಯಲ್ಲಿ ನಮೂದು ಆಗಿದ್ದು ಸರ್ಕಾರಕ್ಕೆ ನೀರಿನ ತೆರಿಗೆ ಪಾವತಿ ಮಾಡುತ್ತಾರೆ. ಬಸರಕೋಡು ತಾಂಡ, ವಡ್ಡನಹಳ್ಳಿ ತಾಂಡ, ಹಗರನೂರು ಗ್ರಾಮದ ರೈತರು ಕೆರೆಯಂಗಳದಲ್ಲೇ ಅಕ್ರಮ ಮೋಟರ್ ಅಳವಡಿಸಿ ಪೈಪ್‌ಲೈನ್ ಮೂಲಕ ತಮ್ಮ ಜಮೀನುಗಳಿಗೆ ನೀರುಣಿಸುತ್ತಿದ್ದಾರೆ. ಕೆಲವೆಡೆ ದೊಡ್ಡ ಪ್ರಮಾಣದ ಹೊಂಡ ನಿರ್ಮಿಸಿ, ಕಾಲುವೆ ಮೂಲಕ ಅಕ್ರಮವಾಗಿ ನೀರು ಸಂಗ್ರಹಿಸಿ ತಮ್ಮ ಜಮೀನುಗಳಿಗೆ ನೀರು ಹಾಯಿಸುತ್ತಿದ್ದಾರೆ. 500 ಎಕರೆ ನೀರಾವರಿ ಮಾಡಿಕೊಂಡಿದ್ದಾರೆ.
ಕೆರೆ ಅಚ್ಚುಕಟ್ಟು ಪ್ರದೇಶದವರನ್ನು ಹೊರತು ಪಡಿಸಿ ಬೇರೆಯವರು ಅಕ್ರಮವಾಗಿ ನೀರು ಬಳಕೆ ಮಾಡುತ್ತಿದ್ದಾರೆ. ಕೆರೆಯಲ್ಲಿ ಪೈಪ್‌ಲೈನ್, ಮೋಟರ್ ಇಟ್ಟರೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಿರುಗಿ ನೋಡಿಲ್ಲ. ನಿತ್ಯ ಲಕ್ಷಾಂತರ ಲೀಟರ್ ನೀರು ಪೋಲಾಗುತ್ತಿದ್ದರೂ ಇದು ನಮಗೆ ಸಂಬಂಧವಿಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರಣ ಬಿಸಿಲು ಶುರುವಾಗಿದೆ. ನೀರಿನ ದಾಹ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಬೇಕಾಬಿಟ್ಟಿಯಾಗಿ ನೀರು ಬಳಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಕೆರೆಯ ನೀರು ಖಾಲಿಯಾಗಿ ಜೀವ ಜಲಕ್ಕೆ ಪರದಾಡುವ ಪರಿಸ್ಥಿತಿ ಎದುರಾಗುವ ದಿನಗಳು ದೂರ ಇಲ್ಲ. ಗಂಭೀರ ಸಮಸ್ಯೆ ಎದುರಾಗುವ ಮೊದಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮೋಟರ್, ಪೈಪ್‌ಲೈನ್‌ಗಳನ್ನು ತೆರವು ಮಾಡಿ ಕಿತ್ತು ಹೋದ ತೂಬುಗಳನ್ನು ಸರಿಯಾಗಿ ದುರಸ್ತಿ ಮಾಡಿ ಜೀವ ಜಲರಾಶಿಯನ್ನು ಉಳಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.