ರಾಜ್ಯ ಮತ್ತು ಕೇಂದ್ರ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿರುವ ಇಲ್ಲಿನ ವೆಂಕಟಪತಿ ಬಾವಿಯು ಶತ ಶತಮಾನಗಳಿಂದಲೂ ಅಭಿವೃದ್ಧಿಯಿಂದ ವಂಚಿತಗೊಂಡಿದ್ದು, ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಹ್ಲಾದರೆಡ್ಡಿ ಮಾದಿನಾಳ

ಕನಕಗಿರಿ: ರಾಜ್ಯ ಮತ್ತು ಕೇಂದ್ರ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿರುವ ಇಲ್ಲಿನ ವೆಂಕಟಪತಿ ಬಾವಿಯು ಶತ ಶತಮಾನಗಳಿಂದಲೂ ಅಭಿವೃದ್ಧಿಯಿಂದ ವಂಚಿತಗೊಂಡಿದ್ದು, ಪ್ರವಾಸಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಹೌದು, ೧೬ನೇ ಶತಮಾನದಲ್ಲಿ ೧ನೇ ಕನಕಪ್ಪ ಉಡಚನಾಯಕನ ಸಹೋದರ ವೆಂಕಟಪ್ಪ ನಾಯಕನು ಈ ಬಾವಿಯನ್ನು ಒಂದು ಲಕ್ಷ ವರಹಗಳನ್ನು ವ್ಯಯಿಸಿ ನಿರ್ಮಿಸಿದ್ದಾನೆಂದು ಅನೇಕ ಸಂಶೋಧನೆಗಳಲ್ಲಿ ಉಲ್ಲೇಖವಾಗಿದೆ. ವಿಜಯನಗರ ಕಾಲದ ಕಲಾತ್ಮಕವಾಗಿ ಬಾವಿಗಳ ಪೈಕಿ ಇದು ಸಹ ಒಂದಾಗಿದೆ.

೨೦೨೪ರ ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಈ ಬಾವಿಯ ಕಲಾಕೃತಿಯು ಪ್ರಥಮ ಸ್ಥಾನ ಪಡೆದಿತ್ತು. ೧೧೧ ಶಿಲಾಕಂಬಗಳು, ನರ್ತಕಿ, ಗಜ ಹಾಗೂ ಸಿಂಹ ಶಿಲಾಕಂಬಗಳು, ರಾಣಿಯರ ಸ್ನಾನಗೃಹ, ಸಪ್ತ ಸ್ವರವುಳ್ಳ ಶಿಲೆಗಳು, ಶೇಷ, ಬ್ರಹ್ಮ, ವಿಷ್ಣು, ಮಹೇಶ್ವರ ಮೂರ್ತಿಗಳನ್ನು ಈ ಬಾವಿಯು ಒಳಗೊಂಡಿದೆ. ಇನ್ನೂ ಮೇಲ್ಭಾಗದ ಕಟ್ಟಡದ ಕಂಬಗಳಲ್ಲಿನ ಉಬ್ಬು ಶಿಲ್ಪಗಳು, ಚಿತ್ತಾರಗಳು, ಪಟ್ಟಿಕೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಬಾವಿಯ ನೀರನ್ನು ಏತ ನೀರಾವರಿಗೂ ಉಪಯೋಗಿಸಲಾಗುತ್ತಿತ್ತು ಎನ್ನುವುದಕ್ಕೆ ಬಾವಿ ಮೇಲ್ಭಾಗದಲ್ಲಿ ನಿರ್ಮಿಸಿರುವ ಮಿನಿ ಕಾಲುವೆಯೂ ಇಂದಿಗೂ ಸಾಕ್ಷಿ ರೂಪವಾಗಿದೆ.

ಈ ಐತಿಹ್ಯ ಸ್ಮಾರಕವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಈಗಾಗಲೇ ಡೆಕ್ಕನ್ ಹರಿಟೆಜ್ ಫೌಂಡೇಶನ್ ಸಂಶೋಧಕರು ಎರಡು ಬಾರಿ ಇಲ್ಲಿಗೆ ಭೇಟಿ ನೀಡಿ ಶೋಧಿಸಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಪುರಾತತ್ವ ಇಲಾಖೆ ಮುಂದಾಗಿದೆಯಾದರೂ ಸೌಲಭ್ಯಗಳಿಂದ ವಂಚಿತಗೊಂಡಿದೆ.

ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ, ಕಾಂಪೌಂಡ್, ಉದ್ಯಾನ ಸೇರಿ ನಾನಾ ಸೌಕರ್ಯಗಳಿಲ್ಲವಾಗಿದ್ದು, ಪ್ರವಾಸಿಗರಿಗೆ ತೀವ್ರ ಸಮಸ್ಯೆಯಾಗಿದೆ.

ಚಿತ್ರೀಕರಣಕ್ಕೆ ಯುವಕ, ಯುವತಿಯರು ಇಲ್ಲಿಗೆ ನಿತ್ಯವೂ ಬರುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿಯೇ ಈ ಕಲಾತ್ಮಕ ಬಾವಿ ಫೇಮಸ್ ಆಗಿದೆ. ಯುವಕರನ್ನು ಬೆಸೆಯುವ ಈ ಬಾವಿಗೆ ಸೌಲಭ್ಯ ಹಾಗೂ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ತಾಲೂಕು ಆಡಳಿತ ೨೦೨೬ರ ಏ. ೩೦ರಂದು ಪ್ರೀ ವೆಡ್ಡಿಂಗ್ ಶೂಟಿಂಗ್‌ಗೆ ಬರುವ ಜೋಡಿಗೆ ದಿನಕ್ಕೆ ಸಾವಿರ ರು. ನಿಗದಿಗೊಳಿಸಿ ಆದೇಶಿಸಿದೆ. ಕಳೆದ ಆರು ತಿಂಗಳ ಹಿಂದೆ ಈ ವ್ಯವಸ್ಥೆ ಜಾರಿ ಮಾಡಲಾಗಿದೆ. ಹೀಗೆ ಸಂಗ್ರಹಗೊಂಡ ಹಣದಿಂದ ಬಾವಿ ಸಂರಕ್ಷಣೆ, ಸ್ವಚ್ಛತೆಗೆ ಕ್ರಮ ಕೈಗೊಂಡಿಲ್ಲ. ಸೌಲಭ್ಯಗಳಿಲ್ಲವಾದ್ದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ವಿರಳವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರಾಚೀನ ಕಾಲದ ಈ ಸ್ಮಾರಕವನ್ನು ಸಂರಕ್ಷಿಸಬೇಕೆನ್ನುವ ಸ್ಥಳೀಯರ ಕೂಗಿಗೆ ಸರ್ಕಾರಗಳು ಸ್ಪಂದಿಸದಿರುವುದು ದುರಂತವೇ ಸರಿ.ವಿಜಯನಗರ ಕಾಲದ ವೆಂಕಟಪತಿ ಬಾವಿ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದೆ. ಮದುವೆ ಚಿತ್ರೀಕರಣಕ್ಕೆ ಬರುವವರಿಂದ ವಸೂಲಿ ಮಾಡಿದ ಹಣ ತಹಸೀಲ್ದಾರರ ಖಾತೆಗೆ ಸೇರುತ್ತಿದೆಯೇ ಹೊರತು ಅಭಿವೃದ್ಧಿಯಾಗುತ್ತಿಲ್ಲ. ಇಲ್ಲಿನ ಅವ್ಯವಸ್ಥೆಯಿಂದ ಪ್ರವಾಸಿಗರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಎಬಿವಿಪಿ ಸೇವಾ ಆಯಾಮದ ರಾಜ್ಯ ಸಂಚಾಲಕ ಅಭಿಷೇಕ ಹಿರೇಮಠ.ಚಿತ್ರೀಕರಣಕ್ಕೆ ಬಂದವರಿಂದ ವಸೂಲಿ ಮಾಡಿದ ಹಣ ಪ್ರವಾಸೋದ್ಯಮ ಇಲಾಖೆಗೆ ಹೋಗಿದೆ. ತಹಸೀಲ್ದಾರರ ಬ್ಯಾಂಕ್ ಖಾತೆಗೆ ಜಮೆಯಾಗಿದೆ ಎಂಬುದು ಸುಳ್ಳು. ವೆಂಕಟಪತಿ ಬಾವಿ ಒಳ್ಳೆಯ ಸ್ಮಾರಕವಾಗಿದೆ. ಮೇಲಧಿಕಾರಿಗಳ ಮಾರ್ಗಸೂಚಿ ಅನ್ವಯ ಕ್ರಮ ಕೈಗೊಳ್ಳುತ್ತೇನೆ ಎಂದು ತಹಸೀಲ್ದಾರ್‌ ಚಂದ್ರಶೇಖರ ಗಾಳಿ ತಿಳಿಸಿದ್ದಾರೆ.