ಮಹಿಳೆಯರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಅವರು ಕೌಟುಂಬಿಕ ಜವಾಬ್ದಾರಿಗಳನ್ನು ಮೊದಲ ಆದ್ಯತೆಯಾಗಿ ನೋಡಿಕೊಳ್ಳಬೇಕು ಎಂಬ ಸಾಂಪ್ರದಾಯಿಕ ಮನಸ್ಥಿತಿ ಸ್ವಲ್ಪ ಪ್ರಮಾಣದಲ್ಲಿದೆ.

ಕನ್ನಡಪ್ರಭ ವಾರ್ತೆ ನರಗುಂದ

ಮಹಿಳೆಯರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ, ಅವರು ಕೌಟುಂಬಿಕ ಜವಾಬ್ದಾರಿಗಳನ್ನು ಮೊದಲ ಆದ್ಯತೆಯಾಗಿ ನೋಡಿಕೊಳ್ಳಬೇಕು ಎಂಬ ಸಾಂಪ್ರದಾಯಿಕ ಮನಸ್ಥಿತಿ ಸ್ವಲ್ಪ ಪ್ರಮಾಣದಲ್ಲಿದೆ ಎಂದು ಉಪನ್ಯಾಸಕಿ ದೀಪಾ ಗವಿಮಠ ಹೇಳಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಶ್ರೀ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಇವುಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಮತ್ತು ಕರ್ನಾಟಕ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, 2030ರ ವೇಳೆಗೆ ಭಾರತವು ಅಮೆರಿಕ ಮತ್ತು ಚೀನಾ ನಂತರ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಮುನ್ಸೂಚನೆ ಬಲವಾಗಿದೆ. ಆದ್ದರಿಂದ ಸಮಾಜದಲ್ಲಿ ಮಹಿಳೆಯರು ನಮ್ಮ ಧರ್ಮದ ಆಚಾರ ವಿಚಾರಗಳ ಜೊತೆ ದೇಶದ ಅಭಿವೃದ್ಧಿಗೆ ಕೈ ಜೋಡಿಸೋಣವೆಂದು ಕರೆ ನೀಡಿದರು.

ಕಿತ್ತೂರು ಚೆನ್ನಮ್ಮಳ ವಂಶಸ್ಥ ಪಾರ್ವತಿ ಮಲ್ಲಸರ್ಜ ದೇಸಾಯಿ ಮಾತನಾಡಿ, 200 ವರ್ಷಗಳ ಹಿಂದೆಯೇ ತನ್ನ ರಾಜ್ಯದ ರಕ್ಷಣೆಗಾಗಿ, ಜನ ಸಾಮಾನ್ಯರ ಹಕ್ಕುಗಳಿಗಾಗಿ ಬಲಾಢ್ಯ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಚೆನ್ನಮ್ಮ ದೇಶಪ್ರೇಮ, ಸ್ವಾಭಿಮಾನದ ಸಂಕೇತ. ಪಾಶ್ಚಿಮಾತ್ಯರ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಬಂಡೆದ್ದ ಧೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮಳ ಶೌರ್ಯ ಪರಾಕ್ರಮ ಇಂದಿನ ಮಹಿಳೆಯರಿಗೆ ಸ್ಪೂರ್ತಿ ಎಂದರು.

ಶಾಂತಲಿಂಗ ಶ್ರೀಗಳು ಮಾತನಾಡಿದರು. ಇತ್ತೀಚೆಗೆ ವೈದ್ಯಕೀಯ ಪದವಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ನಿಮಿತ್ತ ಡಾ. ವಿನೂತಾ ನಾಗನೂರ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು.

ಶಿವಾಣಿ ಮಾತಾಜಿ, ಭಾವನಾ ಪಾಟೀಲ, ಸುಮಾ ಗೊಡಚಿ, ಉಮಾ ಕುರಿ, ಈರಮ್ಮ ಮುದಕವಿ, ಬಿ.ಬಿ. ಕುರಿ, ಅಕ್ಷರ ದಾಸೋಹ ಸಹಾಯಕ ನಿದೇಶಕ ಮಾರುತಿ ಅಸುಂಡಿ, ಶ್ರದ್ಧಾನಂದ ಅಕ್ಕನ ಬಳಗದ ಸದಸ್ಯರು ಇದ್ದರು.

ಶಿಕ್ಷಕ ಮಹಾಂತೇಶ ಹಿರೇಮಠ ಸ್ವಾಗತಿಸಿದರು. ಪ್ರೊ. ಆರ್.ಬಿ. ಚಿನಿವಾಲರ ಕಾರ್ಯಕ್ರಮ ನಿರೂಪಿಸಿದರು.