ದಾಳಿ ಬಳಿಕವೂ ನಿಲ್ಲದ ದಲಾಲಿ ಸುಲಿಗೆ!

KannadaprabhaNewsNetwork |  
Published : Nov 17, 2025, 01:30 AM IST
16ಕೆಪಿಎಲ್21 ಬಿಳಿ ಚೀಟಿಯಲ್ಲಿ ಕಮಿಷನ್ ನಮೂದಿಸಿರುವುದು 16ಕೆಪಿಎಲ್22 ಕೊಪ್ಪಳ ಮಾರುಕಟ್ಟೆಯಲ್ಲಿ ಸವಾಲಿನ ದೃಶ್ಯ. | Kannada Prabha

ಸಾರಾಂಶ

ಕೊಪ್ಪಳ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್ ಸುಲಿಗೆಯಲ್ಲಿ ಒಂಚೂರೂ ಕಡಿಮೆಯಾಗಿಲ್ಲ

ಸೋಮರಡ್ಡಿ ಅಳವಂಡಿ ಕೊಪ್ಪಳ

ರೈತರಿಂದ ಕಮಿಷನ್ ಪಡೆಯುವುದು ಅಕ್ಷಮ್ಯ ಅಪರಾಧ, ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿ, ಯಾವುದೇ ಕಾರಣಕ್ಕೂ ನಯಾಪೈಸೆ ಕಮಿಷನ್ ಪಡೆಯುವಂತಿಲ್ಲ ಎಂದು ಉಪಲೋಕಾಯುಕ್ತ ಬಿ. ವೀರಪ್ಪ ಅವರು ಕೊಪ್ಪಳ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದಾಗ ಕಟ್ಟುನಿಟ್ಟಾಗಿ ಆದೇಶ ಮಾಡಿದ್ದರು.

ಅಚ್ಚರಿ ಎಂದರೆ ಲೋಕಾಯುಕ್ತರ ದಾಳಿಯ ನಂತರವೂ ಕೊಪ್ಪಳ ಎಪಿಎಂಸಿ (ಬೆಳವಿನಾಳ ಬಳಿ) ತರಕಾರಿ ಮಾರುಕಟ್ಟೆಯಲ್ಲಿ ಕಮಿಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ಇದೆಲ್ಲವೂ ಗೊತ್ತಿದ್ದೂ ಕೊಪ್ಪಳ ಎಪಿಎಂಸಿ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ.

ಹೌದು, ಉಪಲೋಕಾಯುಕ್ತರ ದಾಳಿಯ ಬಳಿಕ ಕೊಪ್ಪಳ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿನ ಕಮಿಷನ್ ದಂಧೆ ನಿಂತಿದೆಯೇ ಎಂದು ''''ಕನ್ನಡಪ್ರಭ'''' ಭಾನುವಾರ ರಿಯಾಲಿಟಿ ಚೆಕ್ ಮಾಡಿದಾಗ ಇದೆಲ್ಲವೂ ಬಯಲಾಗಿದೆ.

ಕೊಪ್ಪಳ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ರೈತರಿಂದ ಕಮಿಷನ್ ಸುಲಿಗೆಯಲ್ಲಿ ಒಂಚೂರೂ ಕಡಿಮೆಯಾಗಿಲ್ಲ. ಎಂದಿನಂತೆ ನೂರಕ್ಕೆ ಹತ್ತು ಕಮಿಷನ್ ಪಡೆಯವ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ₹2220 ಟೊಮೆಟೋ ಮಾರಿದ ರೈತನಿಗೆ ಬರೋಬ್ಬರಿ ₹220 ಕಮಿಷನ್ ಪಡೆದಿರುವ ಚೀಟಿ ''''ಕನ್ನಡಪ್ರಭ''''ಕ್ಕೆ ಲಭ್ಯವಾಗಿದೆ.

ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಅಂಗಡಿಯ ಸೀಲ್ ಸಹ ಇರದ ಬಿಳಿ ಚೀಟಿಯನ್ನೇ ನೀಡಲಾಗುತ್ತದೆ. ಅದರಲ್ಲಿ ಕಮಿಷನ್ ಪಡೆದಿರುವುದನ್ನು ದಾಖಲು ಮಾಡಲಾಗುತ್ತದೆ.

ಲೋಕಾಯುಕ್ತರು ದಾಳಿ ಮಾಡಿದರೆ ಏನಾಯಿತು ನಮ್ಮ ದಂಧೆ ನಾವು ಬಿಡುವುದಿಲ್ಲ ಎಂದು ದಲ್ಲಾಳಿಗಳು ಆಡಳಿತ ವ್ಯವಸ್ಥೆ ನಾಚುವಂತೆ ಅವ್ಯಾಹತವಾಗಿ ನಡೆಯುತ್ತಿದೆ.

ನಿಯಮ ಏನು ಹೇಳುತ್ತದೆ?: ಮಾರುಕಟ್ಟೆಯಲ್ಲಿ ರೈತರಿಂದ ಯಾವುದೇ ಕಮಿಷನ್ ಪಡೆಯುವಂತಿಲ್ಲ. ಒಂದು ರುಪಾಯಿ ಸಹ ಕಮಿಷನ್ ಪಡೆಯುವುದಕ್ಕೆ ಅವಕಾಶ ಇಲ್ಲ. ಅವರೇನಿದ್ದರೂ ಖರೀದಿದಾರರ ಬಳಿ ಕಮಿಷನ್ ಅಥವಾ ದಲ್ಲಾಳಿ ಪಡೆಯಬೇಕು. ಆದರೆ, ಕೊಪ್ಪಳ ಮಾರುಕಟ್ಟೆಯಲ್ಲಿ ಶೇ. 10 ಕಮಿಷನ್ ಪಡೆಯಲಾಗುತ್ತಿದ್ದು, ಇದು ರಾಜ್ಯದ ಯಾವ ಮಾರುಕಟ್ಟೆಯಲ್ಲಿಯೂ ಇಲ್ಲ.

ಲಕ್ಷ ರುಪಾಯಿ ಬೆಲೆಯ ತಮ್ಮ ತರಕಾರಿ ಮಾರಿದರೆ ರೈತರು ಬರೋಬ್ಬರಿ ₹10 ಸಾವಿರ ಕಮಿಷನ್ ನೀಡಬೇಕು. ಹತ್ತು ಸಾವಿರ ರು. ಬೆಲೆಯ ತರಕಾರಿ ಮಾರಿದರೆ ಸಾವಿರ ರುಪಾಯಿ ನೀಡಬೇಕು. ಇಂತಹ ವ್ಯವಸ್ಥೆ ಕೊಪ್ಪಳ ಮಾರುಕಟ್ಟೆಯಲ್ಲಿ ಮಾತ್ರ ನಿರಂತರವಾಗಿ ನಡೆಯುತ್ತಲೇ ಇದೆ. ಉಪಲೋಕಾಯುಕ್ತ ಬಿ. ವೀರಪ್ಪ ದಾಳಿ ಮಾಡಿದ ವೇಳೆಯಲ್ಲಿ ಈ ವ್ಯವಸ್ಥೆ ಕಂಡು ಬೆರಗಾಗಿದ್ದರು. ಅಲ್ಲಿಯೇ ಇದ್ದ ಎಪಿಎಂಪಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಮಾಡಿದ್ದರು. ಅವರು ಕಮಿಷನ್ ಪಡೆಯುವುದಕ್ಕೆ ಅವಕಾಶವೇ ಇಲ್ಲವಾದರೂ ನೀವ್ಯಾಕೆ ಸುಮ್ಮನಿದ್ದೀರಿ ಎನ್ನುವ ಪ್ರಶ್ನೆಗೆ ಅಲ್ಲಿಯೇ ಇದ್ದ ಅಧಿಕಾರಿಗಳು, ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇವೆ. ನಾಳೆಯೇ ಕಮಿಷನ್ ವ್ಯವಸ್ಥೆ ಬಂದ್ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು.

ಉಪಲೋಕಾಯುಕ್ತರು ಬಂದು ಹೋಗಿ ಬರೋಬ್ಬರಿ ಹದಿನೈದು ದಿನಗಳು ಆಗಿದ್ದರೂ ಇನ್ನು ಕಮಿಷನ್ ದಂಧೆಗೆ ಬ್ರೇಕ್ ಬಿದ್ದಿಲ್ಲ.

ಬದಲಾದ ಸಮಯ: ಬೆಳಗಿನ ಜಾವ 2, 4 ಗಂಟೆಗೆ ಸವಾಲು ಮಾಡಲಾಗುತ್ತಿತ್ತು. ಆದರೆ, ಉಪಲೋಕಾಯುಕ್ತರು ಬೆಳಗ್ಗೆ 5.30ಕ್ಕೆ ಸವಾಲು ಮಾಡುವಂತೆ ಸೂಚನೆ ನೀಡಿದ್ದರು. ಅದನ್ನು ಈಗ ಪಾಲನೆ ಮಾಡಲಾಗುತ್ತದೆ. ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಕಟ್ಟುನಿಟ್ಟಾಗಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಾರುಕಟ್ಟೆಯ ಸಮಯ ಬದಲಾವಣೆಯಾಗಿದೆಯೇ ಹೊರತು ಕಮಿಷನ್ ದಂಧೆಗೆ ಬ್ರೇಕ್ ಬಿದ್ದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ