ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳದ್ದೇ ದರ್ಬಾರ್‌

KannadaprabhaNewsNetwork |  
Published : Apr 03, 2026, 02:00 AM IST
1 ಟಿವಿಕೆ 1 – ತುರುವೇಕೆರೆಯ ಎಪಿಎಂಸಿ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಕಾಟ ಅತಿಯಾಗಿದೆ ಎಂದು ರೈತಾಪಿಗಳು ರಸ್ತೆ ತಡೆ ನಡೆಸಿದರು. | Kannada Prabha

ಸಾರಾಂಶ

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಬಿಡುತ್ತಿರುವವರು ಹೆಚ್ಚಾಗಿ ದಲ್ಲಾಳಿಗಳೇ ಆಗಿದ್ದಾರೆ. ಅವರಿಂದಾಗಿ ನಿಜವಾದ ರೈತಾಪಿಗಳಿಗೆ ತೊಂದರೆಯಾಗಿದೆ ಎಂದು ರೈತಾಪಿಗಳು ಆಕ್ರೋಶ ಭರಿತರಾಗಿ ಕೆಲಕಾಲ ಎಪಿಎಂಸಿ ಮುಂಭಾಗ ಪ್ರತಿಭಟನೆ ಮಾಡಿದ ಘಟನೆ ಜರುಗಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ರಾಗಿ ಬಿಡುತ್ತಿರುವವರು ಹೆಚ್ಚಾಗಿ ದಲ್ಲಾಳಿಗಳೇ ಆಗಿದ್ದಾರೆ. ಅವರಿಂದಾಗಿ ನಿಜವಾದ ರೈತಾಪಿಗಳಿಗೆ ತೊಂದರೆಯಾಗಿದೆ ಎಂದು ರೈತಾಪಿಗಳು ಆಕ್ರೋಶ ಭರಿತರಾಗಿ ಕೆಲಕಾಲ ಎಪಿಎಂಸಿ ಮುಂಭಾಗ ಪ್ರತಿಭಟನೆ ಮಾಡಿದ ಘಟನೆ ಜರುಗಿತು.

ಎಪಿಎಂಸಿ ಆವರಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ರಾಗಿ ಬಿಡಲು ಕಳೆದ ಭಾನುವಾರದಿಂದ ದಬ್ಬೇಘಟ್ಟ ರಸ್ತೆಯ ಆಜುಬಾಜು ತಮ್ಮ ರಾಗಿ ಚೀಲಗಳನ್ನು ರೈತರು ಟ್ರ್ಯಾಕ್ಟರ್ ನಲ್ಲಿ ತಂದು ನಿಲ್ಲಿಸಿಕೊಂಡಿದ್ದರು. ರಸ್ತೆಯ ಬದಿಯಿರುವ ಅಂಗಡಿ ಹೋಟೆಲ್ ನವರಿಗೆ ತೊಂದರೆಯಾಗಬಾರದೆಂದು ಅಂಗಡಿಯ ಮುಂಭಾಗ ಓಡಾಡಲು ಜಾಗ ಬಿಟ್ಟು ಬೇರೆಡೆ ವಾಹನಗಳನ್ನು ನಿಲ್ಲಿಸಿದ್ದರು. ಆದರೆ ಮಂಗಳವಾರ – ಬುಧವಾರ ಮಧ್ಯರಾತ್ರಿಯಿಂದ ಐವತ್ತಕ್ಕೂ ಹೆಚ್ಚು ರಾಗಿ ಚೀಲಗಳನ್ನು ಹೊತ್ತ ವಾಹನಗಳು ಸಾಲಿನಲ್ಲಿ ನಿಂತವು. ಬೆಳಗ್ಗೆ ರೈತರು ಬಂದು ನೋಡಲಾಗಿ ಸರತಿ ಸಾಲಿನ ಮಧ್ಯದಲ್ಲೇ ಅನೇಕ ಟ್ರ್ಯಾಕ್ಟರ್ ಗಳು ನಿಂತಿದ್ದನ್ನು ಪ್ರಶ್ನಿಸಿದ್ದಾರೆ. ಈ ಎಲ್ಲಾ ವಾಹನಗಳು ಕಳೆದ ಒಂದೆರೆಡು ದಿನಗಳ ಹಿಂದೆಯೇ ಸಾಕಷ್ಟು ರಾಗಿಯನ್ನು ಬಿಟ್ಟು ಬಂದಿರುವ ವಾಹನಗಳು ಎಂದು ಖಚಿತವಾಗುತ್ತಿದ್ದಂತೆ ರೈತಾಪಿಗಳು ಸಿಡಿಮಿಡಿಗೊಂಡರು. ಸರತಿ ಸಾಲಿನಿಂದ ಹೊರಗೆ ತೆಗೆಯುವಂತೆ ರೈತ ಆಲದಹಳ್ಳಿಯ ಕೃಷ್ಣೇಗೌಡ ಎಂಬುವವರ ನೇತೃತ್ವದಲ್ಲಿ ಆಗ್ರಹಿಸಲಾಯಿತು. ಇದಕ್ಕೆ ವಾಹನ ಮಾಲೀಕರು ಸ್ಪಂದಿಸದ ಕಾರಣ ದಾರಿಯ ಅಕ್ಕಪಕ್ಕದ ಅಂಗಡಿ, ಹೋಟೆಲ್ ನ ಮಾಲೀಕರು ಮತ್ತು ರೈತಾಪಿಗಳು ದಬ್ಬೇಘಟ್ಟ ರಸ್ತೆಗೆ ಅಡ್ಡಲಾಗಿ ಕುಳಿತು ಎಲ್ಲಾ ವಾಹನ ಸಂಚಾರವನ್ನು ತಡೆಹಿಡಿದರು. ಕೆಲವು ಅಂಗಡಿಯ ಮಾಲೀಕರು ಟ್ರ್ಯಾಕ್ಟರ್ ಗಳ ಚಕ್ರಗಳ ಗಾಳಿಯನ್ನೂ ಸಹ ತೆಗೆದರು. ನಮಗೆ ವ್ಯಾಪಾರ ವ್ಯವಹಾರಕ್ಕೆ ತೊಂದರೆಯಾಗುತ್ತಿದೆ. ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾರಿಗೆ ಅಡ್ಡ ಕುಳಿತು ಪ್ರತಿಭಟನೆ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಎನ್. ಎ. ಕುಂಇ ಅಹಮದ್ ರವರು ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಂಡು ರಾತ್ರಿ ವೇಳೆ ಅನಧಿಕೃತವಾಗಿ ಸರತಿ ಸಾಲಿನಲ್ಲಿ ನಿಲ್ಲಿಸಿದ್ದ ಎಲ್ಲಾ ವಾಹನಗಳನ್ನು ತೆರವುಗೊಳಿಸಿದರು. ಅಲ್ಲದೇ ಕ್ರಮಬದ್ಧವಾಗಿದ್ದ ಮಿಕ್ಕೆಲ್ಲಾ ವಾಹನಗಳಿಗೆ ಕ್ರಮಸಂಖ್ಯೆಯನ್ನು ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.ರಾಗಿ ಕೇಂದ್ರದಲ್ಲಿ ರಾಗಿ ಬಿಡುವವರಿಂದ ಫ್ರೂಟ್ ಐಡಿಗೆ ಸಂಬಂಧಿಸಿದಂತೆ ದಾಖಲುಗಳನ್ನು ಪಡೆಯಲಾಗುವುದು. ಅವರು ರೈತರೋ ಅಥವಾ ದಲ್ಲಾಳಿಗಳೋ ಎಂದು ಹೇಳಲು ಬರುವುದಿಲ್ಲ. ನಮಗೆ ದಾಖಲೆ ಮುಖ್ಯ ಹೊರೆತು ವ್ಯಕ್ತಿಯಲ್ಲ ಎಂದು ರಾಗಿ ಖರೀದಿ ಅಧಿಕಾರಿ ಚೇತನಾ ಹೇಳಿದರು. ನಾವು ಸೂಚನಾ ಫಲಕದಲ್ಲಿ ಇಂತಹುದೇ ದಿನ ಖರೀದಿ ಕೇಂದ್ರಕ್ಕೆ ಬರುವ ಮಾಹಿತಿ ನೀಡಿದ್ದೇವೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಮೊದಲೇ ಬಂದು ಸರತಿ ಸಾಲಿನಲ್ಲಿ ನಿಂತರೆ ನಾವೇನು ಮಾಡಲು ಸಾಧ್ಯ. ಖರೀದಿ ಕೇಂದ್ರಕ್ಕೆ ಬರುವ ರಾಗಿಯನ್ನು ಮಾತ್ರ ಖರೀದಿಸಲಾಗುತ್ತಿದೆ. ಹೊರಗಿನ ಸಮಸ್ಯೆ ನಮಗೆ ಗೊತ್ತಿಲ್ಲ ಎಂದು ಚೇತನಾ ಹೇಳಿದರು.

---------------

ಕೋಟ್‌....... ಈ ರಾಗಿ ಖರೀದಿ ಕೇಂದ್ರದಲ್ಲಿ ದಲ್ಲಾಳಿಗಳ ಹಾವಳಿ ಅತಿಯಾಗಿದೆ. ಇವರು ದಾವಣಗೆರೆ ಸೇರಿದಂತೆ ಇತರೆ ಜಿಲ್ಲೆಗಳಿಂದ ಕಡಿಮೆ ಬೆಲೆಗೆ ರಾಗಿ ಖರೀದಿ ಮಾಡುತ್ತಿದ್ದಾರೆ. ಇಲ್ಲಿ ಸುಮಾರು 4886 ರು. ಗಳಿಗೆ ಮಾರುತ್ತಿದ್ದಾರೆ ಎಂದು ರೈತ ಕೃಷ್ಣೇಗೌಡ ಆರೋಪಿಸಿದ್ದಾರೆ. ದಲ್ಲಾಳಿಗಳು ತಾಲೂಕಿನ ರೈತರ ಪಹಣಿ ಪಡೆದುಕೊಂಡು ನಮ್ಮ ವಾಹನದಲ್ಲಿ ರಾಗಿ ತಂದಿದ್ದೇವೆಂದು ಸುಳ್ಳು ಹೇಳಿ ರಾಗಿ ಬಿಡುತ್ತಿದ್ದಾರೆ. ಪಹಣಿ ಕೊಟ್ಟಿರುವ ರೈತರಿಗೆ ಪ್ರತಿ ಕ್ವಿಂಟಾಲ್ ರಾಗಿಗೆ 100ರು. ಭಕ್ಷೀಸು ಕೊಡ್ತಾರೆ. - ಕೃಷ್ಣೇಗೌಡ ರೈತರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು-ಕುಲಪತಿ ಪಾಟೀಲ್‌
ಮಹಿಳೆಯರು ಪುರುಷರಿಗೆ ಸಮಾನವಾಗಿ ಹೆಜ್ಜೆ ಹಾಕುತ್ತಿರುವುದು ಪ್ರಗತಿಯ ಸೂಚಕ