ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಶಾಸಕರಿಂದ ಒತ್ತಡ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ನಾಯಕರು ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸಲಿದ್ದಾರೆ.

ಬೆಳಗಾವಿ : ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಶಾಸಕರಿಂದ ಒತ್ತಡ ಇಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ನಾಯಕರು ಶೀಘ್ರದಲ್ಲೇ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರೊಂದಿಗೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಬೆಳಗಾವಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಇರುವ ಒತ್ತಡದ ಬಗೆಗಿನ ಚರ್ಚೆಗಳಿಗೆ ಅಂತ್ಯ ಹಾಡುವ ಯತ್ನ ನಡೆಸಿದರು.

ಕಾನೂನು ಎಲ್ಲರಿಗೂ ಒಂದೇ:

ಬೆಳಗಾವಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಭೆ ಕುರಿತು ಪ್ರತಿಕ್ರಿಯಿಸಿ, ಕಾನೂನಿನ ಪ್ರಕಾರ ಅವಕಾಶ ಇದ್ದರೆ ಅನುಮತಿ ನೀಡಲಾಗುತ್ತದೆ. ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗುತ್ತದೆ ಎಂದರು.

ಮೋಡ ಬಿತ್ತನೆಗೆ ನಿರ್ಧಾರ:

ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ನಡೆಸುವಂತೆ ಶಾಸಕರು ಮನವಿ ಮಾಡಿದ್ದಾರೆ. ಈ ಕುರಿತು ಹಣಕಾಸು ಹಾಗೂ ಸಂಬಂಧಿತ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲಾ ಆಯಾಮಗಳನ್ನು ಪರಿಶೀಲಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲ ದೇವಸ್ಥಾನಗಳ ಹುಂಡಿಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸುವಂತೆ ಮುಜರಾಯಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕಿತ್ತೂರು ಕರ್ನಾಟಕದ ಶಾಸಕರಿಗೆ ಸಿಎಂ ಔತಣ

ಡಿ.ಕೆ.ಶಿವಕುಮಾರ್‌ ಅವರು ಸಿಎಂ ಆದ ಬಳಿಕ ಮೊದಲ ಬಾರಿಗೆ ಕೈಗೊಂಡಿರುವ ಉತ್ತರ ಕರ್ನಾಟಕ ಪ್ರವಾಸದಲ್ಲಿ ರಾಜಕೀಯವಾಗಿ ಮಹತ್ವದ ಸಂದೇಶ ರವಾನಿಸಿದ್ದಾರೆ. ತಮ್ಮ ಪ್ರವಾಸದ ವೇಳೆ ಆಡಳಿತಾತ್ಮಕ ಸಭೆಗಳ ಜೊತೆಗೆ ಕಾಂಗ್ರೆಸ್ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೂ ಹೆಚ್ಚಿನ ಆದ್ಯತೆ ನೀಡಿದರು. ಈ ಮೂಲಕ ಗುರುವಾರ ರಾತ್ರಿ ಶಾಸಕರಿಗೆ ಡಿನ್ನರ್‌ ಪಾರ್ಟಿ ಕೂಡ ಆಯೋಜಿಸಿದ್ದರು.

ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಿವಿಧ ಜಿಲ್ಲೆಗಳ ಶಾಸಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಸಿಎಂ, ಅವರ ಕ್ಷೇತ್ರಗಳ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳು ಹಾಗೂ ಅನುದಾನ ಸಂಬಂಧಿತ ಬೇಡಿಕೆಗಳನ್ನು ಆಲಿಸಿದರು. ವಿಶೇಷವಾಗಿ ಕಿತ್ತೂರು ಕರ್ನಾಟಕ ಭಾಗದ ಶಾಸಕರು ತಮ್ಮ ಕ್ಷೇತ್ರಗಳ ರಸ್ತೆ, ನೀರಾವರಿ, ಕುಡಿಯುವ ನೀರು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಸಿಎಂ ಮುಂದಿಟ್ಟರು.

ಇದರ ಬೆನ್ನಲ್ಲೇ ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಔತಣಕೂಟ ರಾಜಕೀಯ ವಲಯದಲ್ಲಿ ವಿಶೇಷ ಗಮನ ಸೆಳೆಯಿತು. ಈ ಡಿನ್ನರ್ ಸಭೆಯಲ್ಲಿ ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಕಾರವಾರ ಸೇರಿ ಇತರ ಜಿಲ್ಲೆಗಳ 25ಕ್ಕೂ ಅಧಿಕ ಕಾಂಗ್ರೆಸ್ ಶಾಸಕರು ಪಾಲ್ಗೊಂಡು ಸಿಎಂ ಜತೆ ಅನೌಪಚಾರಿಕವಾಗಿ ಚರ್ಚೆ ನಡೆಸಿದರು.

ಡಿನ್ನರ್ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಯಾರೇ ಸಚಿವರಾದರೂ ಪಕ್ಷದ ಹಿತ ಮತ್ತು ಸರ್ಕಾರದ ಯಶಸ್ಸು ಮುಖ್ಯ. ಸಚಿವ ಸ್ಥಾನ ಸಿಗದವರು ಕೂಡ ನಿರಾಶರಾಗಬೇಡಿ. ನಿಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಲು ಸರ್ಕಾರ ಬದ್ಧವಾಗಿದೆ ಎಂಬ ಸಂದೇಶವನ್ನು ಶಾಸಕರಿಗೆ ನೀಡಿದ್ದಾರೆ ಎನ್ನಲಾಗಿದೆ.

ಸಚಿವ ಸಂಪುಟದಲ್ಲಿ ಇನ್ನೂ ಹಲವು ಸ್ಥಾನಗಳು ಖಾಲಿ ಇರುವುದರಿಂದ ಮಂತ್ರಿ ಪದವಿಯ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಬೆಳಗಾವಿ ಜಿಲ್ಲೆಯ ಲಕ್ಷ್ಮೀ ಹೆಬ್ಬಾಳಕರ, ಲಕ್ಷ್ಮಣ ಸವದಿ ಹಾಗೂ ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ ಸೇರಿದಂತೆ ಹಲವು ಹಿರಿಯ ಶಾಸಕರ ಹೆಸರುಗಳು ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಸಮಾಧಾನ ಉಂಟಾಗದಂತೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವನ್ನು ಮುಖ್ಯಮಂತ್ರಿ ನಡೆಸಿದರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಂಪುಟ ಸರ್ಕಸ್‌: ಶೀಘ್ರ ಡಿಕೆಶಿ, ಸಿದ್ದು ದಿಲ್ಲಿಗೆ? 

ಬೆಂಗಳೂರು : ವಿದೇಶ ಪ್ರವಾಸದಲ್ಲಿರುವ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರು ಜು.12 ರಂದು ದೆಹಲಿಗೆ ವಾಪಸಾಗಲಿದ್ದು, ಬಳಿಕ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಬುಲಾವ್‌ ಬಂದರೆ ರಾಜ್ಯ ನಾಯಕರು ದೆಹಲಿಗೆ ತೆರಳುವ ಸಾಧ್ಯತೆಯಿದೆ.

ಈಗಾಗಲೇ ಸಂಪುಟ ವಿಸ್ತರಣೆಗೆ ಸಂಭಾವ್ಯ ಸಚಿವರ ಪಟ್ಟಿ ಬಹುತೇಕ ಅಂತಿಮಗೊಂಡಿದ್ದು, ರಾಹುಲ್‌ಗಾಂಧಿ ಅವರು ಭೇಟಿಗೆ ಅವಕಾಶ ನೀಡಿದರೆ ಒಂದೆರಡು ದಿನದಲ್ಲಿ ಚರ್ಚೆ ಪೂರ್ಣಗೊಂಡು ಪಟ್ಟಿಗೆ ಅನುಮೋದನೆ ದೊರೆಯಲಿದೆ. ಹೀಗಾದರೆ ಜು.15ರ ಒಳಗಾಗಿ ಸಂಪುಟ ವಿಸ್ತರಣೆ ಆಗಬಹುದು ಎಂದು ಮೂಲಗಳು ತಿಳಿಸಿವೆ.

ರಾಹುಲ್‌ಗಾಂಧಿ ಅವರು ವಿದೇಶದಿಂದ ವಾಪಸಾದ ತಕ್ಷಣ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ಸಿಡಬ್ಲ್ಯೂಸಿ ಸದಸ್ಯ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳಬಹುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಸೇರಿ ವರಿಷ್ಠರೊಂದಿಗೆ ಚರ್ಚಿಸಿ ನೂತನ ಸಚಿವರ ಪಟ್ಟಿಗೆ ಅನುಮತಿ ಪಡೆಯಬಹುದು. ಹೀಗಾಗಿ ಆಷಾಢ ಮಾಸ ಶುರುವಾಗುವ ಮೊದಲೇ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಿದೆ.

ಒಂದು ವೇಳೆ ರಾಹುಲ್‌ ಭೇಟಿ ವಿಳಂಬವಾದರೆ ಆಷಾಢ ಮಾಸದ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಒಂದು ತಿಂಗಳು ಮುಂದೂಡಲಾಗುತ್ತದೆಯೇ? ಎಂಬ ಚರ್ಚೆ ಶುರುವಾಗಿದೆ. ಆಕಾಂಕ್ಷಿಗಳ ಒತ್ತಡದ ಜತೆಗೆ ಆಗಸ್ಟ್‌ ಮೊದಲ ವಾರದಲ್ಲಿ ಮಳೆಗಾಲದ ವಿಧಾನಮಂಡಲ ಅಧಿವೇಶನ ಶುರುವಾಗಲಿದ್ದು, ಸಭಾಧ್ಯಕ್ಷ ಹಾಗೂ ಸಭಾಪತಿಗಳ ಚುನಾವಣೆ ಸಾಧ್ಯತೆಯಿದೆ. ಹೀಗಾಗಿ ಆಷಾಢ ಮಾಸದಲ್ಲೇ ಸಂಪುಟ ವಿಸ್ತರಣೆ ಮಾಡುತ್ತಾರಾ? ಅಥವಾ ಸಂಪುಟ ವಿಸ್ತರಣೆ ಆಗದೆ ಅಧಿವೇಶನ ನಡೆಸಿ ಆಷಾಢದ ಬಳಿಕ ಸಂಪುಟ ವಿಸ್ತರಣೆ ಮಾಡುತ್ತಾರಾ ಎಂಬ ಕುತೂಹಲ ಉಂಟಾಗಿದೆ.

ಇನ್ನು ಕೆಲ ಆಕಾಂಕ್ಷಿ ಶಾಸಕರು ಶುಕ್ರವಾರವೇ ದೆಹಲಿಗೆ ತೆರಳಿರುವುದು ವರದಿಯಾಗಿದ್ದು, ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ರಣದೀಪ್‌ಸಿಂಗ್‌ ಸುರ್ಜೇವಾಲ ಲಭ್ಯರಿಲ್ಲ. ರಾಹುಲ್‌ ಗಾಂಧಿ ಅವರು ಇನ್ನೂ ವಾಪಸ್ ಬಂದಿಲ್ಲ. ಹೀಗಾಗಿ ಶಾಸಕರು ವೈಯಕ್ತಿಕ ಕಾರಣಕ್ಕೆ ದೆಹಲಿಗೆ ಭೇಟಿ ನೀಡಿರಬಹುದು ಎಂದು ಹೇಳಲಾಗಿದೆ.