ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಕೋಟೆ ಬೀದಿಯ ರಾಘವೇಂದ್ರ ಮಂದಿರದಲ್ಲಿ ಸೋಮವಾರ ಶ್ರೀರಾಘವೇಂದ್ರ ಗುರು ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀರಾಘವೇಂದ್ರ ಸ್ವಾಮಿಗಳ ಕಂಚಿನ ವಿಗ್ರಹವನ್ನು ರಥೋತ್ಸವದಲ್ಲಿ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮಂಗಳವಾದ್ಯ ಸಮೇತ ನಡೆದ ದಿವ್ಯ ಮಹಾರಥೋತ್ಸವದಲ್ಲಿ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡು ಪೂಜೆ ಸಲ್ಲಿಸಿ ಧನ್ಯತಾ ಭಾವ ಮೆರೆದರು.
ಶ್ರೀರಾಘವೇಂದ್ರ ಗುರು ಸಾರ್ವಭೌಮ ಸೇವಾ ಟ್ರಸ್ಟ್‌ನಿಂದ ಭಾನುವಾರ ಆರಂಭಗೊಂಡ ಪೂರ್ವ ಆರಾಧನೆ ಪ್ರಯುಕ್ತ ಮಠದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಸೋಮವಾರ ಮಧ್ಯರಾಧನೆ ಅಂಗವಾಗಿ ಸುಪ್ರಭಾತ, ದೇವತಾ ಪೂಜೆ, ಪಾರಾಯಣದ ನಂತರ ಪಂಚಾಮೃತ ಅಭಿಷೇಕ, ಪಾದಪೂಜೆ ನೆರೆವೇರಿಸಲಾಯಿತು.ಆರಾಧನಾ ಮಹೋತ್ಸವದ ಅಂಗವಾಗಿ ಟ್ರಸ್ಟ್‌ನಿಂದ ಪುರಾಣ ಪ್ರಸಿದ್ಧ ಶ್ರೀನರಸಿಂಹಸ್ವಾಮಿ, ಶ್ರೀಹೊಳೆ ಆಂಜನೇಯಸ್ವಾಮಿ ಹಾಗೂ ಕೋಟೆ ಬೀದಿಯ ಶ್ರೀವಿಶ್ವೇಶ್ವರಸ್ವಾಮಿ ದೇವರ ಸನ್ನಿಧಿಯಲ್ಲಿ ಅಭಿಷೇಕ ಸೇವೆ ನೆರವೇರಿಸಲಾಯಿತು.
ಬಳಿಕ ಶ್ರೀರಾಘವೇಂದ್ರ ಮಂದಿರದಲ್ಲಿ ಪುಷ್ಪಾಲಂಕಾರ, ಕನಕಾ ಅಭಿಷೇಕ, ಸಹಸ್ರಮಾರ್ಚನೆ ಯೊಂದಿಗೆ ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಅನ್ನ ಸಂತರ್ಪಣೆ ನಡೆಯಿತು.ಸಂಜೆ ಪಲ್ಲಕ್ಕಿ ಉತ್ಸವ, ಡೋಲೋತ್ಸವದ ಬಳಿಕ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು. ಉತ್ತರಾದನೆ ಅಂಗವಾಗಿ ಶ್ರೀರಾಘವೇಂದ್ರ ಮಠದಲ್ಲಿ ಮಂಗಳವಾರ ವಿಶೇಷ ಪೂಜಾ ಕಾರ್ಯಗಳೊಂದಿಗೆ ಎಂ.ಎಸ್.ವೆಂಕಟೇಶ್ ದಾಸ್ ಅವರಿಂದ ಪ್ರವಚನ, ಪಲ್ಲಕ್ಕಿ ಉತ್ಸವ, ಡೋಲೋತ್ಸವ ಸೇವೆಗಳ ನಂತರ ಭಕ್ತಿ ಗೀತೆಗಳ ಕಾರ್ಯಕ್ರಮ ನೆರವೇರಲಿದೆ ಎಂದು ಶ್ರೀರಾಘವೇಂದ್ರ ಗುರು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್. ರಾಮಚಂದ್ರ ಪ್ರಸಾದ್ ತಿಳಿಸಿದ್ದಾರೆ.
ರಾಯರ 354ನೇ ಆರಾಧನಾ ಮಹೋತ್ಸವಮಂಡ್ಯ:
ಶ್ರೀಗುರುರಾಘವೇಂದ್ರ ಸಾರ್ವಭೌಮರ 354ನೇ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.ನಗರದ ಶ್ರೀವ್ಯಾಸರಾಜ ಮಠದಲ್ಲಿ ಶ್ರೀಗುರುಗಳ ಮಧ್ಯರಾಧನೆ ಸಡಗರದಿಂದ ನೆರವೇರಿತು. ಮಧ್ಯಾಹ್ನ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ಇದಕ್ಕೂ ಮುನ್ನ ಶ್ರೀರಾಯರ ರಥೋತ್ಸವ ಮಂಗಳವಾಧ್ಯಗಳೊಂದಿಗೆ ರಥ ಬೀದಿಯಲ್ಲಿ ಸಾಗಿತ್ತು. ಭಕ್ತರು ಭಜನೆ, ಕೀರ್ತನೆಗಳ ಮೂಲಕ ಭಕ್ತಿಯ ಪರಾಕಾಷ್ಟದಲ್ಲಿ ಮಿಂದೆದ್ದರು.
ತಾಲೂಕಿನ ಬೇವಿನಹಳ್ಳಿ ಗ್ರಾಮದ ಶ್ರೀರಾಘವೇಂದ್ರ ಗುರುಸಾರ್ವಭೌಮರ ಮಠದಲ್ಲಿ ಆರಾಧನೆ ಪ್ರಯುಕ್ತ ವಿಶೇಷ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಕ್ತರು ಭಕ್ತಿಗೀತೆಗಳನ್ನು ಹಾಡುತ್ತಾ, ಭಕ್ತಿಯ ಹೊನಲಲ್ಲಿ ಕುಣಿದು ಕುಪ್ಪಳಿಸಿದರು.ಆರಾಧನೆ ಪ್ರಯುಕ್ತ ಮುಂಜಾನೆಯಿಂದಲೇ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಹೂವುಗಳಿಂದ ಅಲಂಕರಿಸಲಾಗಿತ್ತು. ಸುತ್ತಮುತ್ತಲ ಗ್ರಾಮಗಳ ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ರಾಯರ ದರ್ಶನ ಪಡೆದು ಪುನೀತರಾದರು. ನಂತರ ಅನ್ನಪ್ರಸಾದ ಸ್ವೀಕರಿಸಿದರು.
ನಗರಸಭಾಧ್ಯಕ್ಷ ಎಂ.ಎನ್. ಪ್ರಕಾಶ್ (ನಾಗೇಶ್), ಮನ್ಮುಲ್ ನಿರ್ದೇಶಕ ಬಿ.ಆರ್.ರಾಮಚಂದ್ರು ಸೇರಿದಂತೆ ಹಲವರು ಶ್ರೀಮಠಕ್ಕೆ ಭೇಟಿ ನೀಡಿ ಗುರುಗಳ ದರ್ಶನ ಪಡೆದರು. ಇಲ್ಲಿನ ಕಾವೇರಿ ನಗರದ ಶ್ರೀ ರಾಯರ ಮಠದಲ್ಲೂ ವಿಶೇಷ ಪೂಜಾ ಕಾರ್‍ಯಕ್ರಮ ಜರುಗಿದವು.