ಕನ್ನಡಪ್ರಭ ವಾರ್ತೆ ಸಕಲೇಶಪುರ
ಪಾಪದ ಕೊಳೆ ತೊಳೆಯಲು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳುವುದು ಅಗತ್ಯ ಎಂದು ಆದಿಚುಂಚುನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.ಶುಕ್ರವಾರ ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಒಕ್ಕಲಿಗ ಸಮಾಜ ಹಾಗೂ ಆದಿಚುಂಚುನಗರಿ ಮಠದ ಸಂಯುಕ್ತಾ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶತೋತ್ತರ ರಜತ ಹುಣ್ಣಿಮೆ ಹಾಗೂ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಉದ್ಘಾಟಿಸಿ ಆಶೀರ್ವಚನ ನೀಡಿ, ಮನಸ್ಸನ್ನು ಸರಿಯಾಗಿ ಉಪಯೋಗಿಸುವ ಕಲೆ ತಿಳಿಯದವರು ಬದುಕನ್ನು ಭಾರ ಮಾಡಿಕೊಳ್ಳುತ್ತಾರೆ. ಆದ್ದರಿಂದ, ಮನಸ್ಸನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸವತ್ತ ಗಮನವಿರಲಿ. ಮನಸ್ಸನ್ನು ಉತ್ತಮ ಕೆಲಸಗಳಿಗೆ ಬಳಸಲು ಸಂಸ್ಕಾರದ ಅಗತ್ಯವಿದೆ. ಸಂಸ್ಕಾರ ಕಲಿಸುವುದು ತಾಯಂದಿರ ಜವಾಬ್ದಾರಿ. ಮನಸ್ಸು ಎಂಬುದು ಸರಳವಾಗಿದೆ, ಈ ಮನಸ್ಸನ್ನು ಸರಿಯಾಗಿ ಬಳಸಿಕೊಂಡಾಗ ಅತ್ಯಧ್ಬುತ ಸಾಧನೆ ಸಾಧ್ಯ ಎಂದರು. ಉತ್ತಮ ಗುರುಗಳ ಮಾರ್ಗದರ್ಶನ ಜೀವನವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಹಿರಿಯರ ಪರಂಪರೆ ಸಾಧನೆಗಳನ್ನು ಅರಿಯದ ಹೊರತು ನಮ್ಮ ಸಾಧನೆ ಸಾಧ್ಯವಿಲ್ಲ ಎಂದರು. ಮಠದ ಬೆಳವಣಿಗೆಗೆ ತಾಲೂಕಿನ ಭಕ್ತರ ಕಾಣಿಕೆ ಅತ್ಯಮೂಲ್ಯ. ಸಕಲೇಶಪುರ ತಾಲೂಕಿನಲ್ಲಿ ಶ್ರೀ ಮಠದ ಶಾಖೆಯನ್ನು ಸ್ಥಾಪಿಸಬೇಕು ಎಂಬ ಹಿಂದಿನ ಶ್ರೀಗಳ ಆಶಯ ಈಗ ಈಡೇರಿದ್ದು, ತಾಲೂಕಿನ ರಾಟೇಮನೆ ಗ್ರಾಮ ಸಮೀಪ ೮ ಎಕರೆ ಪ್ರದೇಶದಲ್ಲಿ ಮಠದ ಶಾಖೆ ಸ್ಥಾಪನೆಗಾಗಿ ಭೂಮಿಪೂಜೆ ನೆರವೇರಿಸಲಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಸಜ್ಜನರ ಸಹವಾಸ ಉತ್ತಮ ನಾಗರಿಕರನ್ನಾಗಿ ಮಾಡಲಿದೆ. ಕೆಂಪೇಗೌಡರು ಎಲ್ಲ ಸಮುದಾಯಗಳನ್ನು ಪ್ರೀತಿಸುತ್ತಿದ್ದ ನಾಯಕ. ಸುಮಾರು ೬೪ ಸಮುದಾಯಗಳಿಗೆ ಬೆಂಗಳೂರಿನಲ್ಲಿ ಬಡಾವಣೆ ನಿರ್ಮಿಸಿ ಅವರ ವೃತ್ತಿಗೆ ಅನುಕೂಲ ಒದಗಿಸಿದಂತಹ ಧೀಮಂತರು. ಆದ್ದರಿಂದ, ಕೆಂಪೇಗೌಡರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ತಪ್ಪು. ಅವರ ತತ್ವ, ಆದರ್ಶಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಸಾರ್ಥಕಗೊಳಿಸಿ ಒಕ್ಕಲಿಗ ಸಮಾಜವನ್ನು ಗಟ್ಟಿಗೊಳಿಸಿದ ಕೀರ್ತಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗೆ ಸಲ್ಲುತ್ತದೆ ಎಂದರು. ಕಾಫಿಬೆಳೆಗಾರರ ಬಹುವರ್ಷದ ಒತ್ತುವರಿ ಸಮಸ್ಯೆಯನ್ನು ಬಗೆಹರಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ. ಪ್ರತಿ ಎಕರೆಗೆ ಒಂದು ಸಾವಿರ ಹಣ ನೀಡುವ ಮೂಲಕ ಯಾವುದೆ ಆತಂಕವಿಲ್ಲದೆ ಭೂಮಿಯನ್ನು ಮೂವತ್ತು ವರ್ಷ ಅನುಭವಿಸುವ ಹಕ್ಕನ್ನು ಬೆಳೆಗಾರರಿಗೆ ಕಲ್ಪಿಸಿದ್ದೇನೆ ಎಂದರು.ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಸಿ ಸಂದೇಶ್ ಮಾತನಾಡಿ, ಸ್ವಾರ್ಥವಿಲ್ಲದ ಸೇವೆ ಮಾಡುವುದು ದೇವರಿಗೆ ಪ್ರೀತಿ. ಸ್ವಾಸ್ಥಯುಕ್ತ ಸಮಾಜ ನಿರ್ಮಾಣಕ್ಕೆ ಶಿಕ್ಷಣ ಹಾಗೂ ಆರೋಗ್ಯ ಅಗತ್ಯ. ಈ ಎರಡು ಕಾರ್ಯಗಳನ್ನು ಶ್ರೀ ಮಠ ಮಾಡುತ್ತಿದೆ. ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರನ್ನು ಜೊತೆಗೆ ಕರೆದೊಯ್ಯುವವರನ್ನು ದಾರ್ಶನಿಕರು ಎನ್ನಲಾಗುತ್ತಿದೆ. ಜಾತಿಯನ್ನು ಒಗ್ಗೂಡಿಸುವುದರೊಂದಿಗೆ ಇಡೀ ಹಿಂದೂ ಸಮಾಜವನ್ನು ಸದೃಢಗೊಳಿಸಿದ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಹೆಸರು ಜಗತ್ತು ಇರವವರೆಗೂ ಚಿರಸ್ಥಾಯಿಯಾಗಿ ಉಳಿಯಲಿದೆ. ಲೋಕಕಲ್ಯಾಣ ಆದಾಗ ಮಾತ್ರ ಆತ್ಮಕಲ್ಯಾಣವಾಗಲಿದೆ ಎಂದರು.
ಎಷ್ಟುವರ್ಷ ಬದುಕಿದ್ದೇವೆ ಎಂಬುದಕ್ಕಿಂತ ಬದುಕಿದ್ದಾಗ ಏನು ಮಾಡಿದ್ದೇವೆ ಎಂಬುದು ಮುಖ್ಯ. ಆದ್ದರಿಂದ ಜೀವಿತಾವಧಿಯಲ್ಲಿ ತಮ್ಮ ಶಕ್ತಿಯಾನುಸಾರ ಸಮಾಜಸೇವೆಯಲ್ಲಿ ತೊಡಗಿಕೊಳ್ಳಿ ಎಂದರು. ವೇದಿಕೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳ ೧೦೮ ಕೆ.ಜಿ ರಜತ ತುಲಾಭಾರ ನಡೆಸಲಾಯಿತು. ಈ ವೇಳೆ ೧೦೮ ವಿಧದ ಹೂವು ಹಾಗೂ ಹಣ್ಣುಗಳನ್ನು ಅರ್ಪಿಸಲಾಯಿತು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟಿಸಲಾಯಿತು. ಪ್ರತಿಮೆ ಸ್ಥಳದಿಂದ ವೇದಿಕೆಯವರಗೆ ೧೦೦೮ ಕುಂಭದೊಂದಿಗೆ ಸ್ವಾಮೀಜಿ ಹಾಗೂ ಗಣ್ಯರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಕಾರ್ಯಕ್ರಮದಲ್ಲಿ ಮದಾರಚನ್ನಯ್ಯ ಸ್ವಾಮೀಜಿ, ಶ್ರೀ ಶಿವಲಿಂಗಮಂಜುನಾಥ ಸ್ವಾಮೀಜಿ, ಶ್ರೀ ಶಿವಾನಂದಪುರಿ ಸ್ವಾಮೀಜಿ, ಸೋಮೇಶ್ವರನಾಥ ಸ್ವಾಮೀಜಿ, ಗುಣನಾಥ ಸ್ವಾಮೀಜಿ, ಚಂದ್ರಶೇಖರ್‌ನಾಥ ಸ್ವಾಮೀಜಿ, ಅನ್ನದಾನೇಶ್ವರ ಸ್ವಾಮೀಜಿ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಎಂ ವಿಶ್ವನಾಥ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮುದ್ದೇಗೌಡ, ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಬೈರಮುಡಿಚಂದ್ರು, ಸುಪ್ರದೀಪ್ತ ಯಜಮಾನ್, ಮುರುಳಿಮೋಹನ್, ಜೈಮಾರುತಿ ದೇವರಾಜ್ ಮುಂತಾದವರಿದ್ದರು.-----------------------------------------------------ಫೋಟೋ ಶೀರ್ಷಿಕೆ|: ಕೆಂಪೇಗೌಡ ಪ್ರತಿಮೆ ಉದ್ಘಾಟಿಸಿದ ಆದಿಚುಂಚುನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ.ಶತೋತ್ತರ ರಜತ ಹುಣ್ಣಿಮೆ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ.