ಕನ್ನಡಪ್ರಭ ವಾರ್ತೆ ತುಮಕೂರುಜೀವವಿಮೆ ಹಣದ ದುರಾಸೆಗಾಗಿ ಸ್ವಂತ ತಮ್ಮನನ್ನೇ ಭೀಕರವಾಗಿ ಕೊಲೆ ಮಾಡಿ ರಸ್ತೆ ಅಪಘಾತ ಎಂದು ಬಿಂಬಿಸಿದ್ದ ಅಣ್ಣ ಮತ್ತು ಆತನ ಸಹಚರರನ್ನು ಪೊಲೀಸರು ಬಂಧಿಸಿರುವ ಘಟನೆ ಶಿರಾ ತಾಲೂಕು ಪಟ್ಟನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸನಹಳ್ಳಿಯಲ್ಲಿ ನಡೆದಿದೆ.
ಘಟನೆ ವಿವರ: ಆರೋಪಿ ಹನುಮಂತರಾಜು ಹಾಗೂ ಕೊಲೆಯಾದ ರಮೇಶ್ ಸ್ವಂತ ಅಣ್ಣ ತಮ್ಮಂದಿರಾಗಿದ್ದು ಮೂಲತಃ ಆಂಧ್ರಪ್ರದೇಶವರಾಗಿದ್ದರು. ಕೊಲೆಯಾದ ರಮೇಶ್ ಮೊದಲು ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದು ನಂತರ ತಾನು ಮಂತ್ರವಾದಿ ಎಂದು ಬಿಂಬಿಸಿಕೊಂಡು ಮಾಟ ಮಂತ್ರದ ಮೂಲಕ ಹೆದರಿಸುತ್ತಿದ್ದ. ಇದರಿಂದ ರೋಸಿಹೋಗಿದ್ದ ಅಣ್ಣ ಹನುಮಂತರಾಜು ಎರಡು ವರ್ಷದ ಹಿಂದೆಯೇ ಕೊಲೆಗೆ ಸಂಚು ರೂಪಿಸಿ ರಮೇಶನ ಹೆಸರಲ್ಲಿ ಎಲ್‌ಐಸಿ ಪಾಲಸಿ ಮಾಡಿಸಿ ಅದಕ್ಕೆ ಪ್ರತಿವರ್ಷ 85 ಸಾವಿರ ವಿಮಾಹಣ ತುಂಬಿದ್ದ. ಒಟ್ಟು 15ಲಕ್ಷದ ವಿಮಾ ಪಾಲಸಿ ಅದಾಗಿತ್ತು. ಅದಕ್ಕೆ ತನ್ನನ್ನೇ ನಾಮಿನಿ ಮಾಡಿಕೊಂಡಿದ್ದ ಹನುಮಂತರಾಜು, ಪಾಲಸಿಯಲ್ಲಿ ಅಪಘಾತದಿಂದ ಮೃತಪಟ್ಟರೆ ವಿಮೆ ಹಣ ಡಬಲ್ ಬರುವುದನ್ನು ಅರಿತು ರಮೇಶನನ್ನು ಯಾವುದೋ ಪೂಜೆ ನೆಪದಲ್ಲಿ ಶಿರಾ – ಅಮರಾಪುರ ರಸ್ತೆಯಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ದೊಣ್ಣೆಯಿಂದ ಆತನ ಮರ್ಮಾಂಗಕ್ಕೆ ಹಲ್ಲೆ ಮಾಡಿ, ಆತನ ಮೇಲೆ ಕಾರನ್ನು 3-4 ಬಾರಿ ಹತ್ತಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು, ಆದರೂ ಜೀವ ಹೋಗದೇ ಇದುದ್ದರಿಂದ ಬ್ಯಾಟರಿ ಜಂಪಿಂಗ್ ವೈರ್ ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ ನಂತರ ಶವವನ್ನು ಮತ್ತು ದ್ವಿಚಕ್ರವಾಹವನ್ನು ಟಾರು ರಸ್ತೆಗೆ ಎಳೆದು ತಂದು ದ್ವಿಚಕ್ರ ವಾಹನದ ಮುಂಭಾಗ ಜಖಂ ಮಾಡಿ ಅಪಘಾತವಾಗಿರುವಂತೆ ಸೃಷ್ಠಿ ಮಾಡಿದ್ದರು. ಈ ಸಂಬಂಧ ಸಂಬಂಧಿಸಿದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಶವ ಪರೀಕ್ಷೆ ನಡೆಸಿದ್ದ ವೈದ್ಯರು ನೀಡಿದ ಸುಳಿವಿನ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿ ನೈಜ ಆರೋಪಿಗಳನ್ನು ಕಂಬಿಯ ಹಿಂದೆ ತಳ್ಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರ ಸೂಚನೆ ಮೇರೆಗೆ ಹೆಚ್ಚುವರಿ ಅಧೀಕ್ಷಕ ಸಿ ಗೋಪಾಲ್ ರವರು ಮತ್ತು ಎಂ.ಎಲ್.ಪುರುಶೋತ್ತಮ್ ಹಾಗೂ ಶಿರಾ ಉಪವಿಭಾಗದ ಡಿವೈಎಸ್.ಪಿ ಬಿ.ಕೆ ಶೇಖರ್ ಮತ್ತು ಶಿರಾ ಗ್ರಾಮಾಂತರ ವೃತ್ತದ ಸಿಪಿಐ ಡಿ.ಜಿ ಶ್ರೀನಿವಾಸ ರವರ ನೇತೃತ್ವದಲ್ಲಿ ಪೊಲೀಸರ ತಂಡ ಕ್ಷಿಪ್ರ ಕಾರ್ಯಚರಣೆ ನಡೆಸಿ ಕೃತ್ಯ ನಡೆದ 12 ಗಂಟೆ ಒಳಗಾಗಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.