ಆರೋಗ್ಯಕರ ಸಮಾಜಕ್ಕೆ ಶುಶ್ರೂಷಕರ ಸೇವೆ ಮಹತ್ವದ್ದು: ಕುಲಸಚಿವ ಶ್ರೀಕಾಂತ್ ಫುಲ್ಲಾರಿ

KannadaprabhaNewsNetwork |  
Published : Jun 24, 2026, 01:15 AM IST
 ಸಿಕೆಬಿ-1 ತಾಲ್ಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಆರೋಗ್ಯ ವಿಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ದೀಪ ಬೆಳಗುವಿಕೆ ಮತ್ತು ಪ್ರಮಾಣವಚನ ಬೋಧನೆ ಹಾಗೂ ಶ್ವೇತ ಕೋರ್ಟ್ ಧರಿಸುವ  ಸಮಾರಂಭವನ್ನು ಡಾ. ಶ್ರೀಕಾಂತ್ ಪುಲ್ಲಾರಿ ಉದ್ಘಾಟಿಸಿದರು | Kannada Prabha

ಸಾರಾಂಶ

ಆರೋಗ್ಯಕರ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶುಶ್ರೂಷಕರ ಪಾತ್ರ ಅತ್ಯಂತ ಮುಖ್ಯವಾಗಿದ್ದು ಅಂತಹ ಸೇವಾ ಪರ ಆರೋಗ್ಯ ಕಾರ್ಯಕರ್ತರನ್ನು ಸಮಾಜ ಎಂದೂ ಗೌರವಿಸಬೇಕು

ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಆರೋಗ್ಯಕರ ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶುಶ್ರೂಷಕರ ಪಾತ್ರ ಅತ್ಯಂತ ಮುಖ್ಯವಾಗಿದ್ದು ಅಂತಹ ಸೇವಾ ಪರ ಆರೋಗ್ಯ ಕಾರ್ಯಕರ್ತರನ್ನು ಸಮಾಜ ಎಂದೂ ಗೌರವಿಸಬೇಕು ಎಂದು ಕರ್ನಾಟಕ ರಾಜ್ಯ ನರ್ಸಿಂಗ್ ಕೌನ್ಸಿಲ್‌ನ ಕುಲ ಸಚಿವ ಶ್ರೀಕಾಂತ್ ಫುಲ್ಲಾರಿ ಅಭಿಪ್ರಾಯಪಟ್ಟರು .

ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಆರೋಗ್ಯ ವಿಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಿದ್ದ ದೀಪ ಬೆಳಗುವಿಕೆ ಮತ್ತು ಪ್ರಮಾಣವಚನ ಬೋಧನೆ ಹಾಗೂ ಶ್ವೇತ ಕೋಟ್‌ ಧರಿಸುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಆರೋಗ್ಯಕರ ವಾತಾವರಣ, ಕಾಳಜಿಯುಕ್ತ ಸಂವಹನ, ಬದ್ಧತೆ, ಜವಾಬ್ದಾರಿ ಹಾಗೂ ನಿಷ್ಕಳಂಕ ನರ್ಸಿಂಗ್ ಆರೈಕೆಯಿಂದ ಶುಶ್ರೂಷಕರ ವೃತ್ತಿ ಗೌರವ ಹೆಚ್ಚುತ್ತದೆ. ನರ್ಸಿಂಗ್ ಹಾಗೂ ಸಮಾನಾಂತರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಲ್ಲಿ ಆರೋಗ್ಯ ಸೇವೆಗಳು, ಚಿಕಿತ್ಸೆ, ರೋಗಿಗಳ ನಿರ್ವಹಣೆ ಅತ್ಯಂತ ಮುಖ್ಯವಾಗಿದ್ದು ನಾಲ್ಕು ವರ್ಷಗಳ ನರ್ಸಿಂಗ್ ಕೋರ್ಸ್ ನಲ್ಲಿ ಜ್ಞಾನ, ತಿಳಿವಳಿಕೆ, ಕೌಶಲ, ಸಾಮರ್ಥ್ಯ, ಸೇವಾ ಗುಣಗಳನ್ನು ಕಲಿತು ಬಳಸಬೇಕಾಗಿದೆ. ಇಂತಹ ಸೇವೆಯಿಂದಾಗಿ ಉತ್ತಮ ಉದ್ಯೋಗಗಳು ಲಭಿಸುತ್ತವೆ, ವೃತ್ತಿಯ ಪರಿಣಿತಿ ಹಾಗೂ ವೃತ್ತಿ ಸಂಹಿತೆಯಿಂದ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದರು.

ಇಂದು ಜಗತ್ತಿನ ಹಲವು ದೇಶಗಳಲ್ಲಿ ನರ್ಸಿಂಗ್ ಸೇವೆಗಳ ಉದ್ಯೋಗಕ್ಕೆ ಹೆಚ್ಚು ಬೇಡಿಕೆ ಇದ್ದು ತಾವು ಉತ್ತಮ ಶುಶ್ರೂಷಕರಾಗಿ ರೂಪುಗೊಳ್ಳುವುದರಿಂದ ನಿಮ್ಮ ಕಾರ್ಯಕ್ಷೇತ್ರ ವಿಶಾಲವಾಗುತ್ತದೆ, ಆರ್ಥಿಕ ಸ್ಥಿತಿಯು ಉತ್ತಮವಾಗುತ್ತದೆ. ಇದಕ್ಕಾಗಿ ಅಗತ್ಯ ಜ್ಞಾನ, ವಿವಿಧ ಭಾಷೆಗಳಲ್ಲಿ ಸಂವಹನ ಸಾಮರ್ಥ್ಯ, ಸಾಂಸ್ಕೃತಿಕ ತಿಳಿವಳಿಕೆ, ಅನುವಾದ ಮತ್ತು ಸಂಶೋಧನಾ ಗುಣಗಳನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದು ಕಿವಿಮಾತು ಹೇಳಿದರು.

ಈ ದಿಕ್ಕಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯ ಮಾಜಿ ಸಚಿವರಾಗಿದ್ದ ಡಾ. ಸುಧಾಕರ್ ಅವರು ಶಾಂತ ಶಿಕ್ಷಣ ಸಂಸ್ಥೆಯಲ್ಲಿ ಆರೋಗ್ಯ ಶಿಕ್ಷಣ ಕೋರ್ಸುಗಳನ್ನು ಸ್ಥಾಪಿಸಿರುವುದು ಅಭಿನಂದನೀಯ ಎಂದು ಪ್ರಶಂಶಿಸಿದಲ್ಲದೇ, ಕರ್ನಾಟಕದಲ್ಲಿ ವಿವಿಧ ರೀತಿಯ ನರ್ಸಿಂಗ್ ಸಂಬಂಧಿ ಸುಮಾರು 1500 ಕಾಲೇಜುಗಳಿದ್ದು ದೊಡ್ಡ ಪ್ರಮಾಣದ ಹೆಣ್ಣು ಮಕ್ಕಳು ಆರೋಗ್ಯ ಸೇವಾ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ನರ್ಸಿಂಗ್ ಮತ್ತು ಇತರ ವೈದ್ಯಕೀಯ ಕೋರ್ಸ್ ಗಳನ್ನು ನಮ್ಮ ಸರ್ಕಾರ ಸಂಖ್ಯೆ ಮತ್ತು ಗುಣಮಟ್ಟ ವಿಸ್ತರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯಪಟ್ಟರು.

ಶಾಂತ ಶಿಕ್ಷಣ ಸಂಸ್ಥೆಗಳ ಧರ್ಮದರ್ಶಿ ಡಾ. ಪ್ರೀತಿ ಸುಧಾಕರ್ ಮಾತನಾಡಿ. ಇಂದು ಬೆಳಗುವ ಪ್ರತಿಯೊಂದು ದೀಪವು ನಿಮ್ಮ ಶುಶ್ರೂಷಕ ವೃತ್ತಿಗೆ ದಾರಿ ದೀಪವಾಗಲಿ. ಇಂದು ಹೊತ್ತಿಸುವ ದೀಪವು ತನ್ನ ಬೆಳಕಿನಿಂದ ನಿಮ್ಮಲ್ಲಿ ಜಾಗೃತಿ, ಉತ್ಸಾಹ, ಸ್ಫೂರ್ತಿ ಹಾಗೂ ವಿವೇಕವನ್ನು ಅನಾವರಣಗೊಳಿಸಲಿ, ಇಂದು ಹಲವು ಆರೋಗ್ಯ ಸೇವೆಗಳು ಸರ್ಕಾರಿ ಹಾಗೂ ಖಾಸಗಿ ವ್ಯವಸ್ಥೆಯಲ್ಲಿ ಲಭ್ಯವಿದ್ದು, ವ್ಯಾಪಕ ಸ್ವರೂಪದ ಈ ವ್ಯವಸ್ಥೆಯಲ್ಲಿ ಸೌಲಭ್ಯಗಳು, ಪರಿಣಿತಿ ಹಾಗೂ ಚಿಕಿತ್ಸೆಗಳು ಚದುರಿ ಹೋಗದೆ ಸಮನ್ವಯಗೊಂಡಾಗ ಆರೋಗ್ಯ ವಿಜ್ಞಾನ ಶಿಕ್ಷಣ, ವೈದ್ಯಕೀಯ ಶಿಕ್ಷಣ ಮತ್ತು ಅರೆವೈದ್ಯಕೀಯ ಶಿಕ್ಷಣ ಕ್ಷೇತ್ರಗಳು ಇನ್ನು ಹೆಚ್ಚು ಉದಾತ್ತವಾಗಿ ಬೆಳೆದು ಸಮಾಜದ ಹಾಗೂ ದೇಶದ ಆರೋಗ್ಯ ಸೂಚ್ಯಂಕಗಳನ್ನು ಬಲಪಡಿಸಿ ಸುಸ್ಥಿರಗೊಳಿಸುತ್ತವೆ. ಬ್ರಿಟಿಷ್ ಸಮಾಜ ಸೇವಕಿ ಫ್ಲಾರೆನ್ಸ್ ನೈಟಿಂಗೇಲ್ ಅವರು ಕ್ರಿಮಿಯ ಯುದ್ಧದ ಸಂದರ್ಭದಲ್ಲಿ ರೋಗಿಗಳ ಸಂಕಷ್ಟಗಳನ್ನು ನೋಡಿ ಅವರಿಗೆ ನರ್ಸಿಂಗ್ ಸೌಲಭ್ಯಗಳನ್ನು ಕಲ್ಪಿಸಲು ಆಸ್ಪತ್ರೆ ಮತ್ತು ನರ್ಸಿಂಗ್ ಕೇಂದ್ರಗಳನ್ನು ಸ್ಥಾಪಿಸಿ ಸೇವೆ ಸಲ್ಲಿಸಿದ್ದಾರೆ.

ಜಗತ್ತಿನಾದ್ಯಂತ ನರ್ಸಿಂಗ್ ಶಿಕ್ಷಣ ತರಬೇತಿಯಲ್ಲಿ ಪರಿಣಿತಿ ಹಾಗೂ ನೈತಿಕತೆಯನ್ನು ಹೆಚ್ಚಿಸುವ ಕಾರ್ಯ ಮಾಡಿದ್ದು ಅವರಿಗೆ ನಾವು ಋಣಿಯಾಗಿರಬೇಕು. ಆರೋಗ್ಯ ಸೇವಾ ಶಿಕ್ಷಣ ಹಾಗೂ ಚಿಕಿತ್ಸೆಗಳ ಕೋರ್ಸುಗಳು ಅಕಾಡೆಮಿಕ್ ಪರಿಣಿತಿಗೆ ಮಾತ್ರ ಸೀಮಿತವಾಗದೆ ವೈದ್ಯಕೀಯ ಶಿಕ್ಷಣ, ಚಿಕಿತ್ಸೆ ಹಾಗೂ ನರ್ಸಿಂಗ್ ಆರೈಕೆಯಲ್ಲಿ ದೊಡ್ಡ ಬದಲಾವಣೆ ತರಲು, ತನ್ಮೂಲಕ ಜನತೆಯಲ್ಲಿ ಆರೋಗ್ಯದ ಹವ್ಯಾಸಗಳು ಮತ್ತು ಜೀವನ ಕ್ರಮವನ್ನು ಬದಲಾಯಿಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದಲ್ಲಿ ಔಷಧಿ ವಿಜ್ಞಾನ ಶಿಕ್ಷಣ, ನರ್ಸಿಂಗ್, ಅಲೈಡ್ ಹೆಲ್ತ್ ವಿಜ್ಞಾನಗಳ ವಿದ್ಯಾರ್ಥಿಗಳಿಗೆ ಕ್ರಮವಾಗಿ ಫಾರ್ಮಸಿ ಸಂಸ್ಥೆಯ ಪ್ರಾಂಶುಪಾಲ ಡಾ. ಗೋಪಿನಾಥ್ ರಾಜೀವ್ ಗಾಂಧಿ ಆರೋಗ್ಯ ಶಿಕ್ಷಣ ವಿಶ್ವವಿದ್ಯಾಲಯದ ಅಕಾಡೆಮಿ ಕೌನ್ಸಿಲ್ ಸದಸ್ಯ ಡಾ. ಪ್ರೀತಮ್ ಗೌಡ ಹಾಗೂ ಫಿಸಿಯೋಥೆರಪಿ ಕೋರ್ಸಿನ ವಿದ್ಯಾರ್ಥಿಗಳಿಗೆ

ಡಾ. ಆಯಿಷಾ ಪ್ರಮಾಣವಚನ ಬೋಧಿಸಿದರು. ವಿವಿಧ ಕೋರ್ಸ್ ಗಳಲ್ಲಿ ಹೆಚ್ಚು ಅಂಕ ಗಳಿಸಿರುವ ಹಾಗೂ ವಿವಿಧ ಕ್ಲಿನಿಕಲ್ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಸಂಸ್ಥೆಯಿಂದ ಉಡುಗೊರೆಗಳನ್ನು ನೀಡಿ ಶುಭ ಹಾರೈಸಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಡೀನ್ ಹಾಗೂ ಪ್ರಾಂಶುಪಾಲ ಡಾ. ನವೀನ್ ಸೈಮನ್, ಸಂಸ್ಥೆಯ ಅಧ್ಯಕ್ಷ ಪಿ.ಎನ್. ಕೇಶವ ರೆಡ್ಡಿ, ಶಾಂತ ಸಂಸ್ಥೆಗಳ ನಿರ್ದೇಶಕ ಡಾ. ಕೋಡಿ ರಂಗಪ್ಪ, ಫಾರ್ಮಸಿ ಶಿಕ್ಷಣ ಸಂಸ್ಥೆಯ ಡಾ. ಗೋಪಿನಾಥ್, ಡಯಾನ, ಪ್ರೊ. ನರೇಶ್, ಪ್ರೊ. ವಿಜಯಲಕ್ಷ್ಮಿ, ಆಕಾಂಕ್ಷ, ಅನುಷ್, ಗುಣಶೀಲ ವಸುಧಾ ಯಶಸ್ವಿನಿ, ಸೌಮ್ಯ, ಬೃಂದಾ, ಬಿಂದು ಸಚಿನ್, ಪವನ್, ಮುದಸೀರ್ ಕಿಸಾನ್, ಓಎಸ್ ಹಾಗೂ ವಿವಿಧ ಆರೋಗ್ಯ ಶಿಕ್ಷಣ ಕೋರ್ಸುಗಳ ವಿದ್ಯಾರ್ಥಿಗಳು ಇದ್ದರು.

ಸಿಕೆಬಿ-1 ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತ ಆರೋಗ್ಯ ವಿಜ್ಞಾನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ದೀಪ ಬೆಳಗುವಿಕೆ ಮತ್ತು ಪ್ರಮಾಣ ವಚನ ಬೋಧನೆ ಹಾಗೂ ಶ್ವೇತ ಕೋಟ್ ಧರಿಸುವ ಸಮಾರಂಭವನ್ನು ಡಾ. ಶ್ರೀಕಾಂತ್ ಪುಲ್ಲಾರಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯುತ್ ಖಾಸಗೀಕರಣ ನೇಕಾರರಿಗೆ ಕಂಟಕ
ಕೋಮುವಾದಕ್ಕೆ ಬಳಕೆಯಾಗುವ ಭಕ್ತಿ ಅಪ್ರಸ್ತುತ: ಕಾ.ತ.ಚಿಕ್ಕಣ್ಣ