ಬೀಳಿನ ಪುಡಾಯಿಗೆ ಜೀವ ತುಂಬುವ ಸಹೋದರರು

KannadaprabhaNewsNetwork |  
Published : Sep 01, 2025, 01:04 AM IST
ಶಂಕರ  | Kannada Prabha

ಸಾರಾಂಶ

ಎಳ್ಳಾರೆಯ ಶಂಕರ, ಶೇಖರ ಮತ್ತು ಭಾಸ್ಕರ ನಿರ್ಮಿಸುವ ಈ ಪುಡಾಯಿಗಳು ಕೇವಲ ಗೊಬ್ಬರದ ಬುಟ್ಟಿಗಳಲ್ಲ, ಅದು ತುಳುನಾಡಿನ ಗ್ರಾಮೀಣ ಜೀವನ ಶೈಲಿಯ ಪ್ರತೀಕವಾಗಿ ಉಳಿದಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ತುಳುನಾಡಿನ ಕರಕುಶಲ ವಸ್ತುಗಳು ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ, ಅದರಲ್ಲೂ ಎಲ್ಲೆಲ್ಲೂ ಪ್ಲಾಸ್ಟಿಕ್‌ಮಯವಾಗುತ್ತಿರುವ ಈ ಸಂದರ್ಭದಲ್ಲಿ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಚೆನ್ನುಬೆಟ್ಟಿನ ಪುಟ್ಟ ಹಳ್ಳಿಯ ಮೂವರು ಸಹೋದರರು ಹಿಂದಿನ ಕಾಲದ ಕೌಶಲ್ಯವನ್ನು ಮುಂದುರಿಸಿ ಬೀಳಿನ ಪುಡಾಯಿಗಳನ್ನು ನಿರ್ಮಿಸುವ ಮೂಲಕ ಜೀವನ ನಡೆಸುವ ಜೊತೆಗೆ ತುಳುನಾಡಿನ ಜನಪದ ಪರಂಪರೆಯನ್ನು ಉಳಿಸಿಕೊಂಡು ಹೋಗುತ್ತಿದ್ದಾರೆ.

ಎಳ್ಳಾರೆಯ ಶಂಕರ, ಶೇಖರ ಮತ್ತು ಭಾಸ್ಕರ ನಿರ್ಮಿಸುವ ಈ ಪುಡಾಯಿಗಳು ಕೇವಲ ಗೊಬ್ಬರದ ಬುಟ್ಟಿಗಳಲ್ಲ, ಅದು ತುಳುನಾಡಿನ ಗ್ರಾಮೀಣ ಜೀವನ ಶೈಲಿಯ ಪ್ರತೀಕವಾಗಿ ಉಳಿದಿದೆ.

ದಿನ ನಿತ್ಯದ ಕಾಯಕ:

ಬೆಳಗಿನ ಜಾವವೇ ಈ ಸಹೋದರರು ಕಾಡಿಗೆ ಪಯಣಿಸುತ್ತಾರೆ. ಅಲ್ಲಿ ಬಿದ್ದ ಬೀಳುಗಳನ್ನು ಎತ್ತಿ ಆಯ್ದು ತರುತ್ತಾರೆ. ಮಧ್ಯಾಹ್ನದ ಬಳಿಕ, ತಂದ ಬೀಳುಗಳನ್ನು ಹದಗೊಳಿಸಿ, ಸುಂದರ ಪುಡಾಯಿಗಳನ್ನು ತಯಾರಿಸುತ್ತಾರೆ. ಈ ಕಾರ್ಯ ಸಾಂಪ್ರದಾಯಿಕ, ಹಸ್ತಕಲೆಯ ಧಾಟಿಯಲ್ಲಿಯೇ ಸಾಗುತ್ತದೆ. ನಂತರ ಈ ಪುಡಾಯಿಗಳನ್ನು ಗ್ರಾಮಗಳಲ್ಲಿ ಮಾರುವುದು ಇವರ ದೈನಂದಿನ ರೂಢಿ.

ಮಳೆ ಇರಲಿ, ಬಿಸಿಲು ಇರಲಿ ಇವರ ಶ್ರಮ ಮಾತ್ರ ನಿಲ್ಲದು. ಪ್ರಕೃತಿಯ ಸವಾಲುಗಳನ್ನು ಎದುರಿಸುತ್ತಾ ಅವರು ತಮ್ಮ ಕೌಶಲ್ಯಭರಿತ ಕೆಲಸವನ್ನು ನಿರಂತರವಾಗಿ ಮುಂದುವರಿಸುತ್ತಿದ್ದಾರೆ. ಕೋಲದ ಋತುವಿನಲ್ಲಿ ಕೋಲಕ್ಕೆ ಬಣ್ಣ ಹಚ್ಚುತ್ತಾರೆ.

ಬೀಳಿನ ಪುಡಾಯಿಗೆ ಭಾರೀ ಬೇಡಿಕೆ:

ತುಳುನಾಡಿನಲ್ಲಿ ಮಳೆಗಾಲದಲ್ಲಿ ಈ ಪುಡಾಯಿಗಳಿಗೆ ಅಪಾರ ಬೇಡಿಕೆ ಇದೆ. ಗೊಬ್ಬರವನ್ನು ಹೊರಲು, ಹಸುಗಳಿಗೆ ಹುಲ್ಲು ತುಂಬಿಸಿ ತರಲು ಈ ಪುಡಾಯಿಗಳ ಬಳಕೆ ಹೆಚ್ಚು. ಕೆಲವು ಮನೆಗಳಲ್ಲಿ, ಹೋಂ ಸ್ಟೇಗಳಲ್ಲಿ ಅಲಂಕಾರಿಕ ವಸ್ತುಗಳಾಗಿ ಪುಡಾಯಿಗಳನ್ನು ಇಡುತ್ತಿದ್ದಾರೆ. ಆದರೆ ಇತ್ತೀಚೆಗೆ ಈ ಕಲೆ ಮಾಯವಾಗುತ್ತಿರುವುದು ನೋವಿನ ಸಂಗತಿ.ಯುವ ಸಮುದಾಯ ಈ ಕಾಯಕದಲ್ಲಿ ಆಸಕ್ತಿ ತೋರಿಸುತಿಲ್ಲ. ಪರಿಣಾಮ ತುಳುನಾಡಿನ ಈ ಕರಕುಶಲ ವೃತ್ತಿ ಅಳಿವಿನಂಚಿಗೆ ಸಾಗುತ್ತಿದೆ.

ಎಳ್ಳಾರೆಯ ಈ ಸಹೋದರರ ಹೋರಾಟ ಕೇವಲ ಬದುಕಿಗಾಗಿ ಅಲ್ಲ; ಅದು ತುಳುನಾಡಿನ ಜನಪದ ಪರಂಪರೆಯ ಉಳಿವಿಗಾಗಿ ಕೂಡ.--------------ಕಳೆದ ಮೂವತ್ತು ವರ್ಷಗಳಿಂದ ಪುಡಾಯಿ, ಗೊರಬು, ಗೂರಿಗಳನ್ನು ತಯಾರಿಸುತಿದ್ದೇವೆ. ದಿನಕ್ಕೆ ಆರು ಪುಡಾಯಿ ತಯಾರಿಸಿ ಮನೆಗೆ ಬರುತ್ತೇವೆ. ಕಾಡಿನಿಂದ ಬೀಳು ತರಿಸಿ ಪುಡಾಯಿ ತಯಾರಿಸಬೇಕು. ದೊಂಡೆರಂಗಡಿ, ಕಡ್ತಲ, ಪೆರ್ಡೂರು ಗ್ರಾಮಗಳಲ್ಲಿ ಮಾರಾಟ ಮಾಡುತ್ತೇವೆ. ಇತ್ತೀಚೆಗೆ ರಸ್ತೆ ಬದಿಯಲ್ಲೇ ಪುಡಾಯಿ ತಯಾರಿಸುವ ಕಾರಣ ನೇರವಾಗಿ ಗ್ರಾಹಕರಿಗೆ ನೀಡಲು ಸುಲಭವಾಗುತ್ತದೆ.

। ಶಂಕರ, ಪುಡಾಯಿ ತಯಾರಕರು

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ