ತುಳು ಭಾಷೆಯ ಉಳಿವಿಗಾಗಿ ತುಳು ಕಲಿಸುವ ಪ್ರಯತ್ನವಾಗಲಿ: ರೆ. ವಿಜಯ ಹಾರ್ವಿನ್
ಕನ್ನಡಪ್ರಭವಾರ್ತೆ ಪುತ್ತೂರುಆಗಸ್ಟ್ ಮ್ಯಾನರ್, ಕಿಟ್ಟೆಲ್, ಕ್ರ‍್ಯಾಮರ್ ಮೊದಲಾದವರು ಪಾಶ್ಚಾತ್ಯ ದೇಶದವರಾದರೂ ತುಳುವಿಗಾಗಿ ಶ್ರಮಿಸಿದ ರೀತಿ ಅಮೋಘವಾಗಿದೆ. ಆ ಸಾಧನೆ ನಮ್ಮ ಮಕ್ಕಳಿಂದ ಆಗಬೇಕು. ತುಳು ಭಾಷೆಯ ಉಳಿವಿಗೆ ಮಕ್ಕಳಿಗೆ ತುಳು ಕಲಿಸುವ ಪ್ರಯತ್ನ ಆಗಬೇಕು ಎಂದು ರೆ. ವಿಜಯ್ ಹಾರ್ವಿನ್ ಅಭಿಪ್ರಾಯಪಟ್ಟರು. ತುಳು ಭಾಷೆಯ ಉಳಿವಿಗಾಗಿ, ತುಳುವಿನ ಅಸ್ಮಿತೆಗಾಗಿ ಹುಟ್ಟಿಕೊಂಡ ತುಳು ಅಪ್ಪೆಕೂಟ ಪುತ್ತೂರು ಮೂರನೇ ವರ್ಷಕ್ಕೆ ಪಾದಾರ್ಪಣೆ ಗೈಯುತ್ತಿರುವ ಸಂದರ್ಭದಲ್ಲಿ ಪುತ್ತೂರಿನ ಸುದಾನ ವಸತಿಯುತ ಶಾಲೆಯ ಸುದಾನ ಲಹರಿ ಸಾಹಿತ್ಯ ಸಂಘದ ಸಹಭಾಗಿತ್ವದೊಂದಿಗೆ ಎಡ್ವರ್ಡ್ ಸಭಾಂಗಣದಲ್ಲಿ ಸೋಮವಾರ ನಡೆದ ಪದಗ್ರಹಣ ಸಮಾರಂಭ ಮತ್ತು ತುಳು ಲಿಪಿ ಕಾರ್ಯಾಗಾರವನ್ನು ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ತುಳು ಅಪ್ಪೆ ಕೂಟದ ಅಧ್ಯಕ್ಷೆ ಹರಿಣಾಕ್ಷಿ ಜೆ ಶೆಟ್ಟಿ ಮಾತನಾಡುತ್ತಾ, ತುಳು ಅಪ್ಪೆ ಕೂಟವು ಪ್ರಪಂಚದ ಪ್ರಥಮ ಮಹಿಳಾ ತುಳುಕೂಟವಾಗಿದ್ದು, ಇದರಿಂದ ತುಳು ಉಳಿಸುವ ನಿರಂತರ ಪ್ರಯತ್ನ ನಡೆಯುತ್ತಿದ್ದು, ತುಳು ಕವಿಗೋಷ್ಠಿ, ತಾಳಮದ್ದಳೆ ಕಾರ್ಯಕ್ರಮಗಳು ನಿರಂತರ ನಡೆಯುತ್ತಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತುಳು ಅಪ್ಪೆಕೂಟದ ವತಿಯಿಂದ ವಿಜಯ್ ಹಾರ್ವಿನ್ ಇವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ತುಳು ಅಪ್ಪೆಕೂಟದ ಕಾರ್ಯದರ್ಶಿ ಭಾರತಿ ರೈ ಕೌಡಿಚ್ಚಾರು, ಗೌರವಾಧ್ಯಕ್ಷರಾದ ಪ್ರೇಮಲತಾ ರಾವ್, ಸುದಾನ ಶಾಲೆಯ ಉಪ ಮುಖ್ಯ ಶಿಕ್ಷಕಿ ಲವೀನಾ ನವೀನ್ ಹನ್ಸ್, ಲಹರಿ ಸಾಹಿತ್ಯ ಸಂಘದ ನಿರ್ದೇಶಕಿ ಅನಿತಾ, ಶಿಕ್ಷಕಿ ಹಾಗೂ ಅಪ್ಪೆಕೂಟದ ಗೌರವ ಸಲಹೆಗಾರರಾದ ಕವಿತಾ ಅಡೂರು ಉಪಸ್ಥಿತರಿದ್ದರು.ತುಳು ಅಪ್ಪೆಕೂಟದ ಸಂಚಾಲಕಿಯಾದ ಶ್ರೀಶಾವಾಸವಿ ತುಳುನಾಡ್ ಕಾರ್ಯಕ್ರಮ ನಿರೂಪಿಸಿ, ಮಕ್ಕಳಿಗೆ ತುಳು ಲಿಪಿ ಕಾರ್ಯಾಗಾರ ನಡೆಸಿಕೊಟ್ಟರು. ಕವಿತಾ ಅಡೂರು ಸ್ವಾಗತಿಸಿದರು. ಭಾರತಿ ರೈ ಕೌಡಿಚ್ಚಾರು ವಂದಿಸಿದರು.